ಬೆಂಗಳೂರು: ಆಗಸ್ಟ್ 26ಕ್ಕೆ ಕರೆ ನೀಡಿದ್ದ ಮಡಿಕೇರಿ ಚಲೋ ನಡೆಸುವುದಿಲ್ಲ. ವಿರೋಧ ಪಕ್ಷದ ನಾಯಕನಾಗಿ ನಾನು ಕಾನೂನು ಉಲ್ಲಂಘನೆ ಮಾಡಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ತಮ್ಮ ಕಾರಿಗೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಡಿಕೇರಿ ಚಲೋ ಮಾಡಲು ಜಿಲ್ಲಾಧಿಕಾರಿ, ಎಸ್‌ಪಿ ಅನುಮತಿ ಕೊಟ್ಟಿಲ್ಲ. ಈ ಸಂಬಂಧ ಪಕ್ಷದ ಶಾಸಕರು, ಅಧ್ಯಕ್ಷರ ಜೊತೆ ಚರ್ಚಿಸಿ ತೀರ್ಮಾನ ಮಾಡಿದ್ದೇವೆ. ಮಡಿಕೇರಿ ಚಲೋ ಮುಂದೂಡುತ್ತೇವೆ. ಕಾನೂನು ಉಲ್ಲಂಘನೆ ಮಾಡಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮಡಿಕೇರಿ ಚಲೋಗೆ ನಿಷೇಧಾಜ್ಞೆ ಅಡ್ಡಿ – ಕಾಂಗ್ರೆಸ್ ಮುಂದಿನ ನಡೆ ಏನು?
Advertisement
Advertisement
ಅತಿವೃಷ್ಟಿ ಹಾನಿ ಪರಿಶೀಲನೆಗೆ ಕೊಡಗಿಗೆ ಹೋಗಿದ್ದಾಗ ಕೆಲವರು ಕೋಳಿ ಮೊಟ್ಟೆ ಎಸೆದರು. ಆಗ ಪೊಲೀಸರು ಮಾತ್ರ ಸುಮ್ಮನೆ ನಿಂತಿದ್ದರು, ಏನೂ ಮಾಡಲಿಲ್ಲ. ನಮ್ಮ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿದ್ರೆ ಹೊರತು ಬಿಜೆಪಿ, ಭಜರಂಗದಳ ಕಾರ್ಯಕರ್ತರ ಮೇಲೆ ಏನೂ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Advertisement
ಕೊಡಗಿಗೆ ಬರಲಿ ನಾವು ನೋಡ್ಕೋತೀವಿ ಅಂತಾ ಬೋಪಯ್ಯ ಹೇಳ್ತಾರೆ. ನಾವೇನು ಸ್ವಾತಂತ್ರ್ಯ ಭಾರತದಲ್ಲಿ ಇದ್ದೇವಾ? ನನಗೆ ಸವಾಲು ಹಾಕ್ತಾರೆ ಇವರು. ರೆಡ್ಡಿ ಬ್ರದರ್ಸ್ ಹೀಗೆ ಸವಾಲು ಹಾಕಿ ಅವರ ಆಟಾಟೋಪದ ವಿರುದ್ಧ ಪಾದಯಾತ್ರೆ ಮಾಡಿದ್ವಿ. ಬಿಜೆಪಿ ಜನಜಾಗೃತಿ ಸಮಾವೇಶ ಮಾಡಲು ಹೊರಟಿದ್ದು ದ್ವೇಷದಿಂದ. ನಾನು ಮಡಿಕೇರಿ ಚಲೋ ಘೋಷಣೆ ಮಾಡಿದ ಬಳಿಕ ಅದರ ಮಾರನೇ ದಿನ ಬಿಜೆಪಿ ಅವರು ಘೋಷಣೆ ಮಾಡಿದ್ರು. ನಮ್ಮ ಮೇಲೆ ಕುಟಿಲ ಪ್ರಯತ್ನ ಮಾಡಿ ಷಡ್ಯಂತ್ರ ಮಾಡಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಸಾವರ್ಕರ್ ರಥಯಾತ್ರೆಗೆ ಬಿಎಸ್‌ವೈ ಚಾಲನೆ- ಸಿದ್ದರಾಮಯ್ಯಗೆ ಠಕ್ಕರ್ ಕೊಡಲು ಬಿಜೆಪಿ ಪ್ಲ್ಯಾನ್
Advertisement
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನೇ ಮುಂದಿಟ್ಟುಕೊಂಡು ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್ಸಿನ ʼಮಡಿಕೇರಿ ಚಲೋʼಗೆ ಕೊಡಗು ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಜಿಲ್ಲಾಡಳಿತ ಬುಧವಾರದಿಂದ ಶುಕ್ರವಾರದವರೆಗೆ ನಿಷೇಧಾಜ್ಞೆ ಜಾರಿ ಮಾಡಿದೆ. ಈ ಹಿನ್ನೆಲೆ ಮಡಿಕೇರಿ ಚಲೋ ನಡೆಸುವುದಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.