ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯುವಂತೆ ಪಕ್ಷದ ನಾಯಕರ ಮನವಿಯನ್ನು ರಾಹುಲ್ ಗಾಂಧಿ ಮಗದೊಮ್ಮೆ ತಿರಸ್ಕರಿಸಿದ್ದಾರೆ. ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತೇನೆ ಆದರೆ ಅಧ್ಯಕ್ಷ ಸ್ಥಾನ ಬೇಡ ಎಂದು ಈ ಹಿಂದೆ ನುಡಿದಿದ್ದ ಮಾತನ್ನು ಮತ್ತೊಮ್ಮೆ ಹೇಳಿದ್ದಾರೆ.
ಬುಧವಾರ ಹಿರಿಯ ಸಂಸದರು ರಾಹುಲ್ ಗಾಂಧಿ ಅವರಲ್ಲಿ, ತಾವು ಅಧ್ಯಕ್ಷ ಸ್ಥಾನದಲ್ಲೇ ಮುಂದುವರೆಯುವಂತೆ ಮನವಿ ಮಾಡಿದ್ದು, ರಾಹುಲ್ ಗಾಂಧಿ ಈ ಮನವಿಯನ್ನು ತಿರಸ್ಕರಿಸಿದ್ದಾರೆ.
Advertisement
Advertisement
ಲೋಕಸಭಾ ಚುನಾವಣೆ ನಂತರ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಸಭೆಯಲ್ಲಿ ಪ್ರಥಮ ಬಾರಿಗೆ ತಿರುಚಿರಪಳ್ಳಿ ಸಂಸದ ಸುಬ್ಬರಮಣ್ ತಿರುನಾವುಕ್ಕರಸರ್ ಅವರು ಈ ಕುರಿತು ಪ್ರಸ್ತಾಪಿಸಿ ನಾಯಕತ್ವದಲ್ಲಿ ಮುಂದುವರಿಯುವಂತೆ ಮನವಿ ಮಾಡಿದ್ದರು. ಇದಾದ ನಂತರ ಶಶಿ ತರೂರ್ ಹಾಗೂ ಮನೀಶ್ ತಿವಾರಿ ಅವರು ರಾಹುಲ್ ಗಾಂಧಿ ಏಕೆ ಅಧ್ಯಕ್ಷರಾಗಿ ಮುಂದುವರಿಯಬಾರದು ಎಂದು ವಾದ ಮಾಡಿದ್ದರು. ಆಗಲೂ ಸಹ ರಾಹುಲ್ ಗಾಂಧಿ ಅವರು ಮೌನ ವಹಿಸಿದ್ದರು.
Advertisement
Advertisement
ಅದಾಗ್ಯೂ ಕಾಂಗ್ರೆಸ್ ನಾಯಕು ಪದೆ ಪದೇ ಇದೇ ವಿಷಯವನ್ನು ಪ್ರಸ್ತಾಪಿಸುತ್ತಿದ್ದರಿಂದ ರಾಹುಲ್ ಗಾಂಧಿ ಅವರು ಪ್ರತಿಕ್ರಿಯಿಸಿ ಯಾರಾದರೂ ಪಕ್ಷದ ಹೊಣೆ ಹೊರಬೇಕಲ್ಲ ಎಂದು ತಿಳಿಸಿದ್ದರು. ನಂತರ ಕೆಲ ನಾಯಕರು ಪಕ್ಷಕ್ಕೆ ನಿಮ್ಮ ನಾಯಕತ್ವದ ಅಗತ್ಯವಿದೆ ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಾಹುಲ್, ನಾನು ಪಕ್ಷಕ್ಕಾಗಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತೇನೆ. ಆದರೆ, ಪಕ್ಷದ ಅಧ್ಯಕ್ಷನಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಕ್ಟೋಬರ್‍ನಲ್ಲಿ ಹರ್ಯಾಣ ಮತ್ತು ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಚುನಾವಣಾ ರಣತಂತ್ರ ಸಂಬಂಧ ಚರ್ಚೆ ನಡೆಸಲು ರಾಜ್ಯದ ನಾಯಕರು ಬುಧವಾರ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ನ್ಯಾಷನಲ್ ಕಾಂಗ್ರೆಸ್ ಪಕ್ಷ(ಎನ್‍ಸಿಪಿ) ಸಂಸದೆ ಹಾಗೂ ಶರದ್ ಪವಾರ್ ಮಗಳು ಸುಪ್ರಿಯಾ ಸುಳೆ ಹಾಗೂ ಇನ್ನಿಬ್ಬರು ನಾಯಕರು ವಿಧಾನಸಭೆ ಚುನಾವಣೆ ಕುರಿತು ಚರ್ಚೆ ನಡೆಸಿದರು. ನಾಯಕರ ಭೇಟಿ ವೇಳೆಯೂ ಸಹ ಇದೇ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಅವರ ತುಘಲಕ್ ಲೇನ್ ನಿವಾಸದ ಬಳಿ ಜಮಾಯಿಸಿ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ಮನವಿ ಮಾಡಿದರು.
ಲೋಕಸಭಾ ಫಲಿತಾಂಶ ಪ್ರಕಟವಾಗಿ ಎರಡು ದಿನದ ನಂತರ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ತಿಳಿಸಿದ್ದರು. ಇದಾದ ನಂತರ ತಿಂಗಳು ಕಳೆದರೂ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಹೊರತುಪಡಿಸಿ ಅಧ್ಯಕ್ಷರ ವ್ಯಾಪ್ತಿಯಲ್ಲಿ ಭೇಟಿಯಾಗಲು ಬರುತ್ತಿದ್ದ ಯಾವುದೇ ಪಕ್ಷದ ನಾಯಕರು ಹಾಗೂ ಅಧಿಕಾರಿಗಳನ್ನು ರಾಹುಲ್ ಗಾಂಧಿ ಭೇಟಿಯಾಗಿಲ್ಲ. ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಜೊತೆಗಿನ ಕಿತ್ತಾಟದ ಹಿನ್ನೆಲೆಯಲ್ಲಿ ಸಿಧು ಅವರಿಗೆ ಭೇಟಿಗೆ ಅವಕಾಶ ನೀಡಿದ್ದರು.
ಕಳೆದ ವಾರ ರಾಹುಲ್ ಗಾಂಧಿ ಅವರು ಚುನಾವಣೆ ಸ್ಥಿತಿಗತಿ ಕುರಿತು ಚತ್ತೀಸ್‍ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಇತರ ನಾಯಕರ ಜೊತೆ ಸಭೆ ನಡೆಸಿದ್ದರು. ಇದಾದ ನಂತರ ಪಕ್ಷ ಪುನರ್ರಚನೆ ಸರ್ಕಸ್ ನಡೆಸುವವರೆಗೆ ರಾಹುಲ್ ಗಾಂಧಿ ಅಧ್ಯಕ್ಷರಾಗಿ ಉಳಿಯಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‍ನ ಎಲ್ಲ ಸಮಿತಿಗಳನ್ನು ವಿಸರ್ಜಿಸಿದ್ದರಿಂದ ಸೋಮವಾರ ಈ ಕುರಿತು ಚರ್ಚೆಗೆ ವೇಗ ದೊರೆತಿಯಿತು.
ಉತ್ತರ ಪ್ರದೇಶದ ಒಟ್ಟು 80 ಕ್ಷೇತ್ರಗಳಲ್ಲಿ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿರುವ ರಾಯ್‍ಬರೇಲಿ ಹೊರತು ಪಡಿಸಿ ಉಳಿದ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲು ಕಂಡಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಎಲ್ಲ ಕಾಂಗ್ರೆಸ್ ಸಮಿತಿಯನ್ನು ವಿಸರ್ಜಿಸಲಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಸಹ ವಿಸರ್ಜಿಸಲಾಗಿದೆ. ಆದರೆ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ದಿನೇಶ್ ಗುಂಡೂರಾವ್ ಅವರನ್ನು ಮುಂದುವರಿಸಲಾಗಿದೆ.