ನವದೆಹಲಿ: ಸದ್ಯ ದೇಶಾದ್ಯಂತ ಸನಾತನ ಧರ್ಮದ (Sanatana Dharma) ವಿಚಾರದ್ದೇ ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೇ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ (Gajendra Singh Shekhawat) ಅವರು, ಸನಾತನ ಧರ್ಮದ ವಿರುದ್ಧ ಮಾತನಾಡುವವರ ನಾಲಿಗೆ ಹಾಗೂ ಕಣ್ಣುಗಳನ್ನು ಕಿತ್ತು ಹಾಕಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯ ಪರಿವರ್ತನಾ ಸಂಕಲ್ಪ ಯಾತ್ರೆಯ (Parivartan Sankalp Yatra) ಸಂದರ್ಭದಲ್ಲಿ ರಾಜಸ್ಥಾನದ ಬಾರ್ಮರ್‌ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಪೂರ್ವಜರು ತಮ್ಮ ಪ್ರಾಣದ ಹಂಗು ತೊರೆದು ಸಂರಕ್ಷಿಸಿದ ಸನಾತನ ಧರ್ಮವನ್ನು ನಿರ್ನಾಮ ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸನಾತನ ಧರ್ಮದ ತತ್ವಗಳ ವಿರುದ್ಧ ಹೋರಾಡಲು INDIA ಒಕ್ಕೂಟ ರಚಿಸಿದೆ: ಡಿಎಂಕೆ ನಾಯಕ ಪೊನ್ಮುಡಿ ವಿವಾದಾತ್ಮಕ ಹೇಳಿಕೆ
ಇನ್ನು ಮುಂದೆ ನಾವು ಯಾರನ್ನೂ ಸಹಿಸುವುದಿಲ್ಲ. ಸನಾತನ ಧರ್ಮದ ವಿರುದ್ಧ ಮಾತನಾಡಿದವರ ನಾಲಿಗೆ ಹಾಗೂ ಕಣ್ಣನ್ನು ಕಿತ್ತು ಹಾಕುತ್ತೇವೆ ಎಂದು ಸಚಿವರು ಎಚ್ಚರಿಕೆ ನೀಡಿದರು. ಅಲ್ಲದೆ ಯಾರೇ ಆಗಲಿ ಸನಾತನ ಧರ್ಮದ ವಿರುದ್ಧ ಮಾತನಾಡಿ ದೇಶದಲ್ಲಿ ತಮ್ಮ ರಾಜಕೀಯ ಶಕ್ತಿ ಮತ್ತು ಸ್ಥಾನಮಾನವನ್ನು ಸ್ಥಾಪಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಈ ಹಿಂದೆ ಸಚಿವರು ರಾಜಸ್ಥಾನದ ಸಚಿವ ಶಾಂತಿ ಧರಿವಾಲ್ (Shanti Dhariwal) ವಿರುದ್ಧ ವಾಗ್ದಾಳಿ ನಡೆಸಿದ್ದರು. 2022ರ ಮಾರ್ಚ್ ನಲ್ಲಿ ರಾಜ್ಯ ವಿಧಾನಸಭೆಯಲ್ಲಿ ಅತ್ಯಾಚಾರ ಪ್ರಕರಣವನ್ನು ಸಮರ್ಥಿಸಿಕೊಳ್ಳಲು ರಾಜಸ್ಥಾನ ಪುರುಷರ ಪ್ರದೇಶ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಚಿವರು, ಧರಿವಾಲ್ ಅವರನ್ನು ಅರಬ್ಬೀ ಸಮುದ್ರಕ್ಕೆ ಎಸೆಯಬೇಕು ಎಂದು ಕಿಡಿಕಾರಿದ್ದರು.
ರಾಜಸ್ಥಾನವು ನಿಜವಾಗಿಯೂ ಪುರುಷರ ರಾಜ್ಯವಾಗಿದೆ. ಇಲ್ಲಿರುವ ಪುರುಷತ್ವದ ಕಾರಣಕ್ಕಾಗಿಯೇ ಹಿಂದುತ್ವ, ಸನಾತನ ಧರ್ಮವು ಇಂದು ಭಾರತದಲ್ಲಿ ಜೀವಂತವಾಗಿದೆ ಎಂದು ತಿಳಿಸಿದ್ದರು.
Web Stories