KarnatakaLatestLeading NewsMain PostSandalwood

ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ನಾಡಿನ ಮುಖ್ಯಮಂತ್ರಿ ಆಗಲಿ: ಹಂಸಲೇಖ

Advertisements

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ನನ್ನ ದೇಸಿ ಶಾಲೆಗೆ ಸಹಾಯ ಮಾಡಿದ್ದರು. ಸಿದ್ದರಾಮಯ್ಯ ಮತ್ತೊಮ್ಮೆ ನಾಡಿನ ಮುಖ್ಯಮಂತ್ರಿ ಆಗಲಿ. ಧರ್ಮೋಕ್ರಸಿಯನ್ನು ಬದಿಗೆ ಸರಿಸಿ ಡೆಮಾಕ್ರಸಿಯನ್ನು ಉಳಿಸಲಿ ಎಂದು ನಾದಬ್ರಹ್ಮ ಹಂಸಲೇಖ ಅಭಿಪ್ರಾಯಪಟ್ಟಿದ್ದಾರೆ.

ಎಸ್.ಜಿ.ಸಿದ್ದರಾಮಯ್ಯ ಆತ್ಮ ಕಥನ ‘ಯರೆಬೇವು’ ಪುಸ್ತಕ ಬಿಡುಗಡೆ ಹಾಗೂ ಡಾ.ಎಂ ಎಂ ಕಲಬುರ್ಗಿ ಪ್ರಶಸ್ತಿ ಪ್ರಧಾನ ಸಮಾರಂಭ ಗಾಂಧಿ ಭವನದಲ್ಲಿ ನಡೆಯಿತು. ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮೊದಲ ಬಾರಿ ನಾನು ಬರೆದುಕೊಂಡು ಭಾಷಣ ಮಾಡುತ್ತೀದ್ದೇನೆ. ನುಡಿದರೆ ಮುತ್ತಿನ ಹಾರದಂತಿರಬೇಕು ಅಂತ ಮಾತಾಡ್ತೇವೆ ಆದರೆ ಒಳಗಡೆಯಿಂದ ಅದು ಸ್ಪಟಿಕದ ಸಲಾಖೆಯಂತೆ ಇರತ್ತೆ ನಮ್ಮ ಮಾತು. ಬರೆದುಕೊಳ್ಳದೆ ಆಗುವ ಅಪಾಯ ತಡೆಯಲು ಇಲ್ಲಿ ಬರೆದು ಕೊಂಡು ಬಂದು ಮಾತನಾಡುತ್ತಿದ್ದೇನೆ ಎಂದರು. ಇದನ್ನೂ ಓದಿ: ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ?: ಕ್ಷಮೆ ಕೇಳಿದ ಹಂಸಲೇಖ

ಇತ್ತೀಚೆಗೆ ಒಂದು ಸಮಸ್ಯೆ ಆಗಿ ನನಗೆ ಗೊತ್ತಿಲ್ಲದ ಸಮುದಾಯಗಳೆಲ್ಲ ನನ್ನ ಜೊತೆಗೆ ನಿಂತರು. ಹೀಗೆಲ್ಲ ಆಗತ್ತೆ ಅಂತ ನನಗೆ ಗೊತ್ತಿರಲಿಲ್ಲ ಆ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತವರು ಎಸ್.ಜಿ ಸಿದ್ದರಾಮಯ್ಯ, ನಾಗರಾಜ ಮೂರ್ತಿ ಯಾರಿಗೂ ಹೆದರಬೇಡಿ ಅಂತ ಬೆಂಬಲ ನೀಡಿದ್ದಾರೆ. ನಾನು ಭಯ ಪಡುವವನು ಅಲ್ಲ, ಮಾಗಡಿ ರೋಡ್‍ನಲ್ಲಿ ದೊಡ್ಡ ದೊಡ್ಡ ಪೋಲಿ ಆಟಗಳನ್ನು ಆಡಿ ಬಂದವನು ಅದಕ್ಕೊಂದು ಚರಿತ್ರೆಯೇ ಇದೆ. ಈಗ ನನಗೆ ಎಪ್ಪತ್ತು, ತಿನ್ನೋದು ಒಪ್ಪತ್ತು, ಎರಡು ಹೊತ್ತು ಬಸವನ ಹಸಿವು ಪ್ರೋಟೀನ್ ಕೊಡುತ್ತೆ. ದೇಸಿ ಸಮುದಾಯದ ಕರುಳಿನ ಕಥೆಯಾಗಿದೆ ಯರೆಬೇವು ಪುಸ್ತಕ. ನಮ್ಮದೂ ಕೂಡ ಅದೇ ರೀತಿಯ ಕರುಳಿನ ಕಥೆ ಎಂದು ಹಿಂದಿನ ಘಟನೆಯನ್ನು ನೆನಪಿಸಿಕೊಂಡರು.

ಸ್ವಾಗತ ಭಾಷಣದಲ್ಲಿಯೇ ಹಂಸಲೇಖ ಹೇಳಿಕೆ ವಿವಾದವನ್ನು ಸಮರ್ಥಿಸಿದ ಚಿಂತಕ ಕೆ.ವಿ.ನಾಗರಾಜ್, ಉಡುಪಿ ಮಠದಲ್ಲಿ ಅವರ ತಿಂದ ಎಂಜಲು ಮೇಲೆ ನಾವು ಉರಳು ಸೇವೆ ಮಾಡ್ತಿದ್ವಿ. ಊಟದ ಸ್ವಾತಂತ್ರದ ಬಗ್ಗೆ ಹಂಸಲೇಖ ಧ್ವನಿ ಎತ್ತಿದ್ದಕ್ಕೆ ವೈದಿಕ ಶಾಹಿಗಳು ಅವರ ಮೇಲೆ ಎಗರಿಬಿದ್ದರು. ನೀವು ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ನಾವು ನಿಮ್ಮ ಜೊತೆ ಇದ್ದೇವೆ. ಕವಿ ಮರಳುಸಿದ್ದಪ್ಪಗೆ ಹಲವು ಬಾರಿ ಈ ವೈದಿಕ ಶಾಹಿ, ಬ್ರಾಹ್ಮಣ ಶಾಹಿ ಇಂದ ಬೆದರಿಕೆ ಕರೆ ಬಂದಿತ್ತು. ಸಾಯಿಸ್ತೀವಿ, ಕೊಂದಹಾಕ್ತೀವಿ ಎಂದು ಬೆದರಿಕೆ ಹಾಕ್ತಿದ್ರು ಇದ್ಯಾವುದಕ್ಕೂ ಅವರು ತಲೆ ಕೆಡಿಸಿಕೊಳ್ಳಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಯಾವುದೇ ಧರ್ಮ, ಸಮಾಜ ಜಾತಿಯನ್ನು ನಿಂದಿಸೋ ಉದ್ದೇಶ ನನ್ನದಲ್ಲ ತಪ್ಪಾಗಿದೆ: ಹಂಸಲೇಖ

ಸಿದ್ದರಾಮಯ್ಯ ಮಾತನಾಡಿ, ಸಮಾಜದಲ್ಲಿ ಶಿಕ್ಷಣದ ಜೊತೆಗೆ ವೈಚಾರಿಕತೆ ಬೆಳೆಯಬೇಕು. ಪ್ರತಿಯೊಂದನ್ನು ಪ್ರಶ್ನೆ ಮತ್ತು ವಿಶ್ಲೇಷಣೆ ಮಾಡಬೇಕು. ಆಗ ಮಾತ್ರ ಜಡ್ಡುಗಟ್ಟಿರುವ ಸಮಾಜದಲ್ಲಿ ಉತ್ತಮ ಪ್ರಜೆಗಳು ಆಗುವುದಕ್ಕೆ ಸಾಧ್ಯವಾಗುತ್ತೆ. ಶಿಕ್ಷಣ 16% ರಿಂದ 78% ಬಂದು ನಿಂತಿದೆ. ಆದ್ರೆ ಅನಿಷ್ಟ ಪದ್ದತಿಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಗಾಂಧಿ ಮತ್ತು ಬಸವಣ್ಣ, ಬುದ್ದನ ತತ್ವ ಪಾಲನೆ ಮಾಡುವಲ್ಲಿ ವಿಫಲವಾಗಿದ್ದೇವೆ. ನೇರವಾಗಿ ನಿಷ್ಠುರವಾಗಿ ಸತ್ಯ ಹೇಳುವುದೇ ಕಷ್ಟವಾಗಿದೆ. ಇಂದು ಅಭಿವ್ಯಕ್ತಿ ಸ್ವಾತಂತ್ರ ಬಹಳ ಕಷ್ಟದಲ್ಲಿದೆ. ವಕ್ರ ಕಣ್ಣಿನಿಂದ ನೋಡುವವರು ಪ್ರಶ್ನೆ ಮಾಡೋರನ್ನು ಭಯೋತ್ಪಾದಕರು ಎಂದು ಬಿಂಬಿಸುತ್ತಾರೆ ಇದನ್ನು ವಿಚಾರವಂತವರು ಖಂಡಿಸಬೇಕು ಎಂದರು.

ಎಂ.ಎಂ ಕಲ್ಬುರ್ಗಿಯವರು ಏನು ತಪ್ಪು ಮಾಡಿದ್ರು. ಸತ್ಯ ಹೇಳುವ ಪ್ರಯತ್ನ ಮಾಡಿದ್ರು ಕೋಮುವಾದಿ ಭಾವನೆ ಇರೋರು ಕಲ್ಬುರ್ಗಿಯವರನ್ನು ಕೊಂದರು. ಗಾಂಧಿಜೀಯವರನ್ನು ಸಹ ಕೊಂದರು. ಇಂತಹ ಘಟನೆ ಖಂಡಿಸಬೇಕು. ಆ ನಿಟ್ಟಿನಲ್ಲಿ ನಾವು ಯೋಚನೆ ಮಾಡಬೇಕು. ಸತ್ಯ ಹೇಳುವುದಕ್ಕೆ ಹೆದರಿಕೊಳ್ಳುವ ಅಗತ್ಯ ಇಲ್ಲ ಹಂಸಲೇಖ ಏನು ಮಾಹ ಅಪರಾಧ ಮಾಡಿದ್ರಾ. ಒಂದು ಹೇಳಿಕೆ ಕೊಟ್ರು. ಅದಕ್ಕೆ ಎಲ್ಲರೂ ತಿರುಗಿಬಿದ್ರು. ಕ್ರಿಮಿನಲ್ ಕೇಸು ದಾಖಲಿಸಿದರು. ಐಪಿಸಿ ಸೆಕ್ಷನ್ 295 ಹೇಳೋದಕ್ಕೂ ಇವರ ಮಾತಿಗೂ ಸಂಬಂಧವೇ ಇಲ್ಲ ಎಂದು ಸಮರ್ಥಿಸಿಕೊಂಡರು.  ಇದನ್ನೂ ಓದಿ: ಅಂಕಲ್ ಅಂದಿದ್ದೆ ತಪ್ಪಾಯ್ತು – ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ಅಂಗಡಿ ಮಾಲೀಕ

ಮತಾಂತರ ವಿರೋಧ ಮಾಡಿದ್ರೆ ಧರ್ಮ ವಿರೋಧಿ ಎಂದು ಹೇಳ್ತಾರೆ. ಹೊಸ ಮತಾಂತರ ನಿಷೇಧ ಕಾಯಿದೆ ಅವಶ್ಯಕತೆ ಇಲ್ಲ. ಸಂವಿಧಾನದಲ್ಲಿ ಈಗಾಗಲೇ ಬಲವಂತದ ಮತಾಂತರಕ್ಕೆ ನಿಷೇಧ ಇದೆ. ಬಲವಂತದ ಮತಾಂತರವನ್ನು ನಾನೂ ವಿರೋಧಿಸುತ್ತೇನೆ. ಹೊಸ ಕಾನೂನು ಅವಶ್ಯಕತೆ ಇಲ್ಲ. ಸದನದಲ್ಲಿ ನಾನು ಇದನ್ನು ಹೇಳಿದ್ದೆ. ಬಲವಂತದ ಮತಾಂತರವನ್ನು ಬಲವಾಗಿ ಖಂಡಿಸುತ್ತೇನೆ. ಆದ್ರೆ ನಾವು ಈಗ ತಂದಿರುವ ಕಾನೂನು ವಿರೋಧ ಮಾಡಿದ್ರೆ ಧರ್ಮ ವಿರೋಧಿ ಎಂದು ಹೇಳುತ್ತಾರೆ ಎಂದು ಸರ್ಕಾರ ತಂದಿರುವ ಹೊಸ ಕಾಯಿದೆಗೆ ಮತ್ತೆ ವಿರೋಧ ವ್ಯಕ್ತಪಡಿಸಿದರು.

Leave a Reply

Your email address will not be published.

Back to top button