ಸತತ 10ನೇ ಗೆಲುವು ಸಾಧಿಸಿ ದಾಖಲೆ ಮಾಡುತ್ತಾ ಟೀಂ ಇಂಡಿಯಾ!

Public TV
2 Min Read
team india 2 1

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಟೀಂ ಇಂಡಿಯಾ ದಾಖಲೆ ಮಾಡುತ್ತಾ..? ಅಥವಾ ಮಳೆರಾಯ ಭಾರತದ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕ್ತಾನಾ..?

ಆಸ್ಟ್ರೇಲಿಯಾ ವಿರುದ್ಧ ಇಂದು ನಡೆಯಲಿರುವ 4ನೇ ಏಕದಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೆ ವಿರಾಟ್ ಕೊಹ್ಲಿ ಪಡೆ ಸತತ 4 ಏಕದಿನ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಗೆದ್ದ ಮೊದಲ ತಂಡ ಎನಿಸಿಕೊಳ್ಳಲಿದೆ. ಈ ಹಿಂದೆ ಭಾರತ 2 ಬಾರಿ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳನ್ನು ಗೆದ್ದಿತ್ತು. 1986ರಲ್ಲಿ 6 ಪಂದ್ಯಗಳ ಸರಣಿಯನ್ನು 3-2 ಹಾಗೂ 2013ರಲ್ಲಿ 7 ಪಂದ್ಯಗಳ ಸರಣಿಯನ್ನು 3-2 ಅಂತರದಿಂದ ಗೆದ್ದಿತ್ತು.

25939

ಬೆಂಗಳೂರಿನಲ್ಲಿ ನಡೆಯುವ ಈ ಪಂದ್ಯವನ್ನು ಭಾರತ ಗೆದ್ದರೆ ಸತತ 10ನೇ ಜಯ ಗಳಿಸಿದರೆ ಮತ್ತೊಂದು ದಾಖಲೆಯೂ ಭಾರತ ತಂಡಕ್ಕೆ ಸಿಗಲಿದೆ. ಟೀಂ ಇಂಡಿಯಾ ಈ ವರ್ಷ ಜುಲೈಯಿಂದ ಸೆಪ್ಟೆಂಬರ್ ವರೆಗೆ ಸತತ 9 ಪಂದ್ಯಗಳನ್ನು ಗೆದ್ದಿದೆ. ಈ ಹಿಂದೆ 2008ರ ನವೆಂಬರ್ ನಿಂದ 2009ರ ಫೆಬ್ರವರಿವರೆಗೆ ನಡೆದ 9 ಪಂದ್ಯಗಳನ್ನು ಸತತವಾಗಿ ಭಾರತ ಗೆದ್ದಿತ್ತು. ಇದೇ ಜುಲೈ 24ರಂದು ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಗೆದ್ದಿರುವ ಟೀಂ ಇಂಡಿಯಾ ಹಳೆಯ ದಾಖಲೆಯನ್ನು ಸರಿಗಟ್ಟಿದೆ.

ಈ ವರ್ಷ ಜುಲೈನಲ್ಲಿ ಆಂಟಿಗಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 11 ರನ್ ಗಳಿಗೆ ಸೋತ ಬಳಿಕ ಭಾರತ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಆದರೆ ಆಸ್ಟ್ರೇಲಿಯಾ ಜನವರಿ 26ರಂದು ಪಾಕಿಸ್ತಾನವನ್ನು ಸೋಲಿಸಿದ ಬಳಿಕ ನಂತರ ಯಾವುದೇ ಪಂದ್ಯವನ್ನು ಗೆದ್ದಿಲ್ಲ. ದಕ್ಷಿಣ ಆಫ್ರಿಕಾ 5 ಹಾಗೂ ಆಸ್ಟ್ರೇಲಿಯಾ 6 ಬಾರಿ ಸತತ 10 ಪಂದ್ಯಗಳನ್ನು ಗೆದ್ದ ದಾಖಲೆ ಮಾಡಿದೆ. ಸತತ 10 ಏಕದಿನ ಪಂದ್ಯವನ್ನು ಇಂಗ್ಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ಎರಡೆರಡು ಬಾರಿ ಗೆದ್ದ ದಾಖಲೆ ಮಾಡಿದ್ದರೆ ನ್ಯೂಜಿಲೆಂಡ್ 1 ಬಾರಿ 10 ಪಂದ್ಯವನ್ನು ನಿರಂತರವಾಗಿ ಗೆದ್ದಿದೆ.

team india 1 1

 

ಬೆಂಗಳೂರಿನಲ್ಲಿ ಇಂದಿ ಬೆಳಗ್ಗಿನಿಂದಲೂ ಮೋಡ ಮುಸುಕಿದ ವಾತಾವರಣವಿದ್ದು ಯಾವುದೇ ಕ್ಷಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಹೀಗಾಗಿ ಇಂದಿನ ಪಂದ್ಯ ಸಂಪೂರ್ಣ 50 ಓವರ್ ಆಡಲು ಸಾಧ್ಯವಾಗುತ್ತಾ ಎನ್ನುವುದು ಸದ್ಯದ ಕುತೂಹಲಕಾರಿ ಪ್ರಶ್ನೆ.

 

Share This Article