ಜೈಪುರ: ರಾಜಸ್ಥಾನ (Rajasthan), ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ಗಡ ರಾಜ್ಯಗಳಲ್ಲಿ ಯಾರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಚಿತ್ರಣ ಇನ್ನು ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ. ಈ ನಡುವೆ ಚುನಾವಣಾ ಫಲಿತಾಂಶ ಪ್ರಕಟವಾಗುವುದಕ್ಕೂ ಮುನ್ನ ರಾಜಸ್ಥಾನದ ಹಾಲಿ ಸಿಎಂ ಅಶೋಕ್ ಗೆಹ್ಲೋಟ್ (Ashok Gehlot) ಈ ಬಾರಿ ಚುನಾವಣೆಯಲ್ಲೂ ಸ್ಪಷ್ಟ ಬಹುಮತದೊಂದಿಗೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾನುವಾರ (ಇಂದು) 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗುತ್ತಿದೆ. ಇದಕ್ಕೂ ಮುನ್ನ ಜೈಪುರದಲ್ಲಿರುವ ಕಾಂಗ್ರೆಸ್ ಪಕ್ಷದ ವಾರ್‌ರೂಮ್‌ನಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದ್ದಾರೆ. ಈ ಬಾರಿಯೂ ರಾಜಸ್ಥಾನದಲ್ಲಿ ಕಾಂಗ್ರೆಸ್ (Congress) ಸ್ಪಷ್ಟ ಬಹುಮತದೊಂದಿಗೆ ಗೆದ್ದು ಸರ್ಕಾರ ರಚಿಸಲಿದೆ ಎಂದು ತಿಳಿಸಿದ್ದಾರೆ.
ಪಕ್ಷದ ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಸುಖ್‌ಜಿಂದರ್ ಸಿಂಗ್ ರಾಂಧವಾ ಮತ್ತು ಪಕ್ಷದ ಮುಖ್ಯಸ್ಥ ಗೋವಿಂದ್ ಸಿಂಗ್ ದೋಟಸಾರಾ ಮೊದಲಾದವರು ಪಾಲ್ಗೊಂಡಿದ್ದರು. ಚುಣಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಶಾಸಕರನ್ನು ಸೇಫ್ ಮಾಡಿಕೊಳ್ಳುವ ಬಗ್ಗೆಯೂ ಚರ್ಚಿಸಲಾಯಿತು. ಇದನ್ನೂ ಓದಿ: ಬಿಜೆಪಿ ಸರ್ಕಾರವಿರೋ ಮಧ್ಯಪ್ರದೇಶದಲ್ಲಿ ಈ ಬಾರಿಗೆ ಗೆಲುವು ಯಾರಿಗೆ?
ರಾಜಸ್ಥಾನದಲ್ಲಿ ಒಟ್ಟು 199 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ರಾಜ್ಯದಲ್ಲಿ 75.45% ರಷ್ಟು ಮತದಾನವಾಗಿದೆ, 2018 ರಲ್ಲಿ 74.71% ಮತದಾನವಾಗಿತ್ತು.
ಎಲ್ಲಿ ಎಷ್ಟು ಮ್ಯಾಜಿಕ್ ನಂಬರ್?
ಮಧ್ಯಪ್ರದೇಶ: ಒಟ್ಟು ಸ್ಥಾನ- 230, ಸರಳ ಬಹುಮತಕ್ಕೆ-116, ರಾಜಸ್ಥಾನ: ಒಟ್ಟು ಸ್ಥಾನ- 199, ಸರಳ ಬಹುಮತಕ್ಕೆ-100, ಛತ್ತೀಸ್ ಗಡ: ಒಟ್ಟು ಸ್ಥಾನ- 90, ಸರಳ ಬಹುಮತಕ್ಕೆ-46, ತೆಲಂಗಾಣ- ಒಟ್ಟು ಸ್ಥಾನ-119, ಸರಳ ಬಹುಮತಕ್ಕೆ-60. ಇದನ್ನೂ ಓದಿ: ಕೈ ಗ್ಯಾರಂಟಿಯೋ – ಮೋದಿ ಜನಪ್ರಿಯತೆಯೋ; ಇಂದು 4 ರಾಜ್ಯಗಳ ಚುನಾವಣಾ ಫಲಿತಾಂಶ – ಯಾರಿಗೆ ಎಲ್ಲಿ ಸಿಗುತ್ತೆ ಅಧಿಕಾರದ ಚುಕ್ಕಾಣಿ?