ಬೆಂಗಳೂರು: ಆರೋಗ್ಯ ಮತ್ತು ಔಷಧಿ ತಯಾರಿಕೆ ಕ್ಷೇತ್ರದ ದೈತ್ಯ ಕಂಪನಿ ‘ವಾಟರ್ಸ್’ ಬೆಂಗಳೂರಿನ ಆರ್.ಎಂ.ಜೆಡ್ ಇಕೋವರ್ಲ್ಡ್ ಸಂಕೀರ್ಣದಲ್ಲಿ 16 ಮಿಲಿಯನ್ ಡಾಲರ್ ವೆಚ್ಚದಲ್ಲಿ ಕೇಪಬಿಲಿಟಿ ಸೆಂಟರ್ ಸ್ಥಾಪಿಸಲು ಒಪ್ಪಿಕೊಂಡಿದೆ. ಗುರುವಾರದಂದು ಆ ಕಂಪನಿಯ ಉನ್ನತಾಧಿಕಾರಿಗಳೊಂದಿಗೆ ಸಹಭಾಗಿತ್ವ ಉಪಕ್ರಮ ಕುರಿತು ನಡೆಸಿದ ಚರ್ಚೆಯ ಫಲವಿದು ಎಂದು ಸಚಿವ ಎಂ.ಬಿ. ಪಾಟೀಲ್ (M.B.Patil) ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದ ಆರ್ಥಿಕತೆಯ ಅಭಿವೃದ್ಧಿಗೆ ನಿರೀಕ್ಷಿತ ವೇಗವನ್ನು ಕೊಡಬೇಕಾದ ಸ್ಪರ್ಧಾತ್ಮಕ ಯುಗದಲ್ಲಿ ನಾವಿದ್ದೇವೆ. ಇದನ್ನು ಗಮನದಲ್ಲಿಟ್ಟುಕೊಂಡು, ಉತ್ಕೃಷ್ಟ ಗುಣಮಟ್ಟದ ಔಷಧಿಗಳು ನಮ್ಮಲ್ಲೇ ತಯಾರಾಗುವಂತಹ ವಾತಾವರಣ ನಿರ್ಮಿಸಬೇಕಾಗಿದೆ. ಕರ್ನಾಟಕದಲ್ಲಿ ಸಕ್ರಿಯವಾಗಿರುವ ಔಷಧಿ ತಯಾರಿಕೆ ಕಂಪನಿಗಳೊಂದಿಗೆ ವಾಟರ್ಸ್ ಕಂಪನಿಯ ಸಹಭಾಗಿತ್ವ ಸ್ಥಾಪನೆ ಅತ್ಯಗತ್ಯವಾಗಿದ್ದು, ಔಷಧೋತ್ಪನ್ನಗಳನ್ನು ರಫ್ತು ಮಾಡುವ ಮಟ್ಟಕ್ಕೆ ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ಕಂಪನಿಯು ಸರ್ಕಾರ ಮತ್ತು ಕಾಲೇಜುಗಳೊಂದಿಗೆ ಸಹಭಾಗಿತ್ವ ಹೊಂದುವ ಮೂಲಕ ಪರಿಣತ ಸಿಬ್ಬಂದಿಯನ್ನು ಸಜ್ಜುಗೊಳಿಸುವ ಬಗ್ಗೆ ಚರ್ಚಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: CWRC, CWMA, ಸುಪ್ರೀಂ ಕೋರ್ಟ್ ಮುಂದೆ ವಾಸ್ತವಾಂಶ ಇಟ್ಟರೂ ನ್ಯಾಯ ಸಿಗ್ತಿಲ್ಲ: ಸಿಎಂ
16 ಬಿಲಿಯನ್ ಡಾಲರ್ ವಹಿವಾಟು ನಡೆಸುತ್ತ, 8 ಸಾವಿರ ಉದ್ಯೋಗಿಗಳನ್ನು ಹೊಂದಿರುವ ವಾಟರ್ಸ್ ಕಂಪನಿಯು ಕ್ರೊಮ್ಯಾಟೋಗ್ರಫಿ, ಮಾಸ್ ಸ್ಪೆಕ್ಟ್ರೋಮೆಟ್ರಿ, ಥರ್ಮಲ್ ಅನಾಲಿಸಿಸ್ ಅನ್ವೇಷಣೆಗಳ ಮೂಲಕ ಮನುಷ್ಯರ ಆರೋಗ್ಯ ವೃದ್ಧಿ ಮತ್ತು ಕ್ಷೇಮಪಾಲನೆ ಕ್ಷೇತ್ರಗಳಲ್ಲಿ ಗಮನಾರ್ಹ ಕೆಲಸಗಳನ್ನು ಮಾಡುತ್ತಿದೆ. ರಾಜ್ಯದಲ್ಲಿ ಈಗ ಬಯೋಸಿಮಿಲರ್‌ಗಳ ಪರೀಕ್ಷಾರ್ಥ ಬಳಕೆ ಮೇಲೆ ಬಿಗಿಯಾದ ನಿಯಮಗಳಿವೆ. ಇವುಗಳನ್ನು ಸಡಿಲಿಸಬೇಕಾದ ಅಗತ್ಯದ ಬಗ್ಗೆ ಕಂಪನಿಯ ಪ್ರತಿನಿಧಿಗಳು ಚರ್ಚಿಸಿದರು ಎಂದು ವಿವರಿಸಿದ್ದಾರೆ.
ಸಚಿವರ ನೇತೃತ್ವದ ನಿಯೋಗವು ಇದೇ ಸಂದರ್ಭದಲ್ಲಿ ವಾಟರ್ಸ್ ಕಂಪನಿಯ ಉತ್ಪಾದನಾ ಘಟಕಕ್ಕೂ ಭೇಟಿ ನೀಡಿದ್ದು, ಅಲ್ಲಿನ ವ್ಯವಸ್ಥೆಯನ್ನು ವೀಕ್ಷಿಸಿದೆ. ಮಾತುಕತೆಯಲ್ಲಿ ಕಂಪನಿಯ ಸಿಇಒ ಮತ್ತು ಅಧ್ಯಕ್ಷ ಉದಿತ್ ಬಾತ್ರಾ, ಸಿಎಫ್ಒ ಅನ್ಮೋಲ್ ಚೌಬಾಲ್, ಸಿಐಒ ಬ್ರೂಕ್ ಕೊಲ್ಯಾಂಜೆಲೋ ಮತ್ತು ಉಪಾಧ್ಯಕ್ಷ ಕ್ರಿಸ್ಟಿನ್ ಗಾರ್ವಿ ಉಪಸ್ಥಿತರಿದ್ದರು. ರಾಜ್ಯ ಸರ್ಕಾರದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಇದ್ದರು.
ಟೆರಾಡೈನ್ ಜತೆಗೂ ಮಾತುಕತೆ
ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಟೆರಾಡೈನ್ ಕಂಪನಿಯೊಂದಿಗೂ ರಾಜ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ತಯಾರಿಕೆ ಸಂಬಂಧವರ್ಧನೆ ಕುರಿತು ವಿಚಾರ ವಿನಿಮಯ ನಡೆಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ವರ್ಷಕ್ಕೆ 15 ಬಿಲಿಯನ್ ಡಾಲರ್ ವಹಿವಾಟು ನಡೆಸುವ ಟೆರಾಡೈನ್ ಕಂಪನಿಯು ರೋಬೋಟಿಕ್ಸ್ ತಂತ್ರಜ್ಞಾನದ ಮೂಲಕ ಆಟೋಮೇಷನ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಇದರ ಜತೆಗೆ ರಕ್ಷಣಾ ಮತ್ತು ವೈಮಾಂತರಿಕ್ಷ ಸಾಧನಗಳು, ಮೆಮೋರಿ ಟೆಸ್ಟಿಂಗ್ ವಲಯಗಳಲ್ಲೂ ಕಂಪನಿಯು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದೆ. ಹೀಗಾಗಿ ರಾಜ್ಯದಲ್ಲಿ ಸೆಮಿಕಂಡಕ್ಟರ್ ವಲಯದ ಉತ್ತೇಜನೆಗೆ ಸರ್ಕಾರವು ರೂಪಿಸಿರುವ ಉಪಕ್ರಮ ಮತ್ತು ನೀತಿಗಳನ್ನು ವಿವರಿಸಿ, ಹೂಡಿಕೆ ಮಾಡಲು ಆಹ್ವಾನಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಂಧರ ವಿಶ್ವಕಪ್ – ಭಾರತ ತಂಡದಲ್ಲಿರುವ ಕರ್ನಾಟಕದ ಆಟಗಾರರನ್ನು ಅಭಿನಂದಿಸಿದ ಸಿಎಂ, ರಾಜ್ಯಪಾಲರು
ಸಚಿವರ ನೇತೃತ್ವದ ನಿಯೋಗವು, ಟೆರಾಡೈನ್ ಉತ್ಪಾದನಾ ಘಟಕಕ್ಕೂ ಭೇಟಿ ನೀಡಿತು. ಅಲ್ಲಿನ ವ್ಯವಸ್ಥೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿತು. ಮಾತುಕತೆಯಲ್ಲಿ ಕಂಪನಿಯ ಪರವಾಗಿ ಅದರ ಉನ್ನತಾಧಿಕಾರಿಗಳಾದ ಪರೇಶ್ ಬರ್ಖಾಡ ಮತ್ತು ಸ್ಯಾಮ್ ರೋಸೆನ್ ಪಾಲ್ಗೊಂಡಿದ್ದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]