ಪಾಕ್ ಸೇನೆಯಿಂದ ಮಾನಸಿಕ ಕಿರುಕುಳ – ಅಭಿನಂದನ್ ಮುಂದೇನು..?

Public TV
2 Min Read
nirmala sitharaman abhinandan

– ಇಂದಿನಿಂದ ನಾಲ್ಕು ದಿನಗಳ ಕಾಲ ಡಿ-ಬ್ರೀಫಿಂಗ್
– ವೈದ್ಯಕೀಯ ಪರೀಕ್ಷೆ ವೇಳೆ ಆಘಾತಕಾರಿ ಅಂಶ ಬಯಲು

ನವದೆಹಲಿ: ಪಾಕಿಸ್ತಾನದ ಸೈನಿಕರ ವಶದಲ್ಲಿದ್ದರೂ ಭಾರತದ ಬಗೆಗಿನ ರಹಸ್ಯ ಬಾಯ್ಬಿಡದ ಕೆಚ್ಚೆದೆಯ ವೀರ ಅಭಿನಂದನ್ ಅವರನ್ನು ಮಾನಸಿಕವಾಗಿ ಸಾಕಷ್ಟು ಹಿಂಸಿಸಲಾಗಿತ್ತು ಎನ್ನುವ ಆಘಾತಕಾರಿ ಅಂಶ ಬಯಲಾಗಿದೆ.

ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡುವ ಸಂದರ್ಭದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಪಾಕ್ ಸೇನಾಧಿಕಾರಿಗಳು ಮಾನಸಿಕವಾಗಿ ಕಿರುಕುಳ ನೀಡಿ, ಬಲವಂತವಾಗಿ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ ಎನ್ನುವ ವಿಚಾರ ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.

nirmala sitharaman abhinandan 1

ಪಾಕ್ ಏನು ಕೇಳಿತ್ತು?
ಭಾರತದ ಯೋಜನೆಗಳ ಕುರಿತಂತೆ, ವೈಯಕ್ತಿಕ ವಿಚಾರಗಳ ಬಗ್ಗೆ ಮಾಹಿತಿ ನೀಡುವಂತೆ ಗೆ ಪಾಕ್ ಸೇನಾಧಿಕಾರಿಗಳು ಮಾನಸಿಕವಾಗಿ ಒತ್ತಡ ಹೇರಿ ಕಿರುಕುಳ ನೀಡಿದ್ದರು ಎಂದು ಅಭಿನಂದನ್ ತಿಳಿಸಿದ್ದಾರೆ ಎನ್ನಲಾಗಿದೆ. ಅಭಿನಂದನ್ ದೆಹಲಿಯ ಆರ್ಮಿ ಮತ್ತು ರೆಫರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೂಲಗಳ ಪ್ರಕಾರ ಅಭಿನಂದನ್ ಪಾಕಿಸ್ತಾನದ ಸೈನ್ಯದ ಸೆರೆಯಲ್ಲಿದ್ದಾಗ ಪಕ್ಕೆಲುಬು ಮುರಿದಿದೆ. ಮೂಗಿಗೆ ಏಟು ಬಿದ್ದಿದೆ ಮತ್ತು ಹಿಂಸೆಗೆ ಒಳಗಾಗಿರುವುದು ಆಸ್ಪತ್ರೆಯ ವೈದ್ಯಕೀಯ ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಅಭಿನಂದನ್‍ರನ್ನು ಇನ್ನೂ ಎರಡು ದಿನ ಆಸ್ಪತ್ರೆಯಲ್ಲಿ ಅಬ್ಸರ್ವೇಶನ್‍ನಲ್ಲಿ ಇಡಲಾಗುತ್ತದೆ.

Abhinandan PTI 2

ಅಭಿನಂದನ್ ಮುಂದೇನು?
ಇಂದು ವಿಶ್ರಾಂತಿ ಜೊತೆಗೆ ವೈದ್ಯಕೀಯ ಪರೀಕ್ಷೆ ನಡೆಯಲಿದ್ದು, ವಾಯುಪಡೆಯ ಇಂಟೆಲಿಜೆನ್ಸ್ ಯೂನಿಟ್‍ನಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಡಿ-ಬ್ರೀಫಿಂಗ್ ನಡೆಯಲಿದೆ. ನಮ್ಮ ಸೈನಿಕರು ವೈರಿ ರಾಷ್ಟ್ರದಿಂದ ಬಿಡುಗಡೆಯಾದಾಗ ಸೇನೆ ನಡೆಸುವ ತನಿಖಾ ಪ್ರಕ್ರಿಯೆಗೆ ಡಿ ಬ್ರೀಫಿಂಗ್ ಎಂದು ಕರೆಯಲಾಗುತ್ತದೆ.

ದೇಹದಲ್ಲಿ ಯಾವುದಾದರೂ ಟ್ರ್ಯಾಕಿಂಗ್ ಡಿವೈಸ್ ಇದೆಯೇ ಎಂಬುದನ್ನು ಪತ್ತೆ ಹಚ್ಚಲು ಸ್ಕ್ಯಾನಿಂಗ್ ಮಾಡಲಾಗುತ್ತದೆ. ಬಂಧನದಲ್ಲಿದ್ದಾಗ ಪಾಕಿಸ್ತಾನ ಯಾವ ಮಾಹಿತಿ ಕೇಳಿತ್ತು ಎಂಬ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸುತ್ತಾರೆ.

ಈ ಹಿಂದೆ ವೈರಿ ರಾಷ್ಟ್ರದ ಸೈನಿಕ ಸೆರೆ ಸಿಕ್ಕ ಸೈನಿಕನನ್ನು ತನ್ನ ಗುಢಾಚಾರಿಕೆಗೆ ಬಳಸಿದ ಉದಾಹರಣೆಗಳು ಇವೆ. ಹೀಗಾಗಿ ಪಾಕಿಸ್ತಾನ ತನ್ನನ್ನು ಸ್ಪೈ ಆಗಿ ನೇಮಕ ಮಾಡಿಕೊಂಡಿಲ್ಲ ಎಂಬುದನ್ನು ಅಭಿನಂದನ್ ಖಚಿತಪಡಿಸಬೇಕು. ಎಲ್ಲಾ ಸೇನಾ ಪ್ರಕ್ರಿಯೆ ಬಳಿಕ ಬೆಂಗಳೂರಿನ ಹೆಚ್‍ಎಎಲ್‍ನಲ್ಲಿ ಪೈಲಟ್ ಫಿಟ್ನೆಸ್ ಪರೀಕ್ಷೆ ನಡೆಯುತ್ತದೆ. ಇದೆಲ್ಲ ನಡೆದ ಬಳಿಕ ಕುಟುಂಬದ ಜೊತೆ ಸಮಯ ಕಳೆಯಲು ರಜೆ ಆಫರ್ ನೀಡಲಾಗುತ್ತದೆ. ಮೆಡಿಕಲ್ ಫಿಟ್‍ನೆಸ್ ಸರ್ಟಿಫಿಕೇಟ್, ಪ್ಲೈಯಿಂಗ್ ಸರ್ಟಿಫಿಕೇಟ್ ಸಿಕ್ಕ ತಕ್ಷಣ ಕರ್ತವ್ಯಕ್ಕೆ ಮತ್ತೆ ಅಭಿನಂದನ್ ಹಾಜರಾಗುತ್ತಾರೆ.

ABHINANDAN

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article