-ಪ್ರತಿಪಕ್ಷದ ಅಸ್ತ್ರವಾಗಲಿದೆ ಉತ್ತರ ಕರ್ನಾಟಕದ ಕಡೆಗಣನೆ, ಬರ ನಿರ್ವಹಣೆ
-ಶಾಸಕರಿಗೆ ಮಧ್ಯಾಹ್ನದ ಊಟ, ವಸತಿ ವ್ಯವಸ್ಥೆ ಅಷ್ಟೇ
ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ನಾಳೆಯಿಂದ ಅಧಿವೇಶನ ಆರಂಭವಾಗಲಿದ್ದು, ಅನೇಕ ವಿಷಯಗಳ ಚರ್ಚೆಗೆ ಸಾಕ್ಷಿಯಾಗಲಿದೆ. ಈಗಾಗಲೇ ಅಧಿವೇಶನದ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.
ರೈತರ ನೂರೆಂಟು ಸಮಸ್ಯೆಗಳ ನಡುವೆ ಅಧಿವೇಶನ ನಡೆಸುತ್ತಿದ್ದು, ಮೈತ್ರಿ ಸರ್ಕಾರ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಅಧಿವೇಶನವು ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಭಾರೀ ಚರ್ಚೆಗೆ ವೇದಿಕೆಯಾಗಲಿದೆ. ರೈತರು ಮತ್ತು ಕಬ್ಬು ಬೆಳೆಗಾರರ ಸಮಸ್ಯೆ, ಸಾಲಮನ್ನಾ ವಿಳಂಬ, ಉತ್ತರ ಕರ್ನಾಟಕದ ಕಡೆಗಣನೆ, ಬರ ನಿರ್ವಹಣೆ ಸೇರಿದಂತೆ ಹಲವು ವಿಷಯಗಳನ್ನು ಇಟ್ಟುಕೊಂಡು ಪ್ರತಿಪಕ್ಷ ಬಿಜೆಪಿವು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ತರಾಟೆ ತೆಗೆದುಕೊಳ್ಳಲು ಸಿದ್ಧತೆ ಮಾಡಿಕೊಂಡಿದೆ. ಪ್ರತಿಪಕ್ಷ ಬಿಜೆಪಿ ಅಸ್ತ್ರಗಳಿಗೆ ತಕ್ಕ ಪ್ರತಿ ಅಸ್ತ್ರ ಹೂಡಲು ಸರ್ಕಾರವೂ ಸಜ್ಜುಗೊಂಡಿದೆ.
Advertisement
Advertisement
ಸುವರ್ಣಸೌಧದ ಎದುರು ರೈತರು, ಕಬ್ಬು ಬೆಳೆಗಾರರು ಹಾಗೂ ಉತ್ತರ ಕರ್ನಾಟಕದ ವಿವಿಧ ಮಠಾಧೀಶರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿಪಕ್ಷ ಬಿಜೆಪಿ ನಾಯಕರೂ ಈ ಪ್ರತಿಭಟನೆ ಬೆಂಬಲಿಸಿದ್ದಾರೆ. ಹೀಗಾಗಿ ಪ್ರತಿಭಟನಾಕಾರರಿಗೆ ಸರ್ಕಾರವು ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ಈ ಮೂಲಕ ಮೈತ್ರಿ ಸರ್ಕಾರವು ಮೊದಲ ದಿನವೇ ಭಾರೀ ಪ್ರತಿಭಟನೆಯ ಶಾಕ್ ಎದುರಿಸಬೇಕಾಗುತ್ತದೆ.
Advertisement
ಅಧಿವೇಶನ ನಿರ್ವಹಣೆಗೆ ಸೂಕ್ತ ಭದ್ರತೆ ಒದಗಿಸಿದ್ದು, 4 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ಎದುರಾಗದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ತೀವ್ರ ನಿಗಾ ವಹಿಸಲಿದ್ದಾರೆ. ಸುವರ್ಣಸೌಧದ ಸುತ್ತ ಭಾರೀ ಭದ್ರತೆ ಒದಗಿಸಲಾಗಿದೆ.
Advertisement
ವಿಶೇಷಾಧಿಕಾರಿ ನೇಮಕ:
ಅಧಿವೇಶನ ಪಾರದರ್ಶಕವಾಗಿರಲು ಹಾಗೂ ಸರ್ಕಾರದ ಹಣ ದುರುಪಯೋಗವಾಗದಿರಲು ಇದೇ ಮೊದಲ ಬಾರಿಗೆ ಐಎಎಸ್ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ಅವರನ್ನು ವಿಶೇಷ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಕಲಾಪ ಹೊರಗಿನ ನಿರ್ವಹಣಾ ಸಮಿತಿಗಳು ಪ್ರತಿಯೊಂದು ಖರ್ಚಿಗೂ ಉಜ್ವಲ್ ಕುಮಾರ್ ಘೋಷ್ ಅವರ ಮೂಲಕವೇ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.
ದುಂದು ವೆಚ್ಚಕ್ಕೆ ಕತ್ತರಿ:
ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರ ಆಶಯದಂತೆ ಈ ಬಾರಿ ಅಧಿವೇಶನದಲ್ಲಿ ಅನಗತ್ಯ ವೆಚ್ಚ ನಿಯಂತ್ರಣಕ್ಕೆ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿಯೊಂದು ವೆಚ್ಚದಲ್ಲಿಯೂ ಪಾರದರ್ಶಕತೆ ಕಾಯ್ದುಕೊಳ್ಳಲು ಸರ್ಕಾರ ಮುಂದಾಗಿದೆ. ಅಧಿವೇಶನದಲ್ಲಿ ಶಾಸಕರ ಊಟದ ಮೆನು ಬದಲಾಯಿಸಲಾಗಿದೆ. ಹಿಂದಿನ ಅಧಿವೇಶನಗಳಂತೆ ಇಲ್ಲಿಯ ಊಟದಿಂದ ಆರೋಗ್ಯದಲ್ಲಿ ಏರುಪೇರು ಆಗದಿರಲು ಆಯಾ ಭಾಗದ ಊಟದ ವ್ಯವಸ್ಥೆ ಮಾಡಲಾಗಿದೆ.
ಅಧಿವೇಶನದಲ್ಲಿ ಭಾಗವಹಿಸುವ ಶಾಸಕರಿಗೆ ಸರ್ಕಾರ ಈ ಬಾರಿ ಕೇವಲ ಮಧ್ಯಾಹ್ನದ ಊಟಕ್ಕೆ ಮಾತ್ರ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಬೆಳಗಿನ ತಿಂಡಿ ಮತ್ತು ರಾತ್ರಿ ಊಟವನ್ನು ಶಾಸಕರು ತಮಗೆ ಸಿಗುವ ಭತ್ಯೆಯಲ್ಲಿಯೇ ಸೇವಿಸಬೇಕು. ತಮ್ಮ ಪಿಎ, ಗನ್ ಮ್ಯಾನ್ ಗಳು, ಡ್ರೈವರ್ ಗಳ ಊಟಕ್ಕೂ ಶಾಸಕರೇ ಭರಿಸಬೇಕು. ಅಷ್ಟೇ ಅಲ್ಲದೆ ಶಾಸಕರಿಗೆ ಮಾತ್ರ ರೂಂ ವ್ಯವಸ್ಥೆ ಮಾಡಲಾಗಿದೆ.
ಸಚಿವಾಲಯ ಶಿಫ್ಟ್:
ಅಧಿವೇಶನದ ಹಿನ್ನೆಲೆಯಲ್ಲಿ ವಿಧಾನಸಭೆ ಮತ್ತು ಪರಿಷತ್‍ನ ಎರಡೂ ಸಚಿವಾಲಯ ಸುವರ್ಣಸೌಧಕ್ಕೆ ಶಿಫ್ಟ್ ಆಗಿವೆ. ಸುಮಾರು 300 ಸಿಬ್ಬಂದಿ ಶನಿವಾರದಿಂದ ಬೆಳಗಾವಿ ಸುವರ್ಣಸೌಧದಲ್ಲಿ ಕೆಲಸ ಆರಂಭಿಸಿದ್ದಾರೆ. ಅಧಿವೇಶನದಲ್ಲಿ ಸುಮಾರು ಐದು ಸಾವಿರ ಅಧಿಕಾರಿ ವರ್ಗ, ಶಾಸಕರು ಹಾಗೂ ಪತ್ರಕರ್ತರಿಗೆ ವಸತಿ, ಊಟ, ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಭದ್ರತೆಗೆ ನಿಯೋಜಿತರಾಗುವ ಕನಿಷ್ಠ ಪೊಲೀಸ್ ಸಿಬ್ಬಂದಿಗೂ ಈ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಇಡೀ ಅಧಿವೇಶನದ ವೆಚ್ಚವನ್ನು 17.57 ಕೋಟಿ ರೂ. ಗೆ ನಿಗದಿಪಡಿಸಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv