ಶಿವಮೊಗ್ಗ: ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (ಅಪ್ಪ-ಮಕ್ಕಳ) ಕುತಂತ್ರದಿಂದ ನನ್ನನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ. ಆದರೆ ಇದು ತಾತ್ಕಾಲಿಕವಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಸೇರುತ್ತೇನೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ (Eshwarappa) ಸವಾಲು ಹಾಕಿದರು.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಎಳಸು ರಾಜ್ಯಾಧ್ಯಕ್ಷ ವಿಜಯೇಂದ್ರ (Vijayendra) ಅವರ ಅಪ್ಪ ಯಡಿಯೂರಪ್ಪನ ಮಾತು ಕೇಳಿ ಉಚ್ಚಾಟನೆ ಮಾಡಿದ್ದಾರೆ. ನಮಗೆ ಬಹಳ ನೋವುಂಟು ಮಾಡಿದೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಬಿಜೆಪಿ ಕಟ್ಟಿದ ನಿಮಗೆ ಹೀಗಾಗಬಾರದಿತ್ತು ಎನ್ನುತ್ತಾರೆ. ಬಿಜೆಪಿಗೆ ವಿಜಯೇಂದ್ರನ ಕೊಡುಗೆ ಶೂನ್ಯವೆಂದು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಹೇಳುತ್ತಿದ್ದಾರೆ ಎಂದರು. ಇದನ್ನೂ ಓದಿ: ಮುಸ್ಲಿಂ ಮುಖಂಡರು ಅವರ ಹುಡುಗರಿಗೆ ಬುದ್ಧಿ ಹೇಳಬೇಕು: ಮುತಾಲಿಕ್
ಯಡಿಯೂರಪ್ಪ ಅವರು ಡೂಪ್ಲಿಕೇಟ್ ಬಿಜೆಪಿ ಕಾರ್ಯಕರ್ತ ಆಗಿದ್ದಾರೆ. ಅವರು ಕೆಜೆಪಿಗೆ ಹೋಗಿ ಬಂದಿದ್ದಾರೆ. ರಾಘವೇಂದ್ರ ಸೋತ ಬಳಿಕ ಒಂದು ಸಮಸ್ಯೆ ನಿವಾರಣೆ. ಲೋಕಸಭೆ ಚುನಾವಣೆ ಬಳಿಕ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಇದೊಂದು ಸಮಸ್ಯೆ ನಿವಾರಣೆ ಆದಂತಾಗಲಿದೆ. ಇನ್ನೂ ನಾನು ಗೆದ್ದ ಕೂಡಲೇ ವಿಜಯೇಂದ್ರನ ಅಪ್ಪ ಯಡಿಯೂರಪ್ಪ (Yediyurappa) ಬಂದು ಬಿಜೆಪಿಗೆ ಕರೆದುಕೊಂಡು ಹೋಗಲಿದ್ದಾರೆ ಎಂದು ತಿಳಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗೆ ಹೋಗಿದ್ದರು. ಇದೀಗ ಯಡಿಯೂರಪ್ಪ ಅವರ ಮನೆಗೆ ಹೋಗಿ ಶೆಟ್ಟರ್ ಅವರನ್ನು ಮತ್ತೆ ಕರೆದುಕೊಂಡು ಬಂದು ಅವರಿಗೆ ಬೆಳಗಾವಿಯ ಎಂಪಿ ಟಿಕೆಟ್ ಕೊಟ್ಟಿದ್ದಾರೆ. ಅಪ್ಪ-ಮಕ್ಕಳ ಷಡ್ಯಂತ್ರದಿಂದ ಹೊರಗೆ ಬಂದಿದ್ದೇನೆ. ನನಗೂ ಈಗ ನಿರಾಳವಾಗಿದೆ ಎಂದು ಹೇಳಿದರು.
ಜನರಲ್ಲಿ ಬಹಳ ಅನುಮಾನ ಇತ್ತು. ನಾನು ಚುನಾವಣೆಗೆ ನಿಲ್ಲುತ್ತೇನೋ ಇಲ್ಲವೋ ಅಂತಾ ಈಗ ಸ್ಪಷ್ಟವಾಗಿ ಸಂದೇಶ ಹೋಗಿದೆ. ಪಕ್ಷದಿಂದ ಉಚ್ಚಾಟನೆ ಮಾಡಿರುವುದಕ್ಕೆ ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುವೆ. ನನ್ನ ಸ್ಪರ್ಧೆ ಕುರಿತು ಅನುಮಾನ ವ್ಯಕ್ತಪಡಿಸುತ್ತಿದ್ದರು. ಕೆಲವರು ಗೊಂದಲ ಮಾಡುತ್ತಿದ್ದರು. ಎಲ್ಲವೂ ಕ್ಲಿಯರ್ ಆಗಿದೆ. ನನ್ನಿಂದ ಬೆಳೆದ ಶಿಷ್ಯರ ಬಗ್ಗೆ ಮಾತನಾಡಲ್ಲ. ನನ್ನ ಹೆಸರಿನ ಡಿ.ಎಸ್.ಈಶ್ವರಪ್ಪ ಅವರನ್ನು ಇವರೇ ನಿಲ್ಲಿಸಿದ್ದಾರೆ. ಇನ್ನೂ 10 ಜನರನ್ನು ಅಪ್ಪ-ಮಕ್ಕಳು ನಿಲ್ಲಿಸಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಮತ್ತೆ 4 ತಿಂಗಳು ಮುರುಘಾ ಶ್ರೀಗೆ ಜೈಲು
ನಿರೀಕ್ಷೆಗೂ ಮೀರಿ ಬೆಂಬಲ ಸಿಗುತ್ತದೆ. ನೀವು ಕಟ್ಟಿದ ಪಕ್ಷದಿಂದಲೇ ನಿಮಗೆ ಉಚ್ಚಾಟನೆ ಆಗಿರುವುದು ನೋವಾಗಿದೆ ಎಂದು ಬಿಜೆಪಿಗರು ಹೇಳುತ್ತಿದ್ದಾರೆ. ರಾಜ್ಯದ ಎಲ್ಲ ಕಾರ್ಯಕರ್ತರು ನೋವಿನಲ್ಲಿ ಇದ್ದಾರೆ. ಚುನಾವಣೆ ಮುಗಿದ ಬಳಿಕ ಒಳಗೆ ಹೋಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷವನ್ನು ಈ ಜನುಮದಲ್ಲಿ ಸೇರುವುದಿಲ್ಲ. ಇದನ್ನು ಅರಿಯಬೇಕು. ಹಿಂದುತ್ವವಾದಿ ಕಾರ್ಯಕರ್ತರು ಸೇರುತ್ತಿದ್ದಾರೆ. ದೊಡ್ಡ ಸಂಖ್ಯೆಯ ಬಲವೇ ನನಗಿದೆ. ಮೋದಿನಾ ಟೀಕೆ ಮಾಡುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಚೊಂಬು ಸಿಗುವುದು ಗ್ಯಾರಂಟಿ ಆಗಿದೆ. ಪ್ರಧಾನಿ ಮೋದಿ, ಯತೀಂದ್ರ ಸಿದ್ದರಾಮಯ್ಯ ತಾಳಿ ವಿಷಯ ಏಕೇ ಎತ್ತಿದ್ದಾರೋ ಗೊತ್ತಿಲ್ಲ. ಮಹಿಳೆಯರಿಗೆ ಮಾಂಗಲ್ಯ ಪವಿತ್ರವಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರ ಇರುವವರೆಗೂ ಮುಸ್ಲಿಮರ ಗೂಂಡಾಗಿರಿ ನಿಲ್ಲುವುದಿಲ್ಲ. ಮುಸ್ಲಿಮರಿಂದ ಕಾಂಗ್ರೆಸ್ ಪಕ್ಷ ಉಸಿರಾಡುತ್ತಿದೆ ಎಂದು ಆ ಪಕ್ಷದ ನಾಯಕರು ತಿಳಿದಿರುವುದು ಮೂರ್ಖತನ ಆಗಿದೆ ಎಂದು ಟಾಂಗ್ ಕೊಟ್ಟರು. ಅಲ್ಲದೇ, ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ತನಿಖೆ ನಡೆಸಿ ಸಿಐಡಿ ಏನು ವರದಿ ಕೊಡುತ್ತದೆ? ಅದು ಸರ್ಕಾರದ ಕಂಟ್ರೋಲ್‌ನಲ್ಲಿ ಇದೆ. ಸಿಬಿಐಗೆ ಕೊಡಬೇಕು ಎಂದು ಒತ್ತಾಯಿಸಿದರು.