ಬೆಂಗಳೂರು: ಪೌರಾಡಳಿತ ಮತ್ತು ಬಂದರು ಒಳನಾಡು ಸಾರಿಗೆ ಸಚಿವರಾಗಿರುವ ರಮೇಶ್ ಜಾರಕಿಹೊಳಿ ಅವರು ಬಿಜೆಪಿಯತ್ತ ಮುಖ ಮಾಡುತ್ತಾರಾ ಎನ್ನುವ ಅನುಮಾನವೊಂದು ಇದೀಗ ರಾಜಕೀಯ ವಲಯದಲ್ಲಿ ಎದ್ದಿದೆ.
ಯಾಕಂದ್ರೆ ರಮೇಶ್ ಜಾರಕಿಹೊಳಿ ಅವರು ಇಂದಿನ ಕ್ಯಾಬಿನೆಟ್ ಸಭೆಗೆ ಗೈರಾಗಿದ್ದಾರೆ. ಇದೂವರೆಗೂ 12 ಕ್ಯಾಬಿನೆಟ್ ಸಭೆಗಳು ನಡೆದಿದ್ದು, ಇವುಗಳಲ್ಲಿ ಸಚಿವರು ಕೇವಲ 2 ಸಭೆಗಷ್ಟೇ ಹಾಜರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಸಾಹುಕಾರ ಬಿಜೆಪಿಯತ್ತ ಮುಖಮಾಡ್ತಿದ್ದಾರಾ ಅನ್ನೋ ಪ್ರಶ್ನೆ ಎದ್ದಿದೆ.
ಬೆಳಗಾವಿ ಅಧಿವೇಶನದ ಬಗ್ಗೆ ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲವಿದೆ. ಈ ಹಿಂದೆಯೂ ರಮೇಶ್ ಜಾರಕಿಹೊಳಿಯವರು ಕೆಲ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಬಲವಂತವಾಗಿ ಕಳೆದ ಕ್ಯಾಬಿನೆಟ್ ಸಭೆಗೆ ಹಾಜರಾಗಿದ್ದರು ಎನ್ನಲಾಗಿತ್ತು.
ಇದೀಗ 12 ಸಭೆಗಳಲ್ಲಿ 2 ಸಭೆಗಳಲ್ಲಿ ಮಾತ್ರ ಹಾಜರಿ ಹಾಕಿರುವ ಸಚಿವರು ಇನ್ನೂ ಕೂಡ ತಮ್ಮ ಅಸಮಾಧಾನವನ್ನು ಮುಂದುವರಿಸಿದ್ದಾರಾ ಅನ್ನೋ ಅನುಮಾನವೊಂದು ಎದ್ದು ಕಾಣುತ್ತಿದೆ. ಸಚಿವರು ಮಾತ್ರ, ನನಗೆ ಯಾವುದೇ ರೀತಿಯ ಅಸಮಾಧಾನವಿಲ್ಲ. ಎಲ್ಲ ಮಾಧ್ಯಮಗಳ ಸೃಷ್ಟಿ ಅಂತ ಹೇಳುತ್ತಿದ್ದಾರೆ. ಆದ್ರೆ ಜಾರಕಿಹೊಳಿ ಬ್ರದರ್ಸ್ ಹಾಗೂ ಕಾಂಗ್ರೆಸ್ ನಡುವೆ ಶೀತಲ ಸಮರ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರು ಕ್ಯಾಬಿನೆಟ್ ಸಭೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಒಟ್ಟಿನಲ್ಲಿ ಕ್ಯಾಬಿನೆಟ್ ಮೀಟಿಂಗ್ ಗೆ ಸಚಿವರ ಗೈರು ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಸಾಕಷ್ಟು ಪರಿಣಾಮ ಬೀಳುವ ಸಾಧ್ಯತೆಗಳಿವೆ.
ಸಚಿವ ರಮೇಶ್ ಜಾರಕಿಹೊಳಿ ನಡೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv