ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯುವ ವಿಚಾರದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದ್ದು, ಮಂಡ್ಯದಿಂದ ಸುಮಲತಾ ಕಣಕ್ಕಿಳಿಯುತ್ತಾರಾ ಅನ್ನೋ ಚರ್ಚೆಯಾಗುತ್ತಿದೆ.
ಶತಾಯಗತಾಯ ತಮ್ಮ ಪುತ್ರ ನಿಖಿಲ್‍ನನ್ನು ಕಣಕ್ಕಿಳಿಸಬೇಕೆಂದು ನಿರ್ಧರಿಸಿರುವ ಸಿಎಂ ಕುಮಾರಸ್ವಾಮಿ, ಮೈತ್ರಿಪಾಲನೆಯಲ್ಲಿ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡೋದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಸಿಎಂ ಪುತ್ರನ ಮಂಡ್ಯ ಪ್ರವೇಶವನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಟೀಂ, ದಿವಂಗತ ಅಂಬರೀಶ್ ಪತ್ನಿ ಸುಮಲತಾ ಹೆಸರನ್ನು ತೇಲಿಬಿಟ್ಟು ಸಂಘರ್ಷಕ್ಕೆ ವೇದಿಕೆ ಸಿದ್ಧಗೊಳಿಸಿದ್ದಾರೆ.
ಅಂಬಿ ಅಭಿಮಾನಿಗಳು ಶುಕ್ರವಾರ ಸುಮಲತಾ ಅವರನ್ನು ಭೇಟಿ ಮಾಡಿ ಸ್ಪರ್ಧಿಸುವಂತೆ ಒತ್ತಾಯಿಸಿದಾಗ ಕಣಕ್ಕಿಳಿಯುವ ಇಂಗಿತವನ್ನು ಸುಮಲತಾ ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಸುಮಲತಾ ಸ್ಪರ್ಧೆ ಜೆಡಿಎಸ್ ಪಾಲಿಗೆ ನುಂಗಲಾರದ ತುತ್ತಾಗಲಿದ್ದು, ಅವರನ್ನೇ ಜೆಡಿಎಸ್ ಅಭ್ಯರ್ಥಿಯನ್ನಾಗಿ ಮಾಡಿ ತಮ್ಮ ವಿರೋಧಿಗಳ ಬಾಯಿ ಮುಚ್ಚಿಸುವ ತಂತ್ರಕ್ಕೆ ಜೆಡಿಎಸ್ ಮುಂದಾಗುವ ಸಾಧ್ಯತೆ ಇದೆ. ಹೀಗಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಿಎಂ ಪುತ್ರ ನಿಖಿಲ್ ಸ್ಪರ್ಧೆನೋ..? ಸುಮಲತಾ ರಂಗ ಪ್ರವೇಶವೋ ಎಂಬ ಚರ್ಚೆ ಜೋರಾಗಿ ನಡೆದಿದೆ. ಇದನ್ನು ಓದಿ: ರಾಜಕೀಯ ಪ್ರವೇಶದ ಬಗ್ಗೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ
ಮಂಡ್ಯದಿಂದ ಸುಮಲತಾ ಸ್ಪರ್ಧೆಗೆ ಒತ್ತಡ ವಿಚಾರದ ಬಗ್ಗೆ ಸಿಎಂ ಕುಮಾರಸ್ವಾಮಿ ಸ್ಥಾನ ಬಿಡಲ್ಲ ಎಂದು ಪರೋಕ್ಷವಾಗಿ ಸೂಚನೆ ನೀಡಿದ್ದಾರೆ. ಮಂಡ್ಯ ಜೆಡಿಎಸ್‍ನ ಭದ್ರಕೋಟೆ. ಅಲ್ಲಿ ಸುಮಲತಾ ಸ್ಪರ್ಧೆ ಮಾಡಬಾರದು ಎಂದು ಏನೂ ಇಲ್ಲ. ಸ್ಪರ್ಧೆ ಮಾಡಲಿ ಬೇಡ ಎಂದು ಹೇಳೋಕೆ ಆಗುತ್ತಾ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರು ಸ್ಪರ್ಧೆ ಮಾಡಲು ಅವಕಾಶವಿದೆ. ಟಿಕೆಟ್ ಹಂಚಿಕೆ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ. ಆ ಸಂದರ್ಭ ಬಂದಾಗ ಟಿಕೆಟ್ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳುತ್ತಾ ಸಿಎಂ ಕುಮಾರಸ್ವಾಮಿ ಪರೋಕ್ಷವಾಗಿ ಕಾಂಗ್ರೆಸ್‍ಗೆ ಟಾಂಗ್ ನೀಡಿದ್ದಾರೆ.
ಅಲ್ಲದೇ ಚುನಾವಣೆಯ ಬಗ್ಗೆ ಕಾರ್ಯಕರ್ತರ ಅಭಿಪ್ರಾಯ ಕೂಡ ಕೇಳಬೇಕಾಗುತ್ತೆ. ಯಾರೋ ಕೇಳಿದರು ಎಂದು ನಿರ್ಧಾರ ಮಾಡೋಕೆ ಆಗಲ್ಲ. ಟಿಕೆಟ್ ಹಂಚಿಕೆ ಚರ್ಚೆ ಆಗಿಲ್ಲ. ಚರ್ಚೆಗೆ ಬಂದಾಗ ಈ ವಿಷಯದ ಬಗ್ಗೆ ತೀರ್ಮಾನ ಮಾಡುತ್ತೀವಿ. ಅಂಬರೀಶ್ ಕುಟುಂಬದವರು ನಮ್ಮ ಪಕ್ಷಕ್ಕೆ ಸೇರಿದವರಲ್ಲ. ಅವರು ಒಂದು ವೇಳೆ ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ನಾವು ವಿರೋಧಿಸುವುದಿಲ್ಲ. ಅದು ಅವರ ವೈಯಕ್ತಿಕ ನಿರ್ಧಾರ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv