ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚುನಾವಣಾ ಕಾವು ಜೋರಾಗಿದೆ. ದಿಲ್ಲಿ ಗದ್ದುಗೆ ಏರಲು ಆಮ್ ಆದ್ಮಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೊಟಿ ಶುರುವಾಗಿದೆ. ಮೇಲ್ನೊಟಕ್ಕೆ ಮೂರು ಪಕ್ಷಗಳು ಚುನಾವಣಾ ಕಣದಲ್ಲಿದ್ದರೂ ಆಪ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದೆ.
ಮತ್ತೊಮ್ಮೆ ಗದ್ದುಗೆ ಏರಲು ಸಿಎಂ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಆಪ್ ಸಿದ್ದವಾಗಿದ್ದರೇ, ಇತ್ತ ಬಿಜೆಪಿ 27 ವರ್ಷಗಳ ಬಳಿಕ ಚುನಾವಣೆ ಗೆಲ್ಲಲು ತಂತ್ರ ರೂಪಿಸಿದೆ. ಈ ಬಾರಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನೇ ಘೋಷಿಸದೇ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿದೆ.
Advertisement
Advertisement
1993ರಿಂದ ಇದುವರೆಗೆ ದೆಹಲಿ ವಿಧಾನಸಭೆಗೆ 6 ಚುನಾವಣೆಗಳು ನಡೆದಿದ್ದು, ಈ ಪೈಕಿ ಬಿಜೆಪಿ ಒಮ್ಮೆ ಮಾತ್ರ ಅಧಿಕಾರದ ಚುಕ್ಕಾಣಿ ಹಿಡಿದಿದೆ. 1993ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದೆಹಲಿಯ ಎಲ್ಲಾ 70 ಕ್ಷೇತ್ರಗಳಲ್ಲೂ ಸ್ಪರ್ಧಿಸಿ 49 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. 1993ರ ಬಳಿಕ ದೆಹಲಿಯಲ್ಲಿ ಒಟ್ಟು 5 ಬಾರಿ ವಿಧಾನಸಭಾ ಚುನಾವಣೆ ನಡೆದಿದ್ದು, ಯಾವ ಚುನಾವಣೆಯಲ್ಲೂ ಬಿಜೆಪಿ ಇಷ್ಟೊಂದು ಸ್ಥಾನಗಳನ್ನು ಪಡೆದಿಲ್ಲ. 1993ರ ಚುನಾವಣೆಯಲ್ಲಿ ಬಿಜೆಪಿ ಸರ್ವಶ್ರೇಷ್ಠ ಸಾಧನೆ ಮಾಡಿತ್ತು.
Advertisement
ಇದಾದ ಬಳಿಕ ಮೂರು ಅವಧಿ ಕಾಂಗ್ರೆಸ್ ದೆಹಲಿಯಲ್ಲಿ ಗಟ್ಟಿಯಾಗಿ ನೆಲೆಯೂರಿತ್ತು. ಶೀಲಾ ದೀಕ್ಷಿತ್ ಮುಖ್ಯಮಂತ್ರಿ ಆಗಿ 15 ವರ್ಷಗಳ ಆಡಳಿತ ನಡೆಸಿದ್ದರು. ಶೀಲಾ ಆಡಳಿತದ ಮುಂದೆ ಮಂಕಾಗಿದ್ದು ಬಿಜೆಪಿ 15 ವರ್ಷಗಳ ಕಾಲ ಅಧಿಕಾರ ಹಿಡಿಯಲು ಸಾಧ್ಯವಾಗಿರಲಿಲ್ಲ. 2013ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 31 ಸ್ಥಾನಗಳನ್ನ ಪಡೆದಿತ್ತು. ಆದರೆ ಬಹುಮತ ಸಾಬೀತುಪಡಿಸಲು ಇನ್ನೂ 4 ಶಾಸಕರ ಬೆಂಬಲ ಸಿಗದೆ ಅಧಿಕಾರದಿಂದ ದೂರ ಉಳಿದಿತ್ತು. ಕಾಂಗ್ರೆಸ್ ಆಪ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು. 1998ರಲ್ಲಿ 15 ಸ್ಥಾನ, 2003ರಲ್ಲಿ 20 ಸ್ಥಾನ, 2008ರಲ್ಲಿ 23 ಸ್ಥಾನ ಹಾಗೂ 2015ರಲ್ಲಿ ಕೇವಲ 3 ಸ್ಥಾನ ಪಡೆಯುವಲ್ಲಿ ಮಾತ್ರ ಬಿಜೆಪಿ ಯಶಸ್ವಿಯಾಗಿತ್ತು.
Advertisement
ಬಿಜೆಪಿ ಉತ್ಸಾಹಕ್ಕೆ ಕಾರಣವೇನು?
ಈ ಬಾರಿಯ ಚುನಾವಣೆ ಬಿಜೆಪಿಗೆ ಬಹುಮುಖ್ಯವಾಗಿದ್ದು ಗೆಲ್ಲಲೇಬೇಕು ಎನ್ನುವ ಹಠಕ್ಕೆ ಬಿದ್ದಿದೆ. ಬಿಜೆಪಿ ಈ ಉತ್ಸಾಹಕ್ಕೆ ಮತ್ತೊಂದು ಕಾರಣ ಮತ ಪ್ರಮಾಣ. ಕಳೆದ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಮತ್ತು ಹೆಚ್ಚು ವೋಟ್ ಶೇರ್ ನ್ನು ಪಡೆದಿತ್ತು. 2008ರಲ್ಲಿ ಶೇ. 36.3 ರಷ್ಟು, 2003ರಲ್ಲಿ ಶೇ. 35.2ರಷ್ಟು, 1998ರಲ್ಲಿ ಶೇ. 34.0, 2013ರಲ್ಲಿ ಶೇ. 33.3ರಷ್ಟು ಹಾಗೂ 2015ರಲ್ಲಿ ಶೇ. 32.3ರಷ್ಟು ಮತಗಳಿಕೆ ಮಾಡಿತ್ತು. ಅಲ್ಲದೆ 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ 7 ಕ್ಷೇತ್ರಗಳಲ್ಲಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಬಿಜೆಪಿ ಪತಾಕೆ ಹಾರಿಸಿತ್ತು.
ಹೀಗಾಗಿ ಬಿಜೆಪಿ ಈ ಬಾರಿ ಹೆಚ್ಚು ಆಸಕ್ತಿ ಈ ಚುನಾವಣೆ ತೋರಿದ್ದು ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೊಂದಣಿ ಈ ಎರಡು ಕಾಯ್ದೆಗಳ ಲಾಭ ಪಡೆಯಲು ಬಿಜೆಪಿ ಮುಂದಾಗಿದೆ. ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲದೆ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಬಳಸಿಕೊಂಡು ಚುನಾವಣಾ ಕಣಕ್ಕೆ ಇಳಿದಿದ್ದು ಆಪ್ ಕೂಡ ಕೊಂಚ ಹೆಚ್ಚೇ ಪ್ರತಿಸ್ಪರ್ಧೆ ನೀಡಿದೆ. ಈ ಹೋರಾಟ ನಡುವೆ ಗೆಲುವು ಸಾಧಿಸುವ ಮೂಲಕ ದೆಹಲಿಯಲ್ಲಿ 27 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿಯಲು ಎಲ್ಲಿಲ್ಲದ ಪ್ರಯತ್ನ ನಡೆಸಿದೆ.