ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿಯ ಪ್ರಕರಣದಲ್ಲಿ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದ್ದ ತೀರ್ಪನ್ನು ಮರುಪರಿಶೀಲನೆ ನಡೆಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.
ಮುಖ್ಯನಾಯಮೂರ್ತಿ ರಂಜನ್ ಗೋಗಯ್, ತೀರ್ಪು ಮರು ಪರಿಶೀಲನೆ ಸಂಬಂಧ ವಿವಿಧ ಅರ್ಜಿಗಳು ಬಂದಿದ್ದು, ಅವುಗಳನ್ನು ಆಲಿಸಲು ಪ್ರತ್ಯೇಕ ಪೀಠಗಳನ್ನು ರಚಿಸಲಾಗುತ್ತದೆ. ಅರ್ಜಿಗಳನ್ನು ಪರೀಕ್ಷಿಸಬೇಕಿದೆ. ಮುಂದೆ ಏನಾಗುತ್ತದೆ ಎನ್ನುವುದು ನೋಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
ಕೇಂದ್ರ ಸರ್ಕಾರ ಸೇರಿದಂತೆ 4 ಮಂದಿ ರಫೇಲ್ ತೀರ್ಪನ್ನು ಮರುಪರಿಶೀಲಿಸಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ಗೆ ತಪ್ಪು ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದರೆ, ಇದರ ಜೊತೆಗೆ ಆಮ್ ಆದ್ಮಿ ಪಕ್ಷದ ಮುಖಂ ಸಂಜಯ್ ಸಿಂಗ್ ಅವರು ಕೂಡ ತೀರ್ಪು ಮರುಪರಿಶೀಲನೆಯಾಗಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ.
Advertisement
Advertisement
2018 ಡಿಸೆಂಬರ್ 14ರಂದು ತೀರ್ಪು ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ಸರ್ಕಾರ, ತೀರ್ಪಿನ ಉಲ್ಲೇಖ ಇರುವ ವಾಕ್ಯದಲ್ಲಿ ಕೆಲವು ತಿದ್ದುಪಡಿಗಳಾಗಬೇಕಿದೆ ಎಂದು ಅಫಿಡವಿಟ್ ಮನವಿ ಸಲ್ಲಿಸಿತ್ತು. ಮಹಾಲೇಖಪಾಲರ ವರದಿ(ಸಿಎಜಿ) ಹಾಗೂ ಪಿಎಸಿಗೆ ಸಂಬಂಧಿಸಿದ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿತ್ತು. ಈ ದಾಖಲೆಗಳ ವಿಷಯವನ್ನು ತಪ್ಪಾಗಿ ವ್ಯಾಖ್ಯಾನ ಮಾಡಲಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೋರ್ಟ್ ಮೊರೆ ಹೊಗಿತ್ತು.
Advertisement
ಕೇಂದ್ರ ಅರ್ಜಿ ಸಲ್ಲಿಸಿದ್ದು ಯಾಕೆ?
ರಫೇಲ್ ಒಪ್ಪಂದ ಕುರಿತಂತೆ ಸಿಎಜಿ ವರದಿಯನ್ನು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಪರಿಶೀಲನೆಗೆ ಒಳಪಡಿಸಿದೆ ಎಂದು ಸುಪ್ರೀಂಕೋರ್ಟ್ ಡಿಸೆಂಬರ್ 14 ರಂದು ನೀಡಿದ ತೀರ್ಪಿನಲ್ಲಿ ಉಲ್ಲೇಖಿಸಿತ್ತು. ತೀರ್ಪಿನ 25 ಪ್ಯಾರಾದಲ್ಲಿ ಸಿಎಜಿ ವರದಿಯನ್ನು ಸಾರ್ವಜನಿಕ ಲೆಕ್ಕ ಸಮಿತಿಯ(ಪಿಎಸಿ) ಮುಂದೆ ಇಡಲಾಗಿದೆ. ಅಷ್ಟೇ ಅಲ್ಲದೇ ಇದು ಸಾರ್ವಜನಿಕವಾಗಿ ಲಭ್ಯವಿದೆ ಎಂದು ಉಲ್ಲೇಖಿಸಿತ್ತು. ಕೇಂದ್ರ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ನೀಡಿದ ಈ ವಿಚಾರಗಳನ್ನು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿತ್ತು.
ನಿಯಮಗಳ ಪ್ರಕಾರ ಸಿಎಜಿ ವರದಿಯನ್ನು ಮೊದಲು ಸಂಸತ್‍ನಲ್ಲಿ ಮಂಡಿಸಿ ನಂತರ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಪರಿಶೀಲನೆಗೆ ಕಳಿಸಬೇಕು. ಸಿಎಜಿ ವರದಿ ಸಂಸತ್ತಿಗೆ ಮಂಡನೆಯಾಗದೇ ಕೋರ್ಟ್ ತೀರ್ಪಿನಲ್ಲಿ ಉಲ್ಲೇಖವಾಗಿದ್ದು ಹೇಗೆ ಎನ್ನುವ ಪ್ರಶ್ನೆಯನ್ನು ಕಾಂಗ್ರೆಸ್ ಕೇಳಿತ್ತು. ಸುಪ್ರೀಂ ಕೋರ್ಟ್ ಈ ವಿಚಾರವನ್ನು ಉಲ್ಲೇಖಿಸಿದ ಬೆನ್ನಲ್ಲೇ ಪಿಐಎಲ್ ಸಲ್ಲಿಸಿದ ಪ್ರಮುಖ ವ್ಯಕ್ತಿಗಳಾದ ಪ್ರಶಾಂತ್ ಭೂಷಣ್, ಸಾರ್ವಜನಿಕ ಲೆಕ್ಕ ಸಮಿತಿಯ ಮುಂದೆ ಸಿಎಜಿ ವರದಿ ಸಲ್ಲಿಕೆಯಾಗಿಲ್ಲ. ಸಾರ್ವಜನಿಕವಾಗಿಯೂ ಈ ವರದಿ ಲಭ್ಯವಿಲ್ಲ. ಮೋದಿ ಸರ್ಕಾರ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿಯನ್ನು ನೀಡಿದೆ ಎಂದು ಹೇಳಿ ಕಿಡಿಕಾರಿದ್ದರು. ತೀರ್ಪು ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ಸರ್ಕಾರ ಈ ಉಲ್ಲೇಖ ಇರುವ ವಾಕ್ಯದಲ್ಲಿ ಕೆಲವು ತಿದ್ದುಪಡಿಗಳಾಗಬೇಕಿದೆ ಎಂದು ಮನವಿ ಸಲ್ಲಿಸಿ ಫೆ.15 ರಂದು ಅಫಿಡವಿಟ್ ಸಲ್ಲಿಸಿತ್ತು.
ಫೆಬ್ರವರಿ 13 ರಂದು ಸಿಎಜಿ ವರದಿ ಸಂಸತ್ತಿನಲ್ಲಿ ಮಂಡನೆಯಾಗಿದ್ದು, ಯುಪಿಎ ಮಾಡಿಕೊಂಡಿದ್ದ ರಫೇಲ್ ಖರೀದಿ ಒಪ್ಪಂದಕ್ಕೆ ಹೋಲಿಕೆ ಮಾಡಿದರೆ ಎನ್‍ಡಿಎ ಮಾಡಿಕೊಂಡಿರುವ ಒಪ್ಪಂದ ಶೇ.2.8 ಎಷ್ಟು ಅಗ್ಗ ಎಂದು ಹೇಳಿದೆ. ಇದನ್ನೂ ಓದಿ: ರಫೇಲ್ ಡೀಲ್ – ಯಾವುದು ಅಗ್ಗ? ಯಾವುದು ದುಬಾರಿ?
ಈ ಹಿಂದೆ ಸುಪ್ರೀಂ ತೀರ್ಪಿನಲ್ಲಿ ಏನಿತ್ತು?:
ರಫೇಲ್ ಖರೀದಿ ಒಪ್ಪಂದದಲ್ಲಿ ಸಂದೇಹ ಪಡುವ ಅಗತ್ಯವಿಲ್ಲ. ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನುವುದಕ್ಕೆ ಯಾವುದಕ್ಕೆ ಸಾಕ್ಷ್ಯಗಳು ಸಿಕ್ಕಿಲ್ಲ. ಗುಣಮಟ್ಟದ ವಿಮಾನ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿರುವ ಖರೀದಿ ಒಪ್ಪಂದ ಬೆಲೆಯ ಪರಾಮರ್ಶೆ ಮಾಡುವುದು ಕೋರ್ಟ್ ಕೆಲಸವಲ್ಲ. ದೇಶಕ್ಕೆ ನಾಲ್ಕು ಮತ್ತು ಐದನೇಯ ತಲೆಮಾರಿನ ಫೈಟರ್ ಜೆಟ್ ಭಾರತೀಯ ವಾಯುಸೇನೆಗೆ ನಿಯೋಜಿಸುವ ಅಗತ್ಯವಿದೆ. ಖರೀದಿ, ಬೆಲೆ ನಿರ್ಣಯ, ದೇಶಿ ಪಾಲುದಾರ ಆಯ್ಕೆ ವಿಚಾರದಲ್ಲಿ ಮಧ್ಯಪ್ರವೇಶಿಸುವ ಅಗತ್ಯ ಕಂಡು ಬರುವುದಿಲ್ಲ. ಒಪ್ಪಂದದಲ್ಲಿ ಭಾಗಿಯಾದ ಎಲ್ಲರೂ ಖರೀದಿ ಹೇಗೆ ನಡೆಯಿತು ಎನ್ನುವ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ತುಲಾತ್ಮಕ ಬೆಲೆ ವಿವರವನ್ನು ನೀಡಿ ವಿಮಾನಗಳನ್ನು ಖರೀದಿಸಿ ಎಂದು ಹೇಳುವುದು ಕೋರ್ಟ್ ಕೆಲಸವಲ್ಲ. ನಾವು ಕೇಳಿದ ಪ್ರಶ್ನೆಗಳಿಗೆ ಸಿಕ್ಕಿದ ಉತ್ತರಿಂದ ನಮ್ಮ ಸಂಶಯ ಪರಿಹಾರವಾಗಿದ್ದು ತೃಪ್ತಿಯಾಗಿದೆ. ರಕ್ಷಣೆಯಂತಹ ಸೂಕ್ಷ್ಮ ವಿಚಾರದಲ್ಲಿ ತನಿಖೆಗೆ ಆದೇಶ ನೀಡುವುದು ಸರಿಯಲ್ಲ. ದೇಶಿ ಪಾಲುದಾರನ ಆಯ್ಕೆ ಮಾಡುವುದು ಕಂಪನಿಗೆ ಬಿಟ್ಟ ವಿಚಾರ. ಈ ವಿಚಾರದಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿತ್ತು.
ಏನಿದು ಪ್ರಕರಣ?:
ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ವಕೀಲ ಎಂ.ಎಲ್ ಶರ್ಮಾ, ವಿನೀತಾ ದಾಂಡ, ಆಪ್ ನಾಯಕ ಸಂಜಯ್ ಸಿಂಗ್ ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ, ಅರುಣ್ ಶೌರಿ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದರು. ರಫೇಲ್ ಒಪ್ಪಂದವನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ವಕೀಲರು ಆಗ್ರಹಿಸಿದ್ದರು. ಈ ಅರ್ಜಿಗಳನ್ನು ಒಟ್ಟಾಗಿಸಿದ್ದ ಮುಖ್ಯ.ನ್ಯಾ ರಂಜನ್ ಗೋಗಯ್ ನೇತೃತ್ವದ ನ್ಯಾ. ಎಸ್‍ಕೆ ಕೌಲ್, ನ್ಯಾ. ಕೆಎಂ ಜೋಸೆಫ್ ಅವರಿದ್ದ ತ್ರಿಸದಸ್ಯ ಪೀಠ ಸುದೀರ್ಘ ವಿಚಾರಣೆ ನಡೆಸಿತ್ತು. 2018ರ ನವೆಂಬರ್ 14 ರಂದು ವಿಚಾರಣೆ ಅಂತ್ಯಗೊಳಿಸಿದ್ದ ಸುಪ್ರೀಂಕೋರ್ಟ್ ಡಿಸೆಂಬರ್ 14ರಂದು ತೀರ್ಪು ಪ್ರಕಟಿಸಿ ಎಲ್ಲ ಅರ್ಜಿಗಳನ್ನು ವಜಾಗೊಳಿಸಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv