Connect with us

Latest

ಅಭಿನಂದನ್ ವರ್ಧಮಾನ್‍ರ ಸ್ಕ್ವಾಡ್ರನ್‍ಗೆ ಯುನಿಟ್ ಸಿಟೇಶನ್ ಗೌರವ

Published

on

ನವದೆಹಲಿ: ವೀರ ಚಕ್ರ ಸ್ವೀಕರಿಸಿರುವ ಭಾರತೀಯ ವಾಯು ಸೇನೆ(ಐಎಎಫ್)ಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ 51ನೇ ಸ್ಕ್ವಾಡ್ರನ್‍ಗೆ ಐಎಎಫ್ ಮುಖ್ಯಸ್ಥ ಆರ್‍ಕೆಎಸ್ ಭದೌರಿಯಾ ಅವರು ಯುನಿಟ್ ಸಿಟೇಶನ್ ಘೋಷಿಸಿದ್ದಾರೆ.

ಅಭಿನಂದನ್ ವರ್ಧಮಾನ್ 51ನೇ ಸ್ಕ್ವಾಡ್ರನ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಫೆಬ್ರವರಿ 27ರಂದು ನಡೆದ ವೈಮಾನಿಕ ಸಂಘರ್ಷದಲ್ಲಿ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಮಿಗ್-21 ಮೂಲಕ ಹಿಮ್ಮೆಟ್ಟಿಸಿದ್ದರು. ಇದಕ್ಕಾಗಿ 51ನೇ ಸ್ಕ್ವಾಡ್ರನ್‍ಗೆ ಯುನಿಟ್ ಸಿಟೇಶನ್ ನೀಡಿ ಗೌರವಿಸಲಾಗುತ್ತಿದೆ. ಕಮಾಂಡಿಂಗ್ ಆಫೀಸರ್ ಗ್ರೂಪ್ ಕ್ಯಾಪ್ಟನ್ ಸತೀಶ್ ಪವಾರ್ ಅವರು 51ನೇ ಸ್ಕ್ವಾಡ್ರನ್ ಪರವಾಗಿ ಗೌರವವನ್ನು ಸ್ವೀಕರಿಸಿಲಿದ್ದಾರೆ.

ಪಾಕಿಸ್ತಾನ ಎಫ್-16 ಯುದ್ಧ ವಿಮಾನವನ್ನು ತನ್ನ ಮಿಗ್-21 ಯುದ್ಧ ವಿಮಾನದ ಮೂಲಕ ಹೊಡೆದುರುಳಿಸಿದ ನಂತರ ಅಭಿನಂದನ್ ಅವರು ನ್ಯಾಷನಲ್ ಹೀರೋ ಆಗಿ ಹೊರಹೊಮ್ಮಿದ್ದರು. ಬಾಲಾಕೋಟ್ ಏರ್ ಸ್ಟ್ರೈಕ್ ನಂತರ ಪಾಕಿಸ್ತಾನ ತನ್ನ ಎಫ್-16 ಯುದ್ಧ ವಿಮಾನದ ಮೂಲಕ ಭಾರತವನ್ನು ಗುರಿಯಾಗಿಸಿಕೊಂಡು ವಾಯು ದಾಳಿ ನಡೆಸಿದ ಸಂದರ್ಭದಲ್ಲಿ ಅಭಿನಂದನ್ ವರ್ಧಮಾನ್ ಮಿಗ್-21 ವಿಮಾನದ ಮೂಲಕ ಪಾಕ್ ವಿಮಾನವನ್ನು ಹೊಡೆದುರುಳಿಸಿದ್ದರು. ಈ ವೇಳೆ ಅಭಿನಂದನ್ ಅವರ ಮಿಗ್-21 ವಿಮಾನ ಪಾಕಿಸ್ತಾನದಲ್ಲಿ ಪತನಗೊಂಡಿತ್ತು. ಆಗ ಸುಮಾರು 58 ಗಂಟೆಗಳ ಕಾಲ ಅಭಿನಂದನ್ ಪಾಕಿಸ್ತಾನದ ಕಸ್ಟಡಿಯಲ್ಲೇ ಇದ್ದರು. ನಂತರ ಕೇಂದ್ರ ಸರ್ಕಾರ ಪಾಕ್ ಮೇಲೆ ಒತ್ತಡ ಹೇರಿ ಅಭಿನಂದನ್ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿತ್ತು.

ಆಗಸ್ಟ್ 15ರಂದು ನಡೆದ 73ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಅಭಿನಂದನ್ ವರ್ಧಮಾನ್ ಅವರಿಗೆ ವೀರ ಚಕ್ರ ನೀಡಿ ಗೌರವಿಸಲಾಗಿತ್ತು.

ಫೆ.26ರಂದು ‘ಆಪರೇಷನ್ ಬಂದರ್’ ಸಂದರ್ಭದಲ್ಲಿ ಮಿರಾಜ್ 2000 ಯುದ್ಧ ವಿಮಾನದ ಮೂಲಕ ಬಾಲಾಕೋಟ್ ಮೇಲೆ ವೈಮಾನಿಕ ದಾಳಿ ನಡೆಸಿದ ಗ್ವಾಲಿಯರ್ ಏರ್ ಫೊರ್ಸ್ ಸ್ಟೇಷನ್ ಮೂಲದ ನಂಬರ್ 9 ಸ್ಕ್ವಾಡ್ರನ್‍ಗೂ ಸಹ ಉನಿಟ್ ಸಿಟೇಶನ್ ನೀಡಲಾಗುತ್ತಿದೆ ಎಂದು ಮಾಧ್ಯಮ ವರದಿ ಮಾಡಿದೆ.

ಇವರ ಜೊತೆಗೆ ಬಾಲಾಕೋಟ್ ಏರ್ ಸ್ಟ್ರೈಕ್ ವೇಳೆ ಮಹತ್ವದ ಪಾತ್ರ ವಹಿಸಿದ ಸ್ಕ್ವಾಡ್ರನ್ ಲೀಡರ್ ಮಿಂಟಿ ಅಗರ್ವಾಲ್ ಅವರ 601 ಸಿಗ್ನಲ್ ಯುನಿಟ್ ಸಹ ಈ ಸಂದರ್ಭದಲ್ಲಿ ಗೌರವ ಸ್ವೀಕರಿಸಲಿದೆ.

ಫೆಬ್ರವರಿ 27ರಂದು ಭಾರತದ ವಾಯು ಪ್ರದೇಶಕ್ಕೆ ನುಸುಳಲು ಯತ್ನಿಸಿದ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹಿಮ್ಮೆಟ್ಟಿಸಲು ಭಾರತೀಯ ಸೇನೆಯನ್ನು ಎಚ್ಚರಿಸುವಲ್ಲಿ ಮಿಂಟಿ ಅಗರ್ವಾಲ್ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಮಹಿಳಾ ಫೈಟರ್ ಕಂಟ್ರೋಲರ್ ಸ್ಕ್ವಾಡ್ರನ್ ಲೀಡರ್ ಮಿಂಟಿ ಅಗರ್ವಾಲ್ ಅವರಿಗೆ ಈ ಹಿಂದೆ ಯುದ್ಧ್ ಸೇವಾ ಪದಕ ನೀಡಿ ಗೌರವಿಸಲಾಗಿತ್ತು.

ಮಿಂಟಿ ಏಳು ಫೈಟರ್ ಕಂಟ್ರೋಲರ್ ಗಳ ತಂಡದ ಭಾಗವಾಗಿದ್ದು, ಪಾಕಿಸ್ತಾನದ ಎಫ್-16 ಜೊತೆಗಿನ ಯುದ್ಧ ವಿಮಾನಗಳ ಕಾದಾಟದ ಸಂದರ್ಭದಲ್ಲಿ ಫೈಟರ್ ಜೆಟ್‍ಗಳಿಗೆ ಮಾರ್ಗದರ್ಶನ ನೀಡಿದ್ದರು. ಮಿಂಟಿ ಅವರು ವಿಂಗ್ ಕಮಾಂಡರ್ ಅಭಿನಂದನ್ ಅವರಿಗೂ ಮಾರ್ಗದರ್ಶನ ನೀಡಿದ್ದರು.

ಏನಿದು ಯುನಿಟ್ ಸಿಟೇಶನ್ ?
ಯುನಿಟ್ ಸಿಟೇಶನ್ ಒಂದು ಗೌರವವಾಗಿದ್ದು, ವಾಯು ಸೇನೆಯಲ್ಲಿನ ವಿವಿಧ ಸ್ಕ್ವಾಡ್ರನ್‍ಗಳು ಸಾಧನೆಗೈದಾಗ ಈ ಯುನಿಟ್ ಸಿಟೇಶನ್ ನೀಡಲಾಗುತ್ತದೆ. ಸೇನೆಯ ಮುಖ್ಯಸ್ಥರೇ ಈ ಗೌರವವನ್ನು ನೀಡುತ್ತಾರೆ.

Click to comment

Leave a Reply

Your email address will not be published. Required fields are marked *