ಬೆಂಗಳೂರು: ಕರ್ನಾಟಕ ಸದ್ಯ ಚುನಾವಣೆಯ ಹೊಸ್ತಿಲಿನಲ್ಲಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಚುನಾವಣೆಗಾಗಿ ಈಗಾಗಲೇ ಭರ್ಜರಿ ತಯಾರಿ ನಡೆಸುತ್ತಿವೆ. ಚುನಾವಣಾ ರಂಗ ಕಾವೇರಿತ್ತಲೇ ಸದ್ಯ ಎಂಐಎಂ(ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹದ್-ಉಲ್ ಮುಸ್ಲಿಮೀನ್) ಪಕ್ಷದ ಸಂಸ್ಥಾಪಕ ಅಸಾದುದ್ದೀನ್ ಓವೈಸಿ ಚುನಾವಾಣೆಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.
2018ರ ಚುನಾವಣೆಗೆ ರಾಜ್ಯದ 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎಂಐಎಂ ಸ್ಪರ್ಧೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಓವೈಸಿ ಅವರು ಪ್ರಮುಖವಾಗಿ ನಗರ ಕೇಂದ್ರಿಕೃತ ಪ್ರದೇಶಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೀಳಿಸುವ ಸಾಧ್ಯತೆಗಳಿವೆ. ಕಲಬುರಗಿ, ರಾಯಚೂರು, ಮಂಗಳೂರು, ಕೊಪ್ಪಳ ಮತ್ತು ಬೆಂಗಳೂರಿನ ಶಿವಾಜಿನಗರ, ಶಾಂತಿನಗರ, ಹೆಬ್ಬಾಳ, ಸರ್ವಜ್ಞನಗರ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ.
ಮಂಗಳೂರು, ಮಂಗಳೂರು ಉತ್ತರ ಕ್ಷೇತ್ರ, ಕಲಬುರಗಿ ದಕ್ಷಿಣ, ಉತ್ತರ ವಿಧಾನಸಭಾ ಕ್ಷೇತ್ರ, ರಾಯಚೂರು ನಗರ ವಿಧಾನಸಭಾ ಕ್ಷೇತ್ರ, ಕೊಪ್ಪಳದ ಗಂಗಾವತಿ ವಿಧಾನಸಭಾ ಕ್ಷೇತ್ರ ಸೇರಿದಂತೆ ನಗರ ಪ್ರದೇಶಗಳ ಮೇಲೆ ಓವೈಸಿ ಕಣ್ಣಿಟ್ಟಿದ್ದಾರೆ.
ಯಾರಿಗೆ ಲಾಭ: ಉತ್ತರ ಪ್ರದೇಶದ ಚುನಾವಣೆಯಲ್ಲಿ ಎಂಐಎಂ ಪಕ್ಷ ಕಣಕ್ಕಿಳಿದಿತ್ತು. 40 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎಂಐಎಂ ಪಕ್ಷದ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಬಿಜೆಪಿ ವಿರುದ್ಧ ಬಣಗಳ ಆಭ್ಯರ್ಥಿಗಳ ಗೆಲುವಿಗೆ ಎಂಐಎಂ ಬ್ರೇಕ್ ಹಾಕಿತ್ತು. ಎಂಐಎಂ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದ ಕ್ಷೇತ್ರಗಳಲ್ಲಿ ಬಿಜೆಪಿ ಕೂದಲೆಳೆಯ ಅಂತರದಲ್ಲಿ ಗೆಲುವನ್ನು ಕಂಡಿತ್ತು.
ಯಾರಿಗೆ ನಷ್ಟ: ಎಂಐಎಂ ಕರ್ನಾಟಕ ರಾಜಕೀಯಕ್ಕೆ ಎಂಟ್ರಿ ಕೊಟ್ಟರೆ ಅಲ್ಪಸಂಖ್ಯಾತ ನಾಯಕರಲ್ಲಿ ಸೋಲಿನ ಭಯ ಕಾಣಿಸಿಕೊಳ್ಳಬಹುದು. ಸಚಿವ ಕೆ.ಜೆ.ಜಾರ್ಜ್, ರೋಷನ್ ಬೇಗ್, ಶಾಸಕರಾದ ಜಮೀರ್ ಅಹಮದ್, ಹ್ಯಾರಿಸ್ ಅವರಿಗೂ ಎಂಐಎಂ ಕಂಟಕವಾಗಬಹುದು ಎಂದು ಹೇಳಲಾಗುತ್ತಿದೆ.
ಎಂಐಎಂ ಸ್ಪರ್ಧೆಯಿಂದ ಬಿಜೆಪಿ 10ರಿಂದ 15 ಕ್ಷೇತ್ರಗಳಲ್ಲಿ ಸರಳವಾಗಿ ಗೆಲುವನ್ನು ಸಾಧಿಸುತ್ತಾ? ಅಲ್ಪಸಂಖ್ಯಾತ ಮತಗಳು ವಿಭಜನೆಯಾದರೆ ಇದು ಕಾಂಗ್ರೆಸ್ ಗೆ ಭಾರೀ ಹೊಡೆತವಾಗುತ್ತಾ? ಮುಸ್ಲಿಂ ಮತಗಳನ್ನು ಸೆಳೆಯುವಲ್ಲಿ ಓವೈಸಿ ಸಫಲರಾಗ್ತಾರಾ? ಓವೈಸಿ ಹೊಡೆತಕ್ಕೆ ನಲುಗುವವರು ಯಾರು? ಲಾಭ ಪಡೆಯುವರು ಯಾರು? ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.