ಸೋಲು-ಗೆಲುವಿನ ಆಟ – ನೀವು ತಿಳಿಯಲೇಬೇಕಾದ ಸಂಗತಿಗಳಿವು

Public TV
6 Min Read
Team India 02

2023ರ ಆರಂಭವು ಭಾರತ (Team India) ಮತ್ತು ಶ್ರೀಲಂಕಾ ನಡುವಿನ ಟಿ20 ಹಾಗೂ ಏಕದಿನ ದ್ವಿಪಕ್ಷೀಯ ಸರಣಿಯೊಂದಿಗೆ ಆರಂಭವಾಯಿತು. ಇದರೊಂದಿಗೆ 2023ರಲ್ಲಿ ನಡೆಯಬೇಕಿದ್ದ ವಿಶ್ವಕಪ್‌ ಕ್ರಿಕೆಟ್‌ಗೆ ತಯಾರಿಯೂ ಆರಂಭವಾಯಿತು. ಪೂರ್ವ ಸಿದ್ಧತೆಯಲ್ಲಿದ್ದ ಭಾರತ ಹಲವು ಸರಣಿಗಳನ್ನ ಗೆದ್ದುಕೊಂಡಿತ್ತು. ಶ್ರೀಲಂಕಾ ಬಳಿಕ ನ್ಯೂಜಿಲೆಂಡ್‌ ವಿರುದ್ಧದ ದ್ವಿಪಕ್ಷೀಯ ಸರಣಿಯನ್ನ ಗೆದ್ದು ಬೀಗಿತು. ಹೀಗೆ ಗೆಲುವಿನ ಓಟ ಮುಂದಿರಿಸಿದ್ದ ಭಾರತ ಪ್ರಮುಖ ಪಂದ್ಯಗಳಲ್ಲಿ ಸೋಲು ಕಂಡಿದ್ದನ್ನು ಮರೆಯುವಂತಿಲ್ಲ.

Australia World Cup Cricket 1 1

2023ರ ವರ್ಷದಲ್ಲಿ ಕ್ರಿಕೆಟ್‌ ವಿಭಾಗದಲ್ಲಿ ಏಕದಿನ ವಿಶ್ವಕಪ್‌ ಕ್ರಿಕೆಟ್‌ (World Cup Cricket) ಟೂರ್ನಿ ಗಮನ ಸೆಳೆದರೂ ಈ ಸಂದರ್ಭದಲ್ಲಿ ನಡೆದ ಅನೇಕ ಬೆಳವಣಿಗೆಗಳ ಬಗ್ಗೆ ತಿಳಿಯಲೇ ಬೇಕಾದ ಸಂಗತಿಗಳಿವೆ. ಅವುಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

ನವೆಂಬರ್ 19ರ ವರೆಗೂ ಟೀಂ ಇಂಡಿಯಾದ ರೋಹಿತ್ ಶರ್ಮಾ (Rohit Sharma) ಬಳಗವು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದ್ರೆ ಆಸ್ಟ್ರೇಲಿಯಾ 6ನೇ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳುವ ಮೂಲಕ 140 ಕೋಟಿ ಭಾರತೀಯರ ಕನಸು ಭಗ್ನಗೊಳಿಸಿತು. ಅಕ್ಟೋಬರ್‌ 5 ರಿಂದ ನವೆಂಬರ್‌ 19ರವರೆಗೆ ನಡೆದಿದ್ದ ವಿಶ್ವಕಪ್‌ ಟೂರ್ನಿಯಲ್ಲಿ 10 ಪಂದ್ಯಗಳನ್ನು ಗೆದ್ದಿದ್ದ ಟೀಂ ಇಂಡಿಯಾ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತು. ಆದ್ರೆ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಆಟಗಾರರ ಹಲವು ದಾಖಲೆಗಳು ಅಚ್ಚಳಿಯದೇ ಉಳಿದವು.

Team India 01

ವಿಶ್ವಕಪ್‌ನಲ್ಲಿ ಗಮನ ಸೆಳೆದ ದಾಖಲೆಗಳು:
2008ರ ಆಗಸ್ಟ್‌ 18ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟಿದ್ದ ಕೊಹ್ಲಿ (Virat Kohli) 2023ರ ವಿಶ್ವಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕ ಸಿಡಿಸಿದ ಸಾಧನೆ ಮಾಡಿದರು. ಈ ಮೂಲಕ 49 ಶತಕ ಸಿಡಿಸಿದ್ದ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆಯನ್ನ ನುಚ್ಚುನೂರು ಮಾಡಿದರು.

2023ರ ವಿಶ್ವಕಪ್‌ ಟೂರ್ನಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ದಾಖಲೆಗಾಗಿ ಆಡದಿದ್ದರೂ 11 ಪಂದ್ಯಗಳಿಂದ 597 ರನ್‌ ಸಿಡಿಸಿ ಇತಿಹಾಸ ಸೃಷ್ಟಿದರು. ಈ ಮೂಲಕ ತಂಡ ಒಂದರ ನಾಯಕನಾಗಿ ಅತಿ ಹೆಚ್ಚು ರನ್‌ ಸಿಡಿಸಿದ ಬ್ಯಾಟರ್‌ ಆಗಿ ರೋಹಿತ್‌ ಹೊರಹೊಮ್ಮಿದರು. ಅಷ್ಟೇ ಅಲ್ಲ ಏಕದಿನ ವಿಶ್ವಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಮೊಹಮ್ಮದ್‌ ಶಮಿ 50 ವಿಕೆಟ್‌ ಪಡೆದ ಭಾರತದ ಮೊದಲ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದರು.

Angelo Mathews timed out

ಟೈಮ್ಡ್‌ ಔಟ್‌ ಅಪಖ್ಯಾತಿ:
ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಶ್ರೀಲಂಕಾದ ಏಂಜಲೋ ಮಾಥ್ಯೂಸ್ ಒಂದೇ ಒಂದು ಎಸೆತವನ್ನೂ ಎದುರಿಸದೇ ಟೈಮ್ಡ್‌ ಔಟ್‌ಗೆ ಬಲಿಯಾದ ವಿಶ್ವದ ಮೊದಲ ಬ್ಯಾಟರ್‌ ಎಂಬ ಕುಖ್ಯಾತಿಗೆ ಪಾತ್ರರಾದರು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾ ನಾಯಕ ಶಕೀಬ್‌ ಉಲ್‌ ಹಸನ್‌ ಅಂಪೈರ್‌ ಜೊತೆ ಬ್ಯಾಟರ್‌ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿ ಟೈಮ್ಡ್‌ ಔಟ್‌ಗೆ ಮನವಿ ಮಾಡಿದರು. ಈ ಮನವಿಯನ್ನು ಅಂಪೈರ್‌ ಪುರಸ್ಕರಿಸಿದರು. ಈ ವೇಳೆ ಮ್ಯಾಥ್ಯೂಸ್‌ ಅವರು, ನನ್ನ ಹೆಲ್ಮೆಟ್‌ ಪಟ್ಟಿ ಮುರಿದು ಹೋಗಿದೆ. ಹೀಗಾಗಿ ಬೇರೆ ಹೆಲ್ಮೆಟ್‌ ತರುವಂತೆ ಹೇಳಿದ್ದೇನೆ ಎಂದು ಅಂಪೈರ್‌ಗೆ ಸಮಸ್ಯೆಯನ್ನು ವಿವರಿಸಿದರು. ಅಂಪೈರ್‌ ಮತ್ತು ಬಾಂಗ್ಲಾ ಆಟಗಾರರ ಜೊತೆ ಹೆಲ್ಮೆಟ್‌ ದೋಷದ ಬಗ್ಗೆ ಮನವರಿಕೆ ಮಾಡಿದರೂ ಶಕೀಬ್‌ ಮಾತ್ರ ತಮ್ಮ ಟೈಮ್ಡ್‌ ಔಟ್‌ ಮನವಿಯಿಂದ ಹಿಂದಕ್ಕೆ ಸರಿಯಲಿಲ್ಲ. ಕೊನೆಗೆ ಏಂಜಲೋ ಮಾಥ್ಯೂಸ್ ಔಟ್‌ ಎಂದು ತೀರ್ಪು ಪ್ರಕಟಿಸಲಾಯಿತು.

Australia 3

ಭಾರತದ ವಿರುದ್ಧ ದಾಖಲೆ ಬರೆದ ಆಸೀಸ್‌:
ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ನ (WTC) 2ನೇ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ಚಾಂಪಿಯನ್‌ ಪಟ್ಟಕೇರಿತು. 2019ರಲ್ಲಿ ಆರಂಭಗೊಂಡ ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ನ ಮೊದಲ ಆವೃತ್ತಿಯಲ್ಲಿ ಕಿವೀಸ್‌ ಎದುರು ಸೋತು ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದ ಟೀಂ ಇಂಡಿಯಾ 2ನೇ ಬಾರಿಯೂ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲನುಭವಿಸಿತು. ಆಸ್ಟ್ರೇಲಿಯಾ ಈ ಟೆಸ್ಟ್‌ ಚಾಂಪಿಯನ್‌ಶಿಪ್‌ ಗೆಲ್ಲುವ ಮೂಲಕ ಏಕದಿನ, ಟಿ20 ಹಾಗೂ ಟೆಸ್ಟ್‌ ಕ್ರಿಕೆಟ್‌ಗಳಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದ ಏಕೈಕ ತಂಡ ಎನಿಸಿಕೊಂಡಿತು.

1 2

8ನೇ ಬಾರಿಗೆ ಏಷ್ಯಾಕಪ್‌ ಕಿರೀಟ:
2023ರ ಏಕದಿನ ಏಷ್ಯಾಕಪ್‌ (Asia Cup 2023) ಟೂರ್ನಿಯ ಫೈನಲ್‌ಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ 8ನೇ ಬಾರಿಗೆ ಏಷ್ಯಾಕಪ್‌ ಕಿರೀಟ ಮುಡಿಗೇರಿಸಿಕೊಂಡಿತು. 1984, 1988, 1991, 1995, 2010, 2016, 2018ರಲ್ಲಿ ಏಷ್ಯಾಕಪ್‌ ಚಾಂಪಿಯನ್‌ ಆಗಿದ್ದ ಭಾರತ 2023ರಲ್ಲಿ 8ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಅಲ್ಲದೇ ಇದು ರೋಹಿತ್‌ ಶರ್ಮಾ ಅವರ ನಾಯಕತ್ವದಲ್ಲಿ ಗೆದ್ದ 2ನೇ ಏಷ್ಯಾಕಪ್‌ ಟೂರ್ನಿಯೂ ಆಗಿತ್ತು.

Ambati Rayudu

ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ದಿಗ್ಗಜರು:
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಅವರಿಂದ 6 ಎಸೆತಗಳಲ್ಲಿ 6 ಸಿಕ್ಸರ್‌ ಚಚ್ಚಿಸಿಕೊಂಡಿದ್ದ ಇಂಗ್ಲೆಂಡ್ ತಂಡದ ವೇಗಿ ಸ್ಟುವರ್ಡ್‌ ಬ್ರಾಡ್, ದಕ್ಷಿಣ ಆಫ್ರಿಕಾದ ಹಾಶೀಂ ಆಮ್ಲಾ, ಡ್ವೈನ್‌ ಪ್ರಿಟೊರಿಯಸ್, ಆಸ್ಟ್ರೇಲಿಯಾದ ಮಾಜಿ ನಾಯಕ ಆರನ್‌ ಫಿಂಚ್‌, ಭಾರತದ ಮುರಳಿ ವಿಜಯ್, ಅಂಬಟಿ ರಾಯುಡು ಅವರು ಕ್ರಿಕೆಟ್‌ಗೆ ವಿದಾಯ ಹೇಳಿದರು.

IPL

5ನೇ ಬಾರಿಗೆ ಚೆನ್ನೈಗೆ ಚಾಂಪಿಯನ್‌ ಕಿರೀಟ
ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು 2023ರಲ್ಲಿ ಐಪಿಎಲ್‌ ಚಾಂಪಿಯನ್ಸ್‌ ಟ್ರೋಫಿ ಮುಡಿಗೇರಿಸಿಕೊಳ್ಳುವುದರ ಜೊತೆಗೆ 5ನೇ ಬಾರಿಗೆ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿತು. ಈ ಮೂಲಕ 5 ಬಾರಿ ಚಾಂಪಿಯನ್ಸ್‌ ಆಗಿ ಹೊರಹೊಮ್ಮಿದ್ದ ಮುಂಬೈ ಇಂಡಿಯನ್ಸ್‌ ದಾಖಲೆಯನ್ನ ಸರಿಗಟ್ಟಿತು.

Womens Team

ವನಿತೆಯರಿಗೆ ಐತಿಹಾಸಿಕ ಜಯ:
ಭಾರತೀಯ ಮಹಿಳಾ ಕ್ರಿಕೆಟ್‌ ತಂಡವು ಇಂಗ್ಲೆಂಡ್ ವಿರುದ್ಧ ನಡೆದ ಏಕೈಕ ಟೆಸ್ಟ್‌ ಕ್ರಿಕೆಟ್‌ನಲ್ಲಿ 347 ರನ್ ಗೆಲುವು ಸಾಧಿಸಿತು. ಇದೇ ಮೊದಲ ಬಾರಿಗೆ ಏಷ್ಯನ್ಸ್‌ ಗೇಮ್ಸ್‌ನಲ್ಲಿ ಪ್ರತಿನಿಧಿಸಿದ ಭಾರತ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿತು.

ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆ:
ಅಮೆರಿಕದ ಲಾಸ್‌ ಏಂಜಲಿಸ್‌ನಲ್ಲಿ 2028ಕ್ಕೆ ನಡೆಯಲಿರುವ ಜಾಗತಿಕ ಕ್ರೀಡಾಹಬ್ಬ ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆಯಾಯಿತು. ಈ ನಡುವೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ ಹೇರಿತು. ಇದನ್ನೂ ಓದಿ: IPL ಇತಿಹಾಸದಲ್ಲೇ ದಾಖಲೆ – ಬರೋಬ್ಬರಿ 24.75 ಕೋಟಿ ರೂ.ಗೆ ಬಿಕರಿಯಾದ ಮಿಚೆಲ್‌ ಸ್ಟಾರ್ಕ್‌

Mitchell Starc

ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಸ್ಟಾರ್ಕ್‌:
2024ರ ಐಪಿಎಲ್‌ ಟೂರ್ನಿಗಾಗಿ ಡಿಸೆಂಬರ್‌ 19ರಂದು ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಮಿಚೆಲ್‌ ಸ್ಟಾರ್ಕ್‌ ಬರೋಬ್ಬರಿ 24.75 ಕೋಟಿ ರೂ.ಗೆ ಬಿಕರಿಯಾದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಬಿಡ್ ಆದ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು. ಇದರೊಂದಿಗೆ ಮತ್ತೊಬ್ಬ ಆಸೀಸ್‌ ಸ್ಟಾರ್‌ ಆಲ್‌ರೌಂಡರ್‌ ಪ್ಯಾಟ್‌ ಕಮ್ಮಿನ್ಸ್‌ 20.50 ಕೋಟಿ ರೂ.ಗೆ ಬಿಕರಿಯಾಗಿ ದಾಖಲೆ ಬರೆದರು. 2 ವರ್ಷ ಗುಜರಾತ್‌ ಟೈಟಾನ್ಸ್‌ ತಂಡವನ್ನು ಮುನ್ನಡೆಸಿ ಒಮ್ಮೆ ಚಾಂಪಿಯನ್‌ ಮತ್ತೊಮ್ಮೆ ರನ್ನರ್‌ ಅಪ್‌ ಪ್ರಶಸ್ತಿ ತಂದುಕೊಟ್ಟಿದ್ದ ಹಾರ್ದಿಕ್‌ ಪಾಂಡ್ಯ ಟ್ರೇಡ್‌ ವಿಂಡೋ ನಿಯಮದ ಪ್ರಕಾರ ಮುಂಬೈ ಇಂಡಿಯನ್ಸ್‌ಗೆ ನಾಯಕನಾಗಿ ಕಂಬ್ಯಾಕ್‌ ಮಾಡಿದರು.

stop clock ICC

ಬೌಲರ್‌ಗಳಿಗೆ ಸ್ಟಾಪ್ ಕ್ಲಾಕ್ ಶಾಕ್‌ ಕೊಟ್ಟ ಐಸಿಸಿ:
ಫೀಲ್ಡಿಂಗ್‌ ತಂಡವು ಓವರ್‌ ರೇಟ್‌ ಕಾಯ್ದುಕೊಳ್ಳುವುದನ್ನು ತಪ್ಪಿಸಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಹೊಸ ನಿಯಮವೊಂದನ್ನು ಪರಿಚಯಿಸಿತು. ಒಂದು ಓವರ್ ಮುಗಿದು 60 ಸೆಕೆಂಡ್‌ಗಳಲ್ಲಿ, ಅಂದರೆ ಒಂದು ನಿಮಿಷದ ಅವಧಿಯಲ್ಲಿ ಮುಂದಿನ ಓವರ್ ಆರಂಭಿಸದೇ ಹೋದರೆ 3ನೇ ನಿರ್ದೇಶನದ ಬಳಿಕ ಎದುರಾಳಿ ತಂಡಕ್ಕೆ 5 ಪೆನಾಲ್ಟಿ ರನ್ ಲಭಿಸಲಿದೆ. ಮೊದಲೆರಡು ಬಾರಿ ಈ ರೀತಿಯ ವಿಳಂಬಕ್ಕೆ ರಿಯಾಯಿತಿ ಇರಲಿದೆ ಎಂಬ ಸ್ಟಾಪ್‌ ಕ್ಲಾಕ್‌ ನಿಯಮವನ್ನ ಪರಿಚಯಿಸಿತು.

Virat

146 ವರ್ಷಗಳ ಇತಿಹಾಸದಲ್ಲಿ ಹೊಸ ಮೈಲುಗಲ್ಲು:
ಟೀಂ ಇಂಡಿಯಾದ ಟಾಪ್ ಕ್ಲಾಸ್ ಕ್ರಿಕೆಟಿಗ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕ್ಯಾಲೆಂಡರ್‌ ವರ್ಷದಲ್ಲಿ ಎಲ್ಲಾ ಸ್ವರೂಪದಲ್ಲೂ 2 ಸಾವಿರ ರನ್ ಪೂರ್ಣಗೊಳಿಸಿದ ಸಾಧನೆ ಮಾಡಿದರು. ಭಾರತದ ಆತಿಥ್ಯದಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿ 50ನೇ ಶತಕ ಸಿಡಿಸುವ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ದಾಖಲೆಯನ್ನ ನುಚ್ಚುನೂರು ಮಾಡಿದ್ದರು. ಆ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಅರ್ಧಶತಕ ಸಿಡಿಸುವ ಮೂಲಕ 146 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮಹತ್ವದ ಮೈಲುಗಲ್ಲು ಸ್ಥಾಪಿಸಿದರು. ಇದು ಅಭಿಮಾನಿಗಳಿಗೆ ಮರೆಯದ ಕ್ಷಣವಾಗಿತ್ತು.

Share This Article