– 3 ಕುಟುಂಬದ 18 ಮಂದಿ ಸೇವಿಸಿದ್ರು
– ಮೃತರ ಸಂಖ್ಯೆ ಏರಿಕೆ ಸಾಧ್ಯತೆ
ಶಿಲ್ಲಾಂಗ್: ವಿಷಪೂರಿತ ಕಾಡು ಅಣಬೆ ಸೇವಿಸಿ ಐವರು ಮೃತಪಟ್ಟಿರುವ ಘಟನೆ ಮೇಘಾಲಯದ ಪಶ್ಚಿಮ ಭಾಗದ ಜೈತಿಂಯಾ ಪರ್ವತ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಖೊಂಗ್ಲಾ (23), ಈತನ ಸಹೋದರ ಕಟ್ಡಿಲಿಯಾ ಖೊಂಗ್ಲಾ (26), ಸಿನ್ರಾನ್ ಖೊಂಗ್ಲಾ (16), ಲ್ಯಾಪಿನ್‍ಶಾಯ್ ಖೊಂಗ್ಲಾ (28) ಮತ್ತು ಮೋರಿಸನ್ ಧಾರ್ (40) ಎಂದು ಗುರುತಿಸಲಾಗಿದೆ.
ಒಂದು ವಾರದ ಹಿಂದೆ ಭಾರತ-ಬಾಂಗ್ಲಾದೇಶ ಗಡಿಯ ಅಮ್ಲಾರೆಮ್ ಉಪವಿಭಾಗದ ಲ್ಯಾಮಿನ್ ಗ್ರಾಮದಲ್ಲಿ ಮೂರು ಕುಟುಂಬಗಳ ಒಟ್ಟು 18 ಜನರು ಕಾಡು ಅಣಬೆಗಳನ್ನು ಸೇವಿಸಿದ್ದಾರೆ. ಸ್ವಲ್ಪ ಸಮಯದ ನಂತರ ತೀವ್ರ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದುವರೆಗೆ ಚಿಕಿತ್ಸೆ ಫಲಕಾರಿಯಾಗದೆ ಐವರು ಮೃತಪಟ್ಟಿದ್ದಾರೆ.
ಖೊಂಗ್ಲಾ ಯುವಕನನ್ನು ಈಶಾನ್ಯ ಪ್ರಾದೇಶಿಕ ಇಂದಿರಾ ಗಾಂಧಿ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮಧ್ಯಾಹ್ನ ಮೃತಪಟ್ಟಿದ್ದಾನೆ. ಇನ್ನೂ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.
ಸದ್ಯಕ್ಕೆ ಕಟ್ಡಿಲಿಯಾ ಸಹೋದರಿಯರಾದ ಮರಿಯಾಬಾ ಮತ್ತು ವನ್ರಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿಲ್ಲಾಂಗ್‍ನ ವುಡ್‍ಲ್ಯಾಂಡ್ ಆಸ್ಪತ್ರೆಯಲ್ಲಿ ಮೃತ ಮೋರಿಸನ್ ಮಗ 7 ವರ್ಷದ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಇತರೆ ಹತ್ತು ಜನರು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.