– ಕ್ಷೇತ್ರ ಬದಲಾವಣೆಯ ಗುಟ್ಟು ಬಿಟ್ಟುಕೊಟ್ಟ ಸಿದ್ದರಾಮಯ್ಯ ಲೆಕ್ಕಾಚಾರ ಹೇಗಿದೆ?
ಕೆ.ಪಿ.ನಾಗರಾಜ್
ಮೈಸೂರು: ಸಿಎಂ ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದಲ್ಲಿ ಮತ್ತೊಂದು ಕ್ಯಾಲ್ಕುಲೇಟಿವ್ ರಿಸ್ಕ್ ತೆಗೆದು ಕೊಳ್ಳುತ್ತಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರ ಬಿಟ್ಟು ತಮಗೆ ರಾಜಕೀಯ ಪುನರ್ ಜನ್ಮ ಕೊಟ್ಟಿದ್ದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮರುಳುತ್ತಿದ್ದಾರೆ. ಅಂದ ಮಾತ್ರಕ್ಕೆ ವರುಣಾ ಕ್ಷೇತ್ರದಲ್ಲಿ ಸಿಎಂಗೆ ವಿರೋಧವಿದೆ, ಸಿಎಂಗೆ ವರುಣಾ ಸೇಫ್ ಅಲ್ಲ ಎಂದರ್ಥವಲ್ಲ. ಈ ಕ್ಷಣಕ್ಕೆ ಸಿಎಂಗೆ ವರುಣಾ ಕ್ಷೇತ್ರ ತುಂಬಾ ಸೇಫ್ ಇದೆ. ಆದರೂ, ಅವರು ಕ್ಷೇತ್ರ ಬಿಡುತ್ತಿರುವುದಕ್ಕೆ ಕಾರಣ ಪುತ್ರ ವ್ಯಾಮೋಹ. ತಮ್ಮ ಮಗ ಡಾ. ಯತೀಂದ್ರರನ್ನು ಶಾಸಕನಾಗಿ ನೋಡಬೇಕೆಂಬ ಆಸೆ ಅವರನ್ನು ಇವತ್ತು ಕ್ಷೇತ್ರ ಬಿಡುವ ರೀತಿ ಮಾಡುತ್ತಿದೆ. ಈ ಮೂಲಕ ಸಿಎಂ ತಮ್ಮ ರಾಜಕೀಯ ಜೀವನದಲ್ಲಿ ಮತ್ತೊಂದು ಅಗ್ನಿಪರೀಕ್ಷೆಗೆ ರೆಡಿಯಾಗುತ್ತಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗುವ ಇಂಗಿತವನ್ನು ಸಿಎಂ ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರ ಅವರಿಗೆ ಹೊಸದೇನೂ ಅಲ್ಲ. 1983 ರಿಂದ ಒಟ್ಟು 7 ಬಾರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಅದರಲ್ಲಿ ಐದು ಬಾರಿ ಗೆದ್ದಿದ್ದರು. ಅದರಲ್ಲೂ 2006ರಲ್ಲಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದಾಗ ನಡೆದ ಉಪಚುನಾವಣೆ ನಿಜಕ್ಕೂ ಒಂದು ಕದನ. ಅಂತಹ ಕದನದಲ್ಲಿ 257 ಮತಗಳಿಂದ ಕ್ಷೇತ್ರದ ಮತದಾರರು ಸಿದ್ದರಾಮಯ್ಯಗೆ ರಾಜಕೀಯ ಪುನರ್ ಜನ್ಮ ನೀಡಿದ್ದರು. ನಂತರ, ಕ್ಷೇತ್ರ ಪುನರ್ ವಿಂಗಡಣೆ ಆಗಿ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ವರುಣಾ ಪ್ರತ್ಯೇಕ ಕ್ಷೇತ್ರವಾಯಿತು. ಆಗ, ಸಿದ್ದರಾಮಯ್ಯ ತಮ್ಮ ಹುಟ್ಟೂರು ಸಿದ್ದರಾಮನ ಹುಂಡಿ ಸೇರುವ ವರುಣಾ ಕ್ಷೇತ್ರವನ್ನು ತುಂಬಾ ಲೆಕ್ಕಚಾರದ ಮೇಲೆಯೇ ಆಯ್ಕೆ ಮಾಡಿಕೊಂಡು ಚಾಮುಂಡೇಶ್ವರಿಯಿಂದ ಶಿಫ್ಟ್ ಆದರು. ಅವರ ಲೆಕ್ಕಾಚಾರ ಸರಿ ಇತ್ತು. ವರುಣಾ ಕ್ಷೇತ್ರ ಸೃಷ್ಟಿಯಾದ ಮೇಲೆ ನಡೆದ ಎರಡು ಚುನಾವಣೆಗಳಲ್ಲಿ ಸಿದ್ದರಾಮಯ್ಯ 30 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ.
Advertisement
ವರುಣಾ ಕ್ಷೇತ್ರದಲ್ಲಿ ಲಿಂಗಾಯತರ ಪ್ರಾಬಲ್ಯ ಇದೆ. ಅದರ ಜೊತೆಗೆ, ದಲಿತರು, ಕುರುಬರು, ಹಿಂದುಳಿದ ವರ್ಗದವರು, ನಾಯಕರು, ಮುಸ್ಲಿಮರು, ಒಕ್ಕಲಿಗರ ಮತಗಳು ಇವೆ. ಇಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ದೊಡ್ಡ ಬೇಸ್ ಇಲ್ಲ. ಜೆಡಿಎಸ್ ಕಥೆ ಬಿಜೆಪಿಗಿಂತಾ ಕೆಟ್ಟದಾಗಿದೆ. ವಿರೋಧ ಪಕ್ಷಗಳ ಸಂಘಟನೆ ಇಲ್ಲದಿರುವುದು, ಸ್ಥಳೀಯ ಮಟ್ಟದ ಒಡಕುಗಳು ಸಿದ್ದರಾಮಯ್ಯಗೆ ವರುಣಾ ಕ್ಷೇತ್ರವನ್ನು ಮತ್ತಷ್ಟು ಗಟ್ಟಿ ಮಾಡಿಕೊಟ್ಟಿವೆ.
Advertisement
ವರುಣಾ ಸೇಫ್!: ವರುಣಾ ಕ್ಷೇತ್ರದ ಜಾತಿ ಸಮೀಕರಣ ಮತ್ತು ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಪಕ್ಷಗಳ ಸ್ಥಿತಿ ಎಲ್ಲವನ್ನೂ ನೋಡಿದರೆ ಈ ಕ್ಷಣಕ್ಕೆ ಸಿದ್ದರಾಮಯ್ಯ ಪಾಲಿಗೆ ವರುಣಾ ಸೇಫ್ ಪ್ಲೇಸ್. ಹೀಗಾಗಿ, ಇಂತಹ ಕ್ಷೇತ್ರದಲ್ಲಿ ಮಗ ಯತೀಂದ್ರಗೆ ಟಿಕೆಟ್ ಕೊಡಿಸಿ ಚುನಾವಣೆಗೆ ನಿಲ್ಲಿಸಿದರೆ ಗೆಲ್ಲಿಸುವುದು ಸುಲಭ. ರಿಸ್ಕ್ ಇರೋ ಕ್ಷೇತ್ರದಲ್ಲಿ ಮಗನನ್ನು ಕಣಕ್ಕೆ ಇಳಿಸಿ ಚಾನ್ಸ್ ತೆಗೆದುಕೊಳ್ಳುವುದಕ್ಕಿಂತಾ ತನಗೆ ಸೇಫ್ ಆಗಿರೋ ಕ್ಷೇತ್ರವನ್ನು ಮಗನಿಗೆ ಬಿಟ್ಟು ತಾನೂ ಬೇರೆ ಕ್ಷೇತ್ರಕ್ಕೆ ಹೋಗುವುದೇ ಸರಿ ಅನ್ನುವುದು ಸಿಎಂ ಲೆಕ್ಕಚಾರ.
Advertisement
ಈ ಎಲ್ಲಾ ಕಾರಣಕ್ಕೆ ಸಿಎಂ ಈಗ ಚಾಮುಂಡೇಶ್ವರಿ ಕ್ಷೇತ್ರದತ್ತ ಮುಖ ಮಾಡಿದ್ದಾರೆ. ಆದರೆ, ಚಾಮುಂಡೇಶ್ವರಿ ಕ್ಷೇತ್ರ ಸಿಎಂಗೆ ವರುಣಾದಷ್ಟು ಸೇಫ್ ಅಲ್ಲ. ಕ್ಷೇತ್ರ ಪುನರ್ ವಿಂಗಡಣೆಗೂ ಮುನ್ನ ಇದ್ದ ಚಾಮುಂಡೇಶ್ವರಿ ಕ್ಷೇತ್ರವೇ ಬೇರೆ, ಕ್ಷೇತ್ರ ಪುನರ್ ವಿಂಗಡಣೆ ನಂತರದ ಚಾಮುಂಡೇಶ್ವರಿ ಕ್ಷೇತ್ರವೇ ಬೇರೆ. ಕ್ಷೇತ್ರ ಪುನರ್ ವಿಂಗಡಣೆ ನಂತರ ಕ್ಷೇತ್ರದ ಜಾತಿ ಲೆಕ್ಕಾಚಾರ ಬದಲಾಗಿವೆ. ಒಕ್ಕಲಿಗ ಮತಗಳ ಪ್ರಾಬಲ್ಯ ಕ್ಷೇತ್ರದಲ್ಲಿ ಹೆಚ್ಚಿದೆ. ಜೆಡಿಎಸ್ ಇಡೀ ಕ್ಷೇತ್ರದಲ್ಲಿ ಬಲವಾಗಿ ಬೇರೂರಿದೆ. ಇದಕ್ಕೆ ಸಾಕ್ಷಿ ಎಂಬಂತೆ, 2013ರ ನಂತರ ನಡೆದ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಎಪಿಎಂಸಿ, ಹಾಲು ಒಕ್ಕೂಟ ಹೀಗೆ ಎಲ್ಲಾ ಸ್ಥರದ ಚುನಾವಣೆಯಲ್ಲೂ ಜೆಡಿಎಸ್ ಪ್ರಾಬಲ್ಯ ಮೆರೆದಿದೆ. ಕಳೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಮೂರು ದಿನ ಈ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರೂ ಕೂಡ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಇದೆಲ್ಲದರ ಆಧಾರದ ಮೇಲೆ ಈ ಕ್ಷೇತ್ರ ಜೆಡಿಎಸ್‍ನ ಭದ್ರಕೋಟೆಯ ರೀತಿ ಮಾರ್ಪಟ್ಟಿದೆ.
Advertisement
ರಿಸ್ಕ್ ಯಾಕೆ ತಗೋತಿದ್ದಾರೆ ಸಿಎಂ?: ಈ ಕಾರಣದಿಂದಲೇ ಸಿಎಂ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರುವುದು ಒಂದು ರೀತಿ ಅಗ್ನಿಪರೀಕ್ಷೆ ರೀತಿ ಕಾಣುತ್ತಿದೆ. ವಾಸ್ತವ ಹೀಗಿದ್ದರೂ ಸಿಎಂ ಯಾಕೆ ಇಂತಹ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ ಅನ್ನುವುದಕ್ಕೂ ಕಾರಣವಿದೆ. ಒಕ್ಕಲಿಗರ ಪ್ರಾಬಲ್ಯ ಕ್ಷೇತ್ರದಲ್ಲಿ ಇದ್ದರೂ ಸಹಿತ ಹಿಂದುಳಿದ ವರ್ಗಗಳ ಮತಗಳು ಕೂಡಾ ಹೆಚ್ಚಿವೆ. ಅದನ್ನೆಲ್ಲಾ ತಮ್ಮ ಹೆಸರಿನಲ್ಲಿ ಒಗ್ಗೂಡಿಸಬಹುದು. ಸಿಎಂ ಆಗಿ ತಮ್ಮ ಸಾಧನೆ ದೊಡ್ಡದಿದೆ ಆ ವರ್ಚಸ್ಸು ಕೆಲಸ ಮಾಡುತ್ತೆ. ಅಲ್ಲದೆ, ಮುಂದೆಯೂ ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂಬ ಮಾತನ್ನೇ ಮತ್ತಷ್ಟು ಗಟ್ಟಿ ಮಾಡಿದರೆ ಜನ ತಮ್ಮನ್ನು ಕೈ ಬಿಡುವುದು ಸಾಧ್ಯವೇ ಇಲ್ಲ ಅನ್ನೋದು ಸಿದ್ದರಾಮಯ್ಯ ಅವರ ಪೊಲಿಟಿಕಲ್ ಲೆಕ್ಕಾಚಾರ.
ಒಂದಂಥೂ ಸತ್ಯ. ಸಿದ್ದರಾಮಯ್ಯ ಅವರಿಗೆ ಸ್ಪಷ್ಟವಾಗಿ ಗೊತ್ತಿದೆ. ತಾನೂ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗುತ್ತಿರುವುದು ರಿಸ್ಕ್ ಅಂತಾ. ಆದರೆ, ಮಗನ ರಾಜಕೀಯ ಭವಿಷ್ಯ ಭದ್ರ ಮಾಡಲು ತಂದೆಯಾಗಿ ಇಂತಹ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಅವರು ಹಿಂದೆ ಮುಂದೆ ನೋಡುತ್ತಿಲ್ಲ ಅಷ್ಟೆ. ಅಕ್ಷರಶಃ ಕದನದಂತಾ ಚಾಮುಂಡೇಶ್ವರಿ ಉಪ ಚುನಾವಣೆ ಸಿದ್ದರಾಮಯ್ಯ ರಾಜಕೀಯ ಜೀವನದ ದೊಡ್ಡ ಭಾಗ. ಈಗ, ಸಿಎಂ ಆದ ನಂತರ ಅದೇ ಕ್ಷೇತ್ರದಲ್ಲಿ ಸವಾಲಿಗೆ ಎದೆಯೊಡ್ಡೋದಕ್ಕೆ ರೆಡಿಯಾಗಿದ್ದಾರೆ. ಹೀಗಾಗಿ, ಚಾಮುಂಡೇಶ್ವರಿ ಕ್ಷೇತ್ರ ಮುಂದಿನ ವಿಧಾನಸಭಾ ಚುನಾವಣೆಯ ನಂಬರ್ ಒನ್ ಸ್ಟಾರ್ ಕ್ಷೇತ್ರವಾಗುವುದು ನಿಶ್ಚಿತ.