ರಾಜ್ಯದೆಲ್ಲೆಡೆ ಶುರುವಾಗಿದೆ ಮೈಕೊರೆಯುವ ಚಳಿ!

Public TV
2 Min Read
overall cold collage copy

– ಕೊಡಗಿನಲ್ಲಿ ಸಂಜೆ 5.30ಕ್ಕೆ ಆವರಿಸುತ್ತೆ ಕತ್ತಲು
– ಮಂಡ್ಯದಲ್ಲಿ ರಸ್ತೆ ಬದಿ ಬೆಂಕಿ ಕಾಯಿಸಿ ಕುಳಿತ ಜನ

ಮಡಿಕೇರಿ/ಮಂಡ್ಯ/ಕೋಲಾರ: ದಕ್ಷಿಣ ಕಾಶ್ಮೀರ ಕೊಡಗು ಜಿಲ್ಲೆಯಲ್ಲಿಗ ಮೈಕೊರೆಯುವ ಚಳಿ ಶುರುವಾಗಿದೆ. ಮುಂಜಾನೆಯ ಮಂಜಿನ ಮುಸುಕು, ತಣ್ಣನೆಯ ಗಾಳಿ ಕೊಡಗಿನವರ ಜೀವನ ಶೈಲಿಯನ್ನೇ ಈಗ ಬದಲಾಯಿಸಿದೆ.

ಗಿರಿ ಪ್ರದೇಶದಲ್ಲಿರುವ ಮಡಿಕೇರಿಯಲ್ಲಿ ದಿನವಿಡೀ ಚಳಿಯ ಅನುಭವ ಹೆಚ್ಚಾಗಿದೆ. ಬೆಳಗ್ಗೆ 7 ಗಂಟೆಯಾದರೂ ಬೆಳಕಾಗುತ್ತಿಲ್ಲ. ಸಂಜೆ 5:30ಗಂಟೆಗೆ ಕತ್ತಲು ಆವರಿಸುತ್ತಿದೆ. ಸಾಮಾನ್ಯವಾಗಿ ಮಡಿಕೇರಿಯಲ್ಲಿ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಚಳಿ ಆರಂಭಗೊಂಡು ಫೆಬ್ರವರಿ ತಿಂಗಳವರೆಗೂ ಮುಂದುವರಿಯುತ್ತದೆ. ಕನಿಷ್ಟ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ವರೆಗೆ ಇಳಿದಿರುತ್ತದೆ.

overall cold 4

ಅತಿಯಾದ ಮೈ ಕೊರೆಯುವ ವಾತಾವರಣ ಪ್ರವಾಸಿಗರಿಗೆ ಮೋಜು ಮಸ್ತಿಯ ಸುಖಾನುಭವ ನೀಡಿದ್ದರೆ, ಕೆಲಸಕ್ಕೆ ತೆರಳುವ ಸ್ಥಳಿಯರಿಗೆ, ವ್ಯಾಪಾರಿಗಳಿಗೆ ಅನಾನುಕೂಲವಾಗಿದೆ. ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರೆಲ್ಲ ಕೋಟು, ಶಾಲು ಹೊದ್ದು ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ.

ಇತ್ತ ಮಂಡ್ಯದಲ್ಲೂ ಚಳಿ ಹೆಚ್ಚಾಗಿದೆ. ಚಳಿಗೆ ಜನರು ರಸ್ತೆ ಬದಿ ಬೆಂಕಿ ಕಾಯಿಸುತ್ತ ಕುಳಿತಿರುವ ದೃಶ್ಯ ಈಗ ಕಂಡುಬರುತ್ತಿದೆ. ಕಳೆದ ದಿನಗಳಿಗೆ ಹೋಲಿಸಿದರೆ ಬುಧವಾರ ಚಳಿಯ ಪ್ರಮಾಣ ಏರಿಕೆಯಾಗಿದೆ. ಜನರು ಈ ಚಳಿಗೆ ನಡುಗುತ್ತಿದ್ದು, ಚಳಿ ಕಡಿಮೆ ಮಾಡಿಕೊಳ್ಳಲು ರಸ್ತೆ ಬದಿ ಬೆಂಕಿ ಕಾಯಿಸುತ್ತಿದ್ದಾರೆ.

overall cold 3

ಮಳೆರಾಯನ ಶಾಪದಿಂದ ಮಳೆಯಿಲ್ಲದೆ ಕೊರಗುತ್ತಿರುವ ಕೋಲಾರ ಜನತೆ ಕಳೆದ ಒಂದು ವಾರದಿಂದ ಚಳಿಯಿಂದ ನಡುಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ದಟ್ಟವಾದ ಇಬ್ಬನಿ ಈ ಭಾಗದ ಗಿರಿ ಶಿಖರಗಳನ್ನ ಆವರಿಸಿಕೊಂಡಿದೆ. ಇಲ್ಲಿನ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿ ಜೊತೆಗೆ ಬೆಟ್ಟದ ತಪ್ಪಿಲಿನ ರಸ್ತೆಗಳಂತೂ ಊಟಿಯ ವಾತಾವರಣವನ್ನೇ ನಿರ್ಮಾಣ ಮಾಡಿವೆ.

overall cold 5

ಚಳಿ ಜೊತೆಗೆ ದಟ್ಟ ಮಂಜು ಆವರಿಸಿ ಇಡೀ ಕೋಲಾರ ಜಿಲ್ಲೆಯನ್ನ ಸುತ್ತುವರಿದಿದೆ. ನಗರದ ಸುತ್ತ ದಟ್ಟವಾದ ಮಂಜು ಆವರಿಸಿದ ಪರಿಣಾಮ ಗಿಡ-ಮರಗಳ ಎಲೆಗಳಿಂದ ನೀರು ತೊಟ್ಟಿಕ್ಕುತ್ತಿದೆ. ದಟ್ಟಣೆಯ ಹಿಮ ಕಾಣಿಸಿಕೊಳ್ಳುವ ಮೂಲಕ ವಾಹನ ಸವಾರರು ಪರದಾಡುವ ಪರಿಸ್ಥಿತಿಯೂ ಕೂಡ ಜಿಲ್ಲೆಯಲ್ಲಿ ನಿರ್ಮಾಣವಾಗಿತ್ತು.

ಚುಮು ಚುಮು ಚಳಿಗೆ ಮನೆ ಬಿಟ್ಟು ಹೊರ ಬಾರದ ನಗರ ಪ್ರದೇಶದ ಜನ ಚಳಿಗೆ 9 ಗಂಟೆಯ ಒಳಗಡೆ ಗೂಡು ಸೇರುತ್ತಿದ್ದಾರೆ. ದಟ್ಟ ಇಬ್ಬನಿಯಿಂದಾಗಿ ಬೈಕ್ ಸವಾರರು, ವಿದ್ಯಾರ್ಥಿಗಳು ಸೇರಿದಂತೆ ಜನರು ಬೆಚ್ಚನೆಯ ಉಡುಪುಗಳ ಮೊರೆ ಹೋಗುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *