ಜೊತೆ ಜೊತೆಯಲಿ ಟೀಮ್ ನಿಂದ ಹೊಸ ಹೊಸ ಸುದ್ದಿಗಳು ಬರುತ್ತಿವೆ. ಅನಿರುದ್ಧ ಅವರನ್ನು ಧಾರಾವಾಹಿಯಿಂದ ಕೈ ಬಿಟ್ಟಿದ್ದರಿಂದ, ಇವರು ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರಕ್ಕೆ ಬೇರೆ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಯಿತು. ನಿರ್ದೇಶಕ ಅನೂಪ್ ಭಂಡಾರಿ, ನಟರಾದ ಸುನೀಲ್ ಪುರಾಣಿಕ್ ಮತ್ತು ಹರೀಶ್ ರಾಜ್ ಅವರನ್ನು ಪಾತ್ರ ನಿರ್ವಹಿಸಲು ಕೇಳಲಾಯಿತು. ಕೊನೆಗೆ ಹರೀಶ್ ರಾಜ್ ಪಕ್ಕಾ ಆಯ್ಕೆ ಎನ್ನುವ ಸುದ್ದಿಯೂ ಬಂತು. ಆದರೆ, ಇವೆಲ್ಲವೂ ಮತ್ತೆ ಉಲ್ಟಾ ಹೊಡೆಯುತ್ತಿವೆ.
ಧಾರಾವಾಹಿ ಲೋಕದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಸದ್ಯಕ್ಕೆ ಆರ್ಯವರ್ಧನ್ ಪಾತ್ರಕ್ಕೆ ಯಾರನ್ನೂ ಆಯ್ಕೆ ಮಾಡಿಕೊಳ್ಳುವದಿಲ್ಲವಂತೆ. ಹರೀಶ್ ರಾಜ್ ಅವರು ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ನಟಿಸುತ್ತಿದ್ದರೂ, ಅವರ ಪಾತ್ರ ಬೇರೆಯದ್ದೇ ಆಗಿರಲಿದೆಯಂತೆ. ಆರ್ಯವರ್ಧನ್ ಪಾತ್ರ ಮನೆಬಿಟ್ಟು ಹೋಗಲಿದೆ ಎಂದು ಹೇಳಲಾಗುತ್ತಿದೆ. ಆರ್ಯವರ್ಧನ್ ಪಾತ್ರಕ್ಕೆ ಯಾರನ್ನೂ ಆಯ್ಕೆ ಮಾಡಿಕೊಂಡಿಲ್ಲ ಅಂತಾರೆ, ಮನೆ ಬಿಟ್ಟು ಹೋದ ಆರ್ಯವರ್ಧನ್ ಮುಂದಿನ ದಿನಗಳಲ್ಲಿ ಮತ್ತೆ ವಾಪಸ್ಸು ಮನೆಗೆ ಬಂದರೆ, ಆ ಪಾತ್ರವನ್ನು ಅನಿರುದ್ಧ ಅವರೇ ಮಾಡಲಿದ್ದಾರೆ ಎನ್ನುವ ಅನುಮಾನ ಎಲ್ಲರದ್ದು.
ಆದರೆ, ಇಷ್ಟೊಂದು ರಾದ್ಧಾಂತ ಮಾಡಿಕೊಂಡು, ಒಬ್ಬರಿಗೊಬ್ಬರ ಮೇಲೆ ಕೆಸರಾಟವಾಡಿ ಮತ್ತೆ ಅನಿರುದ್ಧ ಮತ್ತು ನಿರ್ಮಾಪಕ ಆರೂರು ಜಗದೀಶ್ ಒಟ್ಟಿಗೆ ಕೆಲಸ ಮಾಡುತ್ತಾರಾ ಎನ್ನುವ ಪ್ರಶ್ನೆ ಎಲ್ಲರದ್ದು. ಮಾಧ್ಯಮಗಳ ಮುಂದೆ ಆರೋಪ ಪ್ರತ್ಯಾರೋಪ ಮಾಡಿದ ನಂತರ, ವಾಹಿನಿಯ ಪ್ರತಿನಿಧಿಯೇ ಅನಿರುದ್ಧ ಅವರು ಧಾರಾವಾಹಿಯಲ್ಲಿ ಇರುವುದಿಲ್ಲ ಎಂದು ಘೋಷಿದ ಮೇಲೆ ಮತ್ತೆ ಒಂದಾಗಿ ಕೆಲಸ ಮಾಡುವುದು ಅನುಮಾನ ಎನ್ನುವ ಮಾತೂ ಕೇಳಿ ಬರುತ್ತಿದೆ. ಇದನ್ನೂ ಓದಿ:ಅವಳು ನನ್ನನ್ನ ಯೂಸ್ ಮಾಡೋಕೆ ಟಿಶ್ಯೂ ಪೇಪರ್ ಅಲ್ಲ ಎನ್ನುವ ಮಾತಿಗೆ ಗಳಗಳನೆ ಅತ್ತ ಸಾನ್ಯ
ಏನೇ ಇರಲಿ, ಮತ್ತೆ ಅನಿರುದ್ಧ ಅವರು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆ. ಹಾಗಾಗಿ ವಾಹಿನಿಯ ಮುಖ್ಯಸ್ಥರನ್ನೂ ಸೇರಿಸಿ, ಧಾರಾವಾಹಿಯ ತಂಡಕ್ಕೆ ಒತ್ತಡ ಹಾಕುವಂತಹ ಕೆಲಸಗಳು ತೆರೆಮರೆಯಲ್ಲಿ ನಡೆಯುತ್ತಿದೆ. ಇಬ್ಬರೂ ರಾಜಿಯಾಗಿ ಮತ್ತೆ ಅನಿರುದ್ಧ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿ ಎನ್ನುವುದು ಹಲವು ಜನರ ಆಸೆ. ಮುಂದಿನ ದಿನಗಳಲ್ಲಿ ಏನಾಗತ್ತೋ ಕಾದು ನೋಡಬೇಕು.