– ಭಾರತಕ್ಕೆ ಹಸ್ತಾಂತರ ಮಾಡದಂತೆ ಅಮೆರಿಕದ ಸುಪ್ರೀಂ ಕೋರ್ಟ್‌ಗೆ ಮುಂಬೈ ದಾಳಿ ಆರೋಪಿ ತಹವ್ವೂರ್ ರಾಣಾ ಅರ್ಜಿ
ನವದೆಹಲಿ: 26/11 ರ ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವೂರ್ ರಾಣಾ (Tahawwur Rana) ತನ್ನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ತುರ್ತು ತಡೆ ನೀಡುವಂತೆ ಕೋರಿ ಅಮೆರಿಕದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ತಾನು ಪಾಕಿಸ್ತಾನಿ ಮೂಲದ ಮುಸ್ಲಿಂ ಆಗಿರುವುದರಿಂದ ಭಾರತದಲ್ಲಿ ತನಗೆ ಹಿಂಸೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ರಾಣಾ ಅರ್ಜಿಯಲ್ಲಿ ಹೇಳಿದ್ದಾನೆ.
63 ವರ್ಷದ ತಹಾವೂರ್ ರಾಣಾ ಪ್ರಸ್ತುತ ಲಾಸ್ ಏಂಜಲೀಸ್‌ನ ಜೈಲಿನಲ್ಲಿದ್ದಾನೆ. ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಹೃದಯ ರಕ್ತನಾಳದ ಉರಿಯೂತ, ಅರಿವಿನ ದೌರ್ಬಲ್ಯದೊಂದಿಗೆ ಪಾರ್ಕಿನ್ಸನ್ ಕಾಯಿಲೆ ಮತ್ತು ಸಂಭವನೀಯ ಮೂತ್ರಕೋಶದ ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ರಾಣಾ ವಿಚಾರಣೆಯನ್ನು ಎದುರಿಸಲು ಅವರು ಹೆಚ್ಚು ಕಾಲ ಬದುಕಲಾರರು ಎಂದು ಅವರ ವಕೀಲರು ತಿಳಿಸಿದ್ದಾರೆ.
ಅಲ್ಲದೇ ಭಾರತದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ವಿಶೇಷವಾಗಿ ಮುಸ್ಲಿಮರ ಮೇಲೆ ವ್ಯವಸ್ಥಿತ ತಾರತಮ್ಯ ಮತ್ತು ಕಳಂಕವನ್ನುಂಟು ಮಾಡುತ್ತಿದೆ. ಇದು ರಾಣಾ ಅವರ ನ್ಯಾಯಯುತ ವಿಚಾರಣೆಯ ಹಕ್ಕು ಅಪಾಯಕ್ಕೆ ಸಿಲುಕುತ್ತದೆ ಎಂದು ಅವರ ಪರ ವಕೀಲರು ವಾದಿಸಿದರು.
ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ತುಂಬಾ ದುಷ್ಟ’ ಎಂದು ಕರೆದು ರಾಣಾ ಗಡಿಪಾರು ಮಾಡಲು ತಮ್ಮ ಆಡಳಿತ ಅನುಮೋದನೆ ನೀಡಿದೆ ಎಂದು ಘೋಷಿಸಿದರು.
ಎಲ್ಲಾ ಕಾನೂನು ದಾಖಲೆಗಳನ್ನು ಅಮೆರಿಕದ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ಹಸ್ತಾಂತರಕ್ಕೆ ಅನುಮತಿ ದೊರೆತ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ ತಂಡವು ಅಮೆರಿಕಕ್ಕೆ ಪ್ರಯಾಣಿಸಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿ ಕಾರ್ಯಗತಗೊಳಿಸಿದ್ದಕ್ಕಾಗಿ ರಾಣಾ ಸೇರಿದಂತೆ ಒಂಬತ್ತು ಜನರ ವಿರುದ್ಧ ಎನ್‌ಐಎ 2011 ರಲ್ಲಿ ಆರೋಪಪಟ್ಟಿ ಸಲ್ಲಿಸಿತು.