ಹಾಸನ: ಭತ್ತದ ಬೆಳೆ ಕಟಾವು ಮಾಡಿ ಭತ್ತವನ್ನು ಬೇರ್ಪಡಿಸಿ ಚೀಲಗಳಲ್ಲಿ ತುಂಬಿಟ್ಟಿದ್ದ ಸುಮಾರು 60 ಕ್ವಿಂಟಾಲ್ ಭತ್ತವನ್ನು ಕಾಡಾನೆಗಳ ಹಿಂಡು ತಿಂದು ಹಾಕಿರುವ ಘಟನೆ ಬೇಲೂರು (Beluru) ತಾಲೂಕಿನ ದೇವಲಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮನು, ಹೂವೇಗೌಡ, ಹಾಲೇಗೌಡ, ಹಿರಿಗೌಡ, ಶರತ್ ಹಾಗೂ ರಮೇಶ್ ಸೇರಿದಂತೆ 8 ಜನ ರೈತರು (Farmers) ಭತ್ತವನ್ನು ಕಟಾವು ಮಾಡಿ ಟ್ರ್ಯಾಕ್ಟರ್ ಮೂಲಕ ಸಾಗಿಸಲು ಸಿದ್ಧತೆ ನಡೆಸಿದ್ದರು. ತಡರಾತ್ರಿ 12 ಕಾಡಾನೆಗಳ ಹಿಂಡು ದಾಳಿ ಮಾಡಿ ಭತ್ತ ತಿಂದು ಹಾಕಿವೆ. ಅಲ್ಲದೇ ಉಳಿದ ಭತ್ತದ ಚೀಲಗಳನ್ನು ಚೆಲ್ಲಾಪಿಲ್ಲಿ ಮಾಡಿವೆ. ಅಂದಾಜು 3 ಲಕ್ಷ ರೂ. ಮೌಲ್ಯದ ಭತ್ತವನ್ನು ಗಜಪಡೆ ನಾಶ ಮಾಡಿವೆ.
ಕಷ್ಟಪಟ್ಟು ಬೆಳೆದಿದ್ದ ಭತ್ತದ ಫಸಲು ಕಳೆದುಕೊಂಡು ರೈತರು ಕಂಗಾಲಾಗಿದ್ದು, ಕಣ್ಣೀರಿಟ್ಟಿದ್ದಾರೆ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಅನ್ನದಾತರು ಆಗ್ರಹಿಸಿದ್ದಾರೆ. ಕಾಡಾನೆಗಳ ಹಾವಳಿಗೆ ಕಡಿವಾಣ ಹಾಕದ ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.