Connect with us

Latest

ಬಿಹಾರದಲ್ಲಿ ಎನ್‌ಆರ್‌ಸಿ ಜಾರಿಯಿಲ್ಲ – ನಿತೀಶ್ ಕುಮಾರ್

Published

on

ಪಾಟ್ನಾ: ಬಿಹಾರದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಜಾರಿ ಮಾಡಲು ಬಿಡುವುದಿಲ್ಲ ಎಂದು ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.

ಬಿಹಾರದಲ್ಲಿ ಬಿಜೆಪಿ ಜೊತೆ ಜೆಡಿಯು ಮೈತ್ರಿ ಮಾಡಿಕೊಂಡಿದೆ. ಈಗ ನಿತೀಶ್ ಕುಮಾರ್ ಈ ನಿರ್ಧಾರ ಪ್ರಕಟಿಸಿದ್ದರಿಂದ ಬಿಜೆಪಿಗೆ ಇರಿಸುಮುರಿಸು ಆಗಿದೆ.

ಈ ಹಿಂದೆ ಪಶ್ಚಿಮ ಬಂಗಳಾದ ಮಮತಾ ಬ್ಯಾನರ್ಜಿ, ಕೇರಳದ ಪಿಣರಾಯಿ ವಿಜಯನ್, ಮಧ್ಯಪ್ರದೇಶದ ಕಮಲ್‍ನಾಥ್, ಒಡಿಶಾದ ನವೀನ್ ಪಟ್ನಾಯಕ್ ನಮ್ಮ ರಾಜ್ಯದಲ್ಲಿ ಎನ್‌ಆರ್‌ಸಿ ಜಾರಿ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದರು.

ಪೌರತ್ವ ಕಾಯ್ದೆಯನ್ನು ಸಂಸತ್ತಿನಲ್ಲಿ ಜೆಡಿಯು ಬೆಂಬಲಿಸಿದ್ದಕ್ಕೆ ಚುನಾವಣಾ ತಂತ್ರಗಾರ ಪಕ್ಷದ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಆಕ್ಷೇಪ ವ್ಯಕ್ತಪಡಿಸಿದ್ದರು.

ಸದ್ಯ ದೇಶಾದ್ಯಂತ ಎನ್‌ಆರ್‌ಸಿ ಜಾರಿ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಎನ್‌ಆರ್‌ಸಿ ಜಾರಿ ತರುವ ಸಂಬಂಧ ಸಿದ್ಧತೆಗಳು ನಡೆಯುತ್ತಿವೆ. 2003ರ ಪೌರತ್ವ ನಿಯಮಗಳ ಅನುಗುಣವಾಗಿ ಎನ್‌ಆರ್‌ಸಿ ನಿಯಮಗಳನ್ನು ಸಿದ್ಧಪಡಿಸಲಾಗುತ್ತಿದೆ. ನಿಯಮಗಳನ್ನು ರೂಪಿಸಿದ ಮೇಲೆ ಜಾರಿ ತರುವ ಬಗ್ಗೆ ತಿಳಿಸಲಾಗುವುದು ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, ದೇಶದ್ಯಾಂತ ಎನ್‌ಆರ್‌ಸಿ ಜಾರಿ ತರುವ ಸಂಬಂಧ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಈ ಸಂಬಂಧ ನಿಯಮಗಳನ್ನು ರೂಪಿಸುತ್ತಿದ್ದೇವೆ. ಆದರೆ ಎನ್‌ಆರ್‌ಸಿ ಜಾರಿಗೆ ಯಾವುದೇ ದಿನಾಂಕ ಇದುವರೆಗೂ ನಿಗದಿ ಮಾಡಿಲ್ಲ. ಎನ್‍ಆರ್‍ಸಿ ಶೀಘ್ರದಲ್ಲಿ ಜಾರಿ ಆಗುವುದಿಲ್ಲ. ಸೂಕ್ತ ಸಮಯ ನೋಡಿಕೊಂಡು ಜಾರಿ ಮಾಡಲಿದ್ದೇವೆ ಎಂದರು.

ಎನ್‌ಆರ್‌ಸಿ ಮೂಲಕ ದೇಶದ ಎಲ್ಲ ಮುಸ್ಲಿಮರನ್ನು ಹೊರ ಹಾಕಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ. ಆದರೆ ಭಾರತೀಯ ನಾಗರಿಕರಿಗೆ ಯಾವುದೇ ತೊಂದರೆ, ಕಿರುಕುಳ ಆಗುವುದಿಲ್ಲ ಎಂದು ಕಿಶನ್ ರೆಡ್ಡಿ ಸ್ಪಷ್ಟಪಡಿಸಿದರು.

Click to comment

Leave a Reply

Your email address will not be published. Required fields are marked *