Connect with us

ಮಂಡ್ಯ ರಾಜಕಾರಣಕ್ಕೆ ಮತ್ತೊಬ್ಬ ಗೌಡ್ತಿ ಎಂಟ್ರಿ?

ಮಂಡ್ಯ ರಾಜಕಾರಣಕ್ಕೆ ಮತ್ತೊಬ್ಬ ಗೌಡ್ತಿ ಎಂಟ್ರಿ?

ಮಂಡ್ಯ: ಜಿಲ್ಲೆಯಲ್ಲಿ ರಾಜಕಾರಣಕ್ಕೆ ಮತ್ತೊಬ್ಬ ಗೌಡ್ತಿ ಎಂಟ್ರಿ ಕೊಡಲಿದ್ದಾರೆ ಅಂತ ಹೇಳಲಾಗಿದೆ. ಮಾಜಿ ಸಂಸದೆ ರಮ್ಯಾ ಬಳಿಕ ಈಗ ಜೆಡಿಎಸ್ ಪಾಳಯದಲ್ಲಿ ಮತ್ತೊಬ್ಬ ಗೌಡ್ತಿ ಕಾಣಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ.

ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಇರುವಾಗಲೇ ಮಂಡ್ಯದ ನಾಗಮಂಗಲದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಜೆಡಿಎಸ್ ಬಂಡಾಯ ಶಾಸಕ ಚೆಲುರಾಯಸ್ವಾಮಿ ಕಾಂಗ್ರೆಸ್ ಕದ ತಟ್ಟಿದ್ದು, ಅವರ ಎದುರಾಳಿಗಳು, ಮಾಜಿ ಶಾಸಕರು ಆದ ಎಲ್‍ಆರ್ ಶಿವರಾಮೇಗೌಡ ಮತ್ತು ಸುರೇಶ್‍ಗೌಡ ಜೆಡಿಎಸ್ ಟಿಕೆಟ್‍ಗಾಗಿ ಪೈಪೋಟಿ ನಡೆಸಿದ್ದಾರೆ. ಇದರ ಬೆನ್ನಲ್ಲೇ ಮಹಿಳಾ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಅವರೇ ಐಆರ್‍ಎಸ್ ಆಫೀಸರ್ ಲಕ್ಷ್ಮಿ ಅಶ್ವಿನ್ ಗೌಡ.

2012ರ ಬ್ಯಾಚ್‍ನ ಐಆರ್‍ಎಸ್ ಆಫೀಸರ್ ಲಕ್ಷ್ಮಿ ಅಶ್ವಿನ್ ಗೌಡ, ಸದ್ಯ ರೈಲ್ವೆ ಇಲಾಖೆಯಲ್ಲಿ ಸಹಾಯಕ ಹಣಕಾಸು ಅಧಿಕಾರಿ. ಇವರು ನಾಗಮಂಗಲ ಕ್ಷೇತ್ರದಲ್ಲಿ ಕಳೆದ ಕೆಲ ದಿನಗಳಿಂದ ಹೆಚ್ಚಾಗಿ ಕಾಣಿಸಿಕೊಳ್ತಿದ್ದಾರೆ. ತಾಲೂಕಿನ ಸೊಸೆಯೂ ಆಗಿರೋ ಲಕ್ಷ್ಮಿ ಅಶ್ವಿನ್ ಗೌಡ, ತಮ್ಮ ಎನ್‍ಜಿಓ ಮೂಲಕ ಎಲ್ಲಾ ಹಳ್ಳಿಗಳಿಗೂ ಕುಡಿಯುವ ನೀರು ಪೂರೈಸ್ತಿದ್ದಾರೆ. ಹೀಗಾಗಿ ಇವರೇ ಜೆಡಿಎಸ್ ಅಭ್ಯರ್ಥಿ ಆಗ್ತಾರೆ ಅಂತಾ ಜನ ಮಾತಾಡಿಕೊಳ್ತಿದ್ದಾರೆ.

ಈ ತಾಲೂಕು ಅತ್ಯಂತ ಬರಪೀಡಿತವಾಗಿದೆ. ಜೀವನಾಧಾರ ಒದಗಿಸುತ್ತಿದ್ದೇವೆ. ನನ್ನದೇ ಆದ ಸೇವೆ ಮಾಡಬೇಕು ಅಂತ ಬಂದಿದ್ದೇನೆ ಅಂತಾರೆ ಲಕ್ಷ್ಮಿ ಅಶ್ವಿನ್ ಗೌಡ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‍ನ ಮಾಜಿ ಶಾಸಕ ಸುರೇಶ್ ಗೌಡ, ಇದು ಪ್ರಜಾಪ್ರಭುತ್ವ. ಇಲ್ಲಿ ಯಾರು ಬೇಕಾದರೂ ಸ್ಪರ್ಧೆ ಮಾಡಬಹುದು ಅಂತಾರೆ. ಅಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಲು ನಾನೂ ಪ್ರಯತ್ನ ಮಾಡ್ತಿದ್ದೀನಿ ಅಂತ ಹೇಳಿಕೊಂಡಿದ್ದಾರೆ.

ಒಟ್ಟಾರೆ ನಾಗಮಂಗಲದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಲು ಪೈಪೋಟಿ ಹೆಚ್ಚಿದೆ. ಇವರಲ್ಲಿ ಯಾರಿಗೆ ಟಿಕೆಟ್ ಸಿಗುತ್ತೆ ಅನ್ನೋದು ಇನ್ನೂ ಕೆಲವೇ ದಿನಗಳಲ್ಲಿ ಪಕ್ಕಾ ಆಗುವ ನಿರೀಕ್ಷೆಯಿದೆ.