ಮಂಡ್ಯ: ರೈತ ಹೋರಾಟಗಾರ, ಶಾಸಕ ಪುಟ್ಟಣ್ಣಯ್ಯ ವಿಧಿವಶರಾಗ್ತಿದ್ದಂತೆ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಮುಂದಿನ ಚುನಾವಣೆಗೆ ಸ್ಪರ್ಧಿಸ್ತಾರಾ ಎಂಬ ಪ್ರಶ್ನೆ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ದರ್ಶನ್ ಪುಟ್ಟಣ್ಣಯ್ಯ, ಚುನಾವಣೆಗೆ ಸ್ಪರ್ಧೆ ಮಾಡುವ ಕುರಿತು ನಾನು ಇನ್ನೂ ನಿರ್ಧರಿಸಿಲ್ಲ. ಹಸಿರುಸೇನೆ ಕಾರ್ಯಕರ್ತರು ಮತ್ತು ಬೆಂಬಲಿಗರ ಜೊತೆ ಚರ್ಚಿಸಿ ತೀರ್ಮಾನಿಸ್ತೀನಿ ಎಂದು ಹೇಳಿದ್ದಾರೆ.
Advertisement
ಮಂಡ್ಯದಲ್ಲಿ ಮಾತನಾಡಿದ ದರ್ಶನ್, ಪುಟ್ಟಣ್ಣಯ್ಯ ಅವರ ಹನ್ನೊಂದನೇ ದಿನದ ಕಾರ್ಯವನ್ನು, ಅವರ ಆದರ್ಶಕ್ಕೆ ತಕ್ಕಂತೆ ‘ತಿಥಿ ಬಿಡಿ-ಸಸಿ ನೆಡಿ’ ಎಂಬ ಕಾರ್ಯಕ್ರಮದ ಮೂಲಕ ವಿನೂತನವಾಗಿ ನೆರವೇರಿಸೋದಾಗಿ ಹೇಳಿದರು. ಫೆಬ್ರವರಿ 28 ರಂದು ಹನ್ನೊಂದನೇ ದಿನದ ಕಾರ್ಯವನ್ನು ಸಸಿ ನೆಡುವ ಮೂಲಕ ಕ್ಯಾತನಹಳ್ಳಿಯಲ್ಲಿ ಆಚರಿಸಲಾಗುವುದು ಎಂದು ತಿಳಿಸಿದ್ರು. ಪುಟ್ಟಣ್ಣಯ್ಯ ಅವರ ಹೋರಾಟಕ್ಕೆ ಗೌರವವಾಗಿ ರೈತರು ಸಂಜೆ ನುಡಿ ನಮನ ಸಲ್ಲಿಸಲಿದ್ದಾರೆ. ಕಾಯಕ ಪ್ರಶಸ್ತಿ ವಿತರಿಸುವುದರ ಜೊತೆಗೆ ನಾಟಕ ಕೂಡ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ರು. ಇದೇ ಸಂದರ್ಭದಲ್ಲಿ ಪುಟ್ಟಣ್ಣಯ್ಯ ಅವರ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವ ಬಗ್ಗೆ ಕುಟುಂಬ ವರ್ಗ ತೆಗೆದುಕೊಳ್ಳುತ್ತಿರುವ ತೀರ್ಮಾನದ ಬಗ್ಗೆಯೂ ದರ್ಶನ್ ಮಾತನಾಡಿದ್ರು.
Advertisement
Advertisement
ನಾನು ರೈತ ಪರ ಚಳುವಳಿಗೆ ಧುಮುಕುವ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಪುಟ್ಟಣ್ಣಯ್ಯ ಕುಟುಂಬದಿಂದ ಮುಂದೆ ಯಾರಾದರೂ ಚುನಾವಣೆಗೆ ನಿಲ್ಲುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಈಗಷ್ಟೇ ತಂದೆ ವಿಧಿವಶರಾಗಿದ್ದಾರೆ. ನಾನು ಅಮೆರಿಕದಲ್ಲಿ ಇದ್ದರೂ ರೈತ ಪರ ಕಾಳಜಿ ಯಾವಾಗಲೂ ಇದೆ. ಈಗ ಅವರು ಇಲ್ಲದಿದ್ದಾಗ ನಾವು ಒಂದಷ್ಟು ಬದಲಾವಣೆ ಮಾಡಿಕೊಳ್ಳಬೇಕಿದೆ. ವಿದೇಶದಲ್ಲಿ ಒಂದಷ್ಟು ಕಂಪೆನಿ ನಡೆಸುತ್ತಿದ್ದೇನೆ. ಇಲ್ಲಿಗೆ ವಾಪಸ್ ಬರಬೇಕಾದ್ರೆ ಏನು ಮಾಡಬೇಕು ಎಂಬುದನ್ನೆಲ್ಲ ಮುಂದಿನ ವಾರ ನಿರ್ಧರಿಸುತ್ತೇನೆ. ರಾಜಕೀಯವಾಗಿ ಯಾವ ಮುಖಂಡರ ಜೊತೆಗೂ ಇನ್ನೂ ಚರ್ಚೆ ನಡೆಸಿಲ್ಲ. ನಮ್ಮ ತಂದೆ ಯಾವಾಗಲೂ ಬೇರೆಯವರಿಗೆ ಒಳ್ಳೆಯದು ಮಾಡು ಅಂತಿದ್ದರು. ಸಮಾನತೆ ಬಗ್ಗೆ ಮಾತನಾಡುತ್ತಿದ್ದರು. ಅವರು ಜೀವಮಾನಪೂರ್ತಿ ರೈತರಿಗಾಗಿ ದುಡಿದರು. ರೈತರ ಬಗ್ಗೆ ಅವರಿಗಿರುವ ಪ್ರೀತಿ ನಮಗೂ ಇದೆ. ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ದರ್ಶನ್ ತಿಳಿಸಿದ್ರು.