ಪಾಟ್ನಾ: ಪರೀಕ್ಷೆಗೆ ಹೋಗುವಾಗ ಅಪಘಾತ ಸಂಭವಿಸಿದ್ದು, ಕೊನೆಗೆ ಕೈಯಲ್ಲಿ ಡ್ರಿಪ್ಸ್ ಹಾಕಿಕೊಂಡೆ ವಿದ್ಯಾರ್ಥಿನಿಯೊಬ್ಬರು SSLC ಪರೀಕ್ಷೆಯನ್ನು ಬರೆದಿದ್ದಾಳೆ.
ಶ್ವೇತಾ ಕುಮಾರಿ ಪರೀಕ್ಷೆ ಬರೆದ ಸಾಹಸಿ ವಿದ್ಯಾರ್ಥಿನಿ. ಈಕೆ ಬಿಹಾರದ ಶಾರೈರಾಂಜನ್ ಪೊಲೀಸ್ ಠಾಣೆ ಪ್ರದೇಶದ ಅಡಿಯಲ್ಲಿ ಬರುವ ಗುರ್ಮ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.
ಬಿಹಾರದಲ್ಲಿ 10ನೇ ತರಗತಿಯ ಬೋರ್ಡ್ ಪರೀಕ್ಷೆ ನಡೆಯುತ್ತಿದೆ. ಶ್ವೇತಾ ಕುಮಾರಿ ಶನಿವಾರ ಮೋಹನ್ಪುರದಲ್ಲಿರುವ ತನ್ನ ಶಾಲೆಗೆ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದಳು. ಈ ಸಂದರ್ಭದಲ್ಲಿ ಬಿಹಾರದ ಸಮಸ್ತಿಪುರದಲ್ಲಿ ವೇಗವಾಗಿ ಬೋಲೆರೊ ಬಂದು ಡಿಕ್ಕಿ ಹೊಡೆದಿದೆ. ಇದರಿಂದ ಶ್ವೇತಾ ಕುಮಾರಿ ತೀವ್ರವಾಗಿ ಗಾಯಗೊಂಡಿದ್ದಾಳೆ.
ಅಪಘಾತದಲ್ಲಿ ಗಾಯಗೊಂಡ ಶ್ವೇತಾ ಕುಮಾರಿಯನ್ನು ಸಹೋದರ ಮತ್ತು ಇತರರ ಸಹಾಯದಿಂದ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದರೆ ಆಕೆ ನಾನು ಪರೀಕ್ಷೆ ಬರೆಯಲು ಹೋಗಬೇಕು ಎಂದು ಹೇಳಿದ್ದಾಳೆ. ಅಷ್ಟೇ ಅಲ್ಲದೇ ತನ್ನ ಸಹೋದರನ ಬಳಿ ನಾನು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡು ಎಂದು ಮನವಿ ಮಾಡಿಕೊಂಡಿದ್ದಳು. ಕೊನೆಗೆ ಆಕೆಯ ಬೇಡಿಕೆಯನ್ನು ಕುಟುಂಬವು ಸಹ ಒಪ್ಪಿಕೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಸ್ಥಿತಿಯಲ್ಲಿಯೇ ಅಂಬುಲೆನ್ಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ.
ಪರೀಕ್ಷೆ ಬರೆಯುವಾಗ ಆಕೆಗೆ ಏನಾದರೂ ತೊಂದರೆ ಯಾಗಬಹುದು ಎಂದು ಮುಂಜಾಗೃತ ಕ್ರಮವಾಗಿ ಆಕೆಗೆ ಸಹಾಯ ಮಾಡಲು ಮೂವರು ಮಹಿಳೆಯರನ್ನು ಕೂಡ ನಿಯೋಜಿಸಲಾಗಿತ್ತು. ಪರೀಕ್ಷಾ ಕೇಂದ್ರದಲ್ಲಿ ಒಂದು ಕಾಲಿಗೆ ಬ್ಯಾಂಡೇಜ್ ಮತ್ತು ಒಂದು ಕೈಯಲ್ಲಿ ಡ್ರಿಪ್ಸ್ ಹಾಕಿಕೊಂಡೆ 10 ನೇ ಬೋರ್ಡ್ ಪರೀಕ್ಷೆಯನ್ನು ಬರೆದಿದ್ದಾಳೆ.