2 ಜೀವಗಳನ್ನ ಬಲಿ ಪಡೆದಿದ್ದ, ಇಡೀ ಗ್ರಾಮದ ಜನರನ್ನೇ ಕಾಡಿದ್ದ ಸಲಗ ಕೊನೆಗೂ ಸೆರೆ

Public TV
2 Min Read
Elephant 1

ಮಡಿಕೇರಿ: ಎರಡು ಜೀವಗಳನ್ನ ಬಲಿ ಪಡೆದು, ಇಡೀ ಗ್ರಾಮದ ಜನರಿಗೆ ಕಾಟ ಕೊಡುತ್ತಿದ್ದ ಒಂಟಿ ಸಲಗವನ್ನ ಕೊನೆಗೂ ಅರಣ್ಯ ಇಲಾಖೆ (Kodagu Forest Department) ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Elephant team

ಹೌದು.. ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಚೆನ್ನಂಗೊಲ್ಲಿ, ಭದ್ರಗೊಳ, ದೇವರಪುರ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಅಡ್ಡಾಡುತ್ತಿದ್ದ ಪುಂಡ ಕಾಡಾನೆ (Wild Elephant) ಸುತ್ತಮುತ್ತಲಿನ ಗ್ರಾಮದ ಜನರನ್ನ ಸಿಕ್ಕಾಪಟ್ಟೆ ಕಾಡಿತ್ತು. ಅಂದಾಜು 40 ವರ್ಷ ಪ್ರಾಯದ ಒಂಟಿ ಸಲಗ ಕೆಲವು ತಿಂಗಳ ಹಿಂದೆ ಇದೇ ಭದ್ರಗೊಳ ಗ್ರಾಮದಲ್ಲಿ ಗೌರಿ ಎಂಬ ಮಹಿಳೆಯನ್ನ ಬಲಿ ಪಡೆದಿತ್ತು. ಅದಾದ ಬಳಿಕ ಎರಡು ದಿನಗಳ ಹಿಂದೆ ಚೆನ್ನಂಗೊಲ್ಲಿ ಗ್ರಾಮದಲ್ಲಿ ಪಾರ್ವತಿ (52) ಎಂಬ ಮಹಿಳೆಯನ್ನ ತುಳಿದು ಸಾಯಿಸಿತ್ತು. ಇದನ್ನೂ ಓದಿ: ಎಲಾನ್‌ ಮಸ್ಕ್‌ ಅವರ 13ನೇ ಮಗುವಿಗೆ ಜನ್ಮ ನೀಡಿದ್ದೇನೆ: ಆಶ್ಲೇ ಹೇಳಿಕೆಗೆ ಮೌನ ಮುರಿದ ಮಸ್ಕ್‌

Elephant 2

ಅಷ್ಟೇ ಅಲ್ಲದೇ ಸುತ್ತ ಮುತ್ತಲಿನ ಬಹಳಷ್ಟು ಮಂದಿಯ ಮೇಲೆ ದಾಳಿ ಮಾಡಿ ಭೀತಿ ಹುಟ್ಟಿಸಿತ್ತು. ಹೀಗಾಗಿ ಈ ಆನೆಯನ್ನ ಸೆರೆ ಹಿಡಿಯಲೇಬೇಕೆಂದು ಗ್ರಾಮಸ್ಥರು ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಶಾಸಕ ಎ.ಎಸ್ ಪೊನ್ನಣ್ಣ ಅವರ ಮೂಲಕ ಅರಣ್ಯ ಸಚಿವರಿಗೆ ಒತ್ತಡ ಹೇರಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕಾಡಾನೆ ಸೆರೆಗೆ ಅನುಮತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಭದ್ರಗೊಳ ಗ್ರಾಮದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ನಡೆಯಿತು.

ಸದ್ಯ ಈ ಆನೆಗೆ ʻವೇದʼ ಎಂದು ಹೆಸರಿಡಲಾಗಿದೆ. ಇದು ಮೊನ್ನೆ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿದ ಬಳಿಕ ಇದೇ ಗ್ರಾಮದ ಸುತ್ತಮುತ್ತಲಿನ ಕಾಫಿ ತೋಟ, ದೇವರ ಕಾಡಿನಲ್ಲಿ ಅಡ್ಡಾಡುತ್ತಿತ್ತು. ಹೀಗಾಗಿ ಅರಣ್ಯಾಧಿಕಾರಿಗಳು ಈ ಪುಂಡಾನೆ ಮೇಲೆ ಕಣ್ಣಿಟ್ಟಿದ್ದರು, ಸೆರೆ ಹಿಡಿಯಲು ಅನುಮತಿ ಸಿಕ್ಕ ಕೂಡಲೆ ಕಾರ್ಯಾಚರಣೆ ನಡೆಸಿದ್ರು. ಇದನ್ನೂ ಓದಿ: ಅಯೋಧ್ಯೆಗೆ ತೆರಳಿದ್ದ ಕಾರಿನ ಗ್ಲಾಸ್ ಒಡೆದು ಕಳ್ಳತನ – 10 ಮೊಬೈಲ್, 20,000 ರೂ. ದೋಚಿದ ಖದೀಮರು

ದುಬಾರೆ, ಮತ್ತಿಗೋಡು ಮತ್ತು ಹಾರಂಗಿ ಸಾಕಾನೆ ಶಿಬಿರದ ಏಳು ಸಾಕಾನೆಗಳು ಮತ್ತು 90ಕ್ಕೂ ಅಧಿಕ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ರು. ದೇವರ ಕಾಡಿನಲ್ಲಿ ಬಿಂದಾಸ್ ಆಗಿ ಅಡ್ಡಾಡುತ್ತಿದ್ದ ಕಾಡಾನೆಗೆ ಅರವಳಿಕೆ ತಜ್ಞ ಡಾ.ರಮೇಶ್ ಅರವಳಿಕೆ ಇಂಜೆಕ್ಷನ್ ಶೂಟ್​ ಮಾಡಿದ್ರು. ಇಷ್ಟು ದಿನ ತನ್ನದೇ ಲೋಕದಲ್ಲಿ ವಿಹರಿಸುತ್ತಾ ಪುಂಡಾಟವಾಡುತ್ತಿದ್ದ ವೇದ ಕೊನೆಗೂ ಸೆರೆಯಾಯಿತು. ಸೆರೆಯಾದ ಬಳಿಕ ಹೆಚ್ಚೇನೂ ನಖರಾ ಮಾಡದೇ ಕ್ರೇನ್ ಸಹಾಯದಿಂದ ಲಾರಿ ಏರಿತು.

ಸದ್ಯ ವೇದನನ್ನ ದುಬಾರೆ ಸಾಕಾನೆ ಶಿಬಿರಕ್ಕೆ ಕರೆದೊಯ್ಯಲಾಗಿದ್ದು ಅಲ್ಲಿ ಕ್ರಾಲ್​ನಲ್ಲಿ ಹಾಕಿ ಸನ್ನಡತೆಯ ಪಾಠ ಹೇಳಲಾಗುತ್ತದೆ. ಇದನ್ನೂ ಓದಿ: ಸ್ಥಳೀಯ ಚುನಾವಣೆಯಿಂದ ಲೋಕಸಭಾ ಚುನಾವಣೆವರೆಗೂ ಸಿದ್ದರಾಮಯ್ಯ ಬೇಕು: ಡಿಕೆಶಿ

Share This Article