ಪ್ರತ್ಯೇಕ ಸಿಂಧೂ ದೇಶಕ್ಕಾಗಿ 1947ರಲ್ಲಿ ಪಾಕಿಸ್ತಾನ (Pakistan) ರಚನೆ ಆದಾಗಲೇ ಬೇಡಿಕೆ ಮಂಡಿಸಲಾಗಿತ್ತು. 1971ರಲ್ಲಿ ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾದೇಶ) ಆದ ನಂತರವೂ ಪ್ರತ್ಯೇಕತೆಯ ಬೇಡಿಕೆ ಬಲವಾಗುತ್ತಲೇ ಸಾಗಿತು. ಸಿಂಧಿ ಮಾತನಾಡುವ ಜನ ಸಿಂಧೂ ದೇಶಕ್ಕಾಗಿ ಒತ್ತಾಯಿಸುತ್ತಲೇ ಬಂದರು. ಆದ್ರೆ ಇತ್ತೀಚೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ʻಗಡಿಗಳು ಬದಲಾಗಬಹುದು, ಸಿಂಧ್ ಭಾರತಕ್ಕೆ ಮರಳಬಹುದು’ ಎಂದು ನೀಡಿದ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದ್ರಲ್ಲೂ ಮುಖ್ಯವಾಗಿ ಭಾರತ-ಪಾಕಿಸ್ತಾನದ (India – Pakistan) ನಡುವೆ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ನಿರೀಕ್ಷೆಯಂತೆಯೇ ಪಾಕಿಸ್ತಾನ ಇದನ್ನು ʻಪ್ರಚೋದನಕಾರಿ’ ಎಂದು ಖಂಡಿಸಿದ್ರೆ, ಭಾರತದಲ್ಲಿ ಗಂಭೀರ ಚರ್ಚೆ ಹುಟ್ಟುಹಾಕಿದೆ.
ರಾಜನಾಥ್ ಸಿಂಗ್ ಅವರ ಹೇಳಿಕೆ ಬಳಿಕ ಜಗತ್ತಿನಾದ್ಯಂತ ಹರಡಿರುವ ಸಿಂಧಿ ಜನ ಇದೀಗ ಸಿಂಧ್ ಪ್ರಾಂತ್ಯದಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಸಿಂಧೂ ದೇಶದ (Sindh Nation) ನಿರ್ಮಾಣಕ್ಕಾಗಿ ಭಾರತವೂ ಸೇರಿದಂತೆ ವಿಶ್ವದ ಇತರ ದೇಶಗಳ ಬೆಂಬಲಕ್ಕೆ ಮನವಿ ಮಾಡಿದ್ದಾರೆ. ಇದು ಕೇವಲ ಸಚಿವರೊಬ್ಬರ ಹೇಳಿಕೆಯಾಗಿರದೇ ವಿಭಜನೆಯಿಂದ ನೋವುಂಡು, ಇಂದಿಗೂ ಪ್ರತ್ಯೇಕ ನೆಲೆಗಾಗಿ ಹೋರಾಡುತ್ತಿರುವ ಸಿಂಧಿ ಸಮುದಾಯದ ಭಾವನೆಗಳು ಮತ್ತು ಭಾರತದ ಪ್ರಾಚೀನ ನಾಗರಿಕತೆಯ ಸ್ಮರಣೆಯಾಗಿಯೂ ಮಾರ್ಪಟ್ಟಿದೆ.
ಸಾವಿರಾರು ವರ್ಷಗಳ ಹಿಂದೆ…
ಸಿಂಧ್ ಪ್ರಾಂತ್ಯವು ಪಾಕಿಸ್ತಾನದ ಒಂದು ಭಾಗವಾಗುವ ಅದೆಷ್ಟೋ ಶತಮಾನಗಳಿಗೂ ಮೊದಲು, ಉಪಖಂಡದ ಸಂಸ್ಕೃತಿಯ ತಳಹದಿಯಾಗಿತ್ತು. ಮೊಹೆಂಜೊದಾರೊ ಮತ್ತು ಹರಪ್ಪಾದಂತಹ ಸಿಂಧೂ ಕಣಿವೆ ನಾಗರಿಕತೆಯ ಕುರುಹುಗಳು ಇದೇ ನೆಲದಲ್ಲಿವೆ. ಸಾವಿರಾರು ವರ್ಷಗಳಿಂದ ಈ ಪ್ರದೇಶವನ್ನು ‘ಸಿಂಧೂ ದೇಶ’ ಎಂದು ಕರೆಯಲಾಗುತ್ತಿತ್ತು. ಇಲ್ಲಿ ಹರಿಯುವ ಸಿಂಧೂ ನದಿಯು ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಪವಿತ್ರ ಸ್ಥಾನ ಪಡೆದಿದೆ. ರಾಜನಾಥ್ ಸಿಂಗ್ ಅವರು ತಮ್ಮ ಭಾಷಣದಲ್ಲಿ, ವಿಭಜನೆಯ ಸಮಯದಲ್ಲಿ ಪಾಕಿಸ್ತಾನದಿಂದ ವಲಸೆ ಬಂದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರನ್ನ ಸ್ಮರಿಸುವ ಮೂಲಕ, ಸಿಂಗ್ ಅವರು ಕೇವಲ ಭೂಪ್ರದೇಶದ ಬಗ್ಗೆ ಮಾತನಾಡದೇ, ಹಂಚಿಹೋದ ನಾಗರಿಕತೆಯ ಪ್ರಜ್ಞೆಯನ್ನ ಎತ್ತಿ ಹಿಡಿದಿದ್ದಾರೆ. ಇದಕ್ಕೆ ಪೂರಕವಾಗಿ, ರವೀಂದ್ರನಾಥ ಠಾಗೋರರು ರಚಿಸಿದ ನಮ್ಮ ರಾಷ್ಟ್ರಗೀತೆಯಲ್ಲೂ ʻಪಂಜಾಬ ಸಿಂಧು ಗುಜರಾತ ಮರಾಠ…ʼ ಎಂಬ ಸಾಲುಗಳಿದ್ದು, ಸಿಂಧ್ ಇಂದಿಗೂ ಭಾರತದ ಸಾಂಸ್ಕೃತಿಕ ಭೂಗೋಳದ ಅವಿಭಾಜ್ಯ ಅಂಗ ಎಂಬುದನ್ನು ನೆನಪಿಸಿದ್ದರು.
ಹರಿದು ಹಂಚಿಹೋದ ಸಿಂಧ್
ದೇಶ ವಿಭಜನೆಯ ಸಮಯದಲ್ಲಿ ಸಿಂಧ್ ಪ್ರಾಂತ್ಯವು ಮುಸ್ಲಿಂ ಸಂಖ್ಯೆ ಹೆಚ್ಚು ಹೊಂದಿದ್ದ ಕಾರಣ ಪಾಕಿಸ್ತಾನಕ್ಕೆ ಹಂಚಿಹೋಯಿತು. ಪ್ರಸ್ತುತ ಬಲೂಚಿಸ್ತಾನ್, ಪಂಜಾಬ್ ಬಳಿಕ ಸಿಂಧ್ ಪಾಕಿಸ್ತಾನದ ಮೂರನೇ ಅತಿದೊಡ್ಡ ಪ್ರಾಂತ್ಯವಾಗಿದೆ. ವಿಭಜನೆಯ ಸಂದರ್ಭದಲ್ಲಿ 71.5 ಪ್ರತಿಶತದಷ್ಟು ಮುಸ್ಲಿಮರಾಗಿದ್ದರೆ, 26.4 ಪ್ರತಿಶತದಷ್ಟು ಜನ ಸಿಂಧಿಗಳಾಗಿದ್ದರು. ಉಳಿದ ಜನಸಂಖ್ಯೆಯು ಬುಡಕಟ್ಟು ಜನಾಂಗವನ್ನ ಒಳಗೊಂಡಿತ್ತು. ಈ ಜನರಲ್ಲಿ ಹಲವರು ರಾಜಸ್ಥಾನ ಮತ್ತು ಕಚ್‌ನವರಾಗಿದ್ದರು. ವಿಭಜನೆಯ ನಂತರ, ಅನೇಕರು ಭಾರತಕ್ಕೆ ವಲಸೆ ಬಂದರು. ಉಳಿದವರ ಜನಸಂಖ್ಯೆಯೂ ಕಡಿಮೆಯಾಯಿತು. ಸಿಂಧ್ ಪ್ರಾಂತ್ಯದೊಳಗೂ ಕರಾಚಿ, ಹೈದರಾಬಾದ್, ಲರ್ಕಾನಾ, ಸುಕ್ಕೂರ್, ಥಟ್ಟಾ, ಬದಿನ್, ಶಿಕಾರ್ಪುರ್ ಮತ್ತು ಮಿರ್ಪುರ್ ಖಾಸ್‌ನಂತಹ ಜಿಲ್ಲೆಗಳಲ್ಲಿ ಸಿಂಧಿ ಹಿಂದೂಗಳ ಸಂಖ್ಯೆ ಕೇಂದ್ರೀಕೃತವಾಗಿದೆ. ಕರಾಚಿಯಲ್ಲಿ ಸಿಂಧಿ ಜನಸಂಖ್ಯೆ ದಟ್ಟವಾಗಿದೆ, ಆದರೆ ನಗರದಲ್ಲಿ ಇತರ ಜನಾಂಗೀಯ ಗುಂಪುಗಳ ಉಪಸ್ಥಿತಿಯಿಂದಾಗಿ, ಅವರು ಅಲ್ಪಸಂಖ್ಯಾತರಾಗಿ ಗುರುತಿಸಿಕೊಂಡಿದ್ದಾರೆ.
ಭುಗಿಲೇಳುತ್ತಿರುವ ಅಸಮಾಧಾನ, ಅಂತರಕ್ಕೆ ಕಾರಣ ಏನು?
ಆರಂಭದಿಂದಲೂ ಸಿಂಧಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದೊಡ್ಡ ಕಂದಕವೇ ನಿರ್ಮಾಣವಾಗಿತ್ತು, ಈಗಲೂ ಅದು ಮುಂದುವರಿದಿದೆ. ಸಿಂಧಿ ಹಿಂದೂಗಳು ಕೃಷಿ ಕಾರ್ಮಿಕರು, ಅಥವಾ ಇತರ ಉದ್ಯೋಗಗಳಲ್ಲಿ ತೊಡಗಿ ಕೆಲಸ ಮಾಡ್ತಾರೆ. ಈ ಕೆಲಸಗಳಲ್ಲಿಯೂ ಅವರು ಮುಸ್ಲಿಮರ ಕೈಕೆಳಗೆ ಕೆಲಸ ಮಾಡಬೇಕಾದ ಸ್ಥಿತಿಯಲ್ಲಿದ್ದಾರೆ. ಇದು ಸಾಲದು ಅಂತ ಸಿಂಧ್‌ನ ನೈಸರ್ಗಿಕ ಸಂಪನ್ಮೂಲಗಳಾದ ಅನಿಲ, ತೈಲ, ಗಣಿಗಳು ಹಾಗೂ ಬಂದರುಗಳನ್ನು ಪಾಕಿಸ್ತಾನ ಕೇಂದ್ರ ಸರ್ಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಸಿಂಧಿ ಹಿಂದೂಗಳನ್ನ ತುಳಿಯುತ್ತಲೇ ಬಂದಿದೆ. ಕರಾಚಿಯಂತಹ ನಗರಗಳಲ್ಲಿ ಉರ್ದು ಮಾತನಾಡುವ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಸಿಂಧಿಗಳು ತಮ್ಮ ರಾಜಕೀಯ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ, ಸಾಮಾಜಿಕ ಆರ್ಥಿಕವಾಗಿಯೂ ದುರ್ಬಲಗೊಳ್ಳುತ್ತಿದ್ದಾರೆ. ಇದು ಕಾಲಾನಂತರದಲ್ಲೂ ಅಸಮಾಧಾನ ಸೃಷ್ಟಿಗೆ ಕಾರಣವಾಗಿದೆ.
ಪ್ರತ್ಯೇಕ ಸಿಂಧೂ ದೇಶ ಬೆಂಬಲಿಸಿದ್ದ ಮುಸ್ಲಿಮರು ತಿರುಗಿ ಬಿದ್ದದ್ದು ಹೇಗೆ?
1970ರ ದಶಕದಲ್ಲಿ ಪ್ರತ್ಯೇಕ ಸಿಂಧೂ ದೇಶದ ಬೇಡಿಕೆ ತೀವ್ರಗೊಂಡಿತ್ತು. ಚಳವಳಿಯ ಮುಂಚೂಣಿ ನಾಯಕ ಜಿ.ಎಂ. ಸೈಯ್ಯದ್ ಸ್ವತಃ ಮುಸ್ಲಿಂ ಆಗಿದ್ದರು. ಮುಸ್ಲಿಂ ಲೀಗ್‌ನೊಂದಿಗೆ ಸಂಬಂಧ ಹೊಂದಿದ್ದ ನಾಯಕ ಪಾಕಿಸ್ತಾನ ರಚನೆ ಆದಾಗಿನಿಂದ ಸಿಂಧಿಗಳ ರಾಜಕೀಯ ಹಕ್ಕುಗಳು, ಸ್ಥಾನಮಾನಕ್ಕಾಗಿ ಹೋರಾಡುತ್ತಾ ಬಂದಿದ್ದರು. ಇದನ್ನು ಸಹಿಸದ ಪಾಕ್ ತನ್ನ ಕುತಂತ್ರ ಬುದ್ಧಿ ಉಪಯೋಗಿಸಿತು. ಚಳವಳಿಯನ್ನ ದುರ್ಬಲಗೊಳಿಸಲು ನರಿ ಬುದ್ದಿ ಪ್ರಯೋಗ ಮಾಡಿತು.
ಸಿಂಧೂ ದೇಶದ ಬೇಡಿಕೆಯ ಹೋರಾಟ ತೀವ್ರಗೊಂಡಿದ್ದು, ಅದಕ್ಕೆ ಮುಸ್ಲಿಮರೇ ಬೆಂಬಲವಾಗಿ ನಿಂತಿದ್ದನ್ನ ಸಹಿಸದ ಪಾಕಿಸ್ತಾನ, ತನ್ನ ಇತರ ಪ್ರದೇಶಗಳಿಂದ ಉರ್ದು ಮಾತನಾಡುವ ಮುಸ್ಲಿಮರನ್ನ ಆ ಪ್ರದೇಶಕ್ಕೆ ತುಂಬಲು ಶುರು ಮಾಡಿತು. ಮುಸ್ಲಿಂ ಪ್ರಾಬಲ್ಯ ಹೆಚ್ಚಿಸುತ್ತಾ ಹಿಂದೂಗಳ ಮೇಲೆ ದಬ್ಬಾಳಿಕೆ ಶುರುವಾಗುವಂತೆ ಮಾಡಿತು. ಇದರಿಂದ ಸಿಂಧಿ ಹಿಂದೂಗಳ ಮೇಲಿನ ಹಿಂಸಾಚಾರ ಹೆಚ್ಚಾಯಿತು.
ಇಂದಿಗೂ ನಿಲ್ಲದ ಅಸ್ಮಿತೆಯ ಕೊರಗು
1947ರ ದೇಶ ವಿಭಜನೆಯ ಸಂದರ್ಭದಲ್ಲಿ ಪಂಜಾಬಿಗಳು, ಬಂಗಾಳಿಗಳಿಗೆ ಭಾರತದಲ್ಲಿ ತಮ್ಮದೇ ಆದ ಭಾಷಾವಾರು ರಾಜ್ಯಗಳ ಆಸರೆಯಿತ್ತು. ಆದರೆ, ಸಿಂಧಿ ಸಮುದಾಯಕ್ಕೆ ಅಂತಹ ಯಾವುದೇ ನಿರ್ದಿಷ್ಟ ರಾಜ್ಯ ಸಿಗಲಿಲ್ಲ. ಅವರು ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ ಸೇರಿದಂತೆ ದೇಶದ ನಾನಾ ಮೂಲೆಗಳಲ್ಲಿ ಚದುರಿಹೋದರು. ಅವರು ತಮ್ಮ ಬದುಕನ್ನು ಯಶಸ್ವಿಯಾಗಿ ಕಟ್ಟಿಕೊಂಡರೂ, ‘ನಮ್ಮದು’ ಎಂದು ಹೇಳಿಕೊಳ್ಳುವ ಒಂದು ರಾಜ್ಯವಿಲ್ಲದ ಕೊರಗು ಅವರಲ್ಲಿ ಇಂದಿಗೂ ಇದೆ. ಈ ಹಿನ್ನೆಲೆಯಲ್ಲಿ ಸಿಂಧಿ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ರಾಜನಾಥ್ ಸಿಂಗ್, “ಸಿಂಧ್‌ನ ಜನರು ಯಾವಾಗಲೂ ನಮ್ಮವರೇ” ಎಂದು ಹೇಳುವ ಮೂಲಕ ಈ ಸಮುದಾಯದ ನೋವಿಗೆ ದನಿಯಾದರು.
ಇನ್ನೂ ಸಿಂಧೂ ನದಿ 7 ಪವಿತ್ರ ನದಿಗಳಲ್ಲಿ ಒಂದಾಗಿದೆ. ಹೀಗಾಗಿ ಭಾರತದ ಭಾಗವಾದ್ರೂ ಆಗಬಹುದು ಅಂತ ರಾಜನಾಥ್ ಸಿಂಗ್ ಆತ್ಮವಿಶ್ವಾಸದ ಹೇಳಿಕೆ ನೀಡಿದ್ದಾರೆ. ಈ ರೀತಿಯ ಪ್ರಯತ್ನ ಭಾರತ ಸರ್ಕಾರ ಯಾರಿಗೂ ಗೊತ್ತಾಗದ ರೀತಿಯಲ್ಲಿ ಮಾಡ್ತಾ ಇದ್ಯಾ ಅನ್ನೋ ಕುತೂಹಲವನ್ನೂ ಮೂಡಿಸಿದೆ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ.
ಒಟ್ಟಿನಲ್ಲಿ ರಾಜನಾಥ್ ಸಿಂಗ್ ಅವರ ಹೇಳಿಕೆ ಇತಿಹಾಸದ ನೆನಪು ಮತ್ತು ಅಸ್ಮಿತೆಯ ನಡುವೆ ಒಂದು ಹೊಸ ಸಂಚಲನ ಮೂಡಿಸಿರುವುದಂತೂ ನಿಜ. ಇದು ಪಾಕಿಸ್ತಾನಕ್ಕೆ ಆತಂಕವನ್ನು ತಂದರೆ, ಭಾರತದ ಸಿಂಧಿ ಸಮುದಾಯಕ್ಕೆ ಇದು ಅಗತ್ಯ ಸಾಂತ್ವನವನ್ನು ನೀಡಿದೆ. ಮುಂದಿನ ನಡೆ ಏನೆಂಬುದಷ್ಟೇ ಕುತೂಹಲ.





