ಕಾರವಾರ: ಮುಂಡಗೋಡ ತಾಲೂಕಿನ ಕಾತೂರ ವಲಯದ ಪಾಳಾ ಕೊಡಂಬಿ ರಸ್ತೆಯಲ್ಲಿ ಕಾಡಾನೆ ಕಾಣಿಸಿಕೊಂಡಿದೆ. ಒಂಟಿಸಲಗವೊಂದು ಈ ಭಾಗದಲ್ಲಿ ಓಡಾಡುತ್ತಿದ್ದು, ಸಾರ್ವಜನಿಕರು ಓಡಾಡುವ ರಸ್ತೆಗೆ ಅಡ್ಡ ಬಂದು ನಿಂತಿದ್ದರಿಂದ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಸಂಪೂರ್ಣ ಬಂದ್ ಆಗಿತ್ತು.
ಕಾತೂರು ಅರಣ್ಯ ವಲಯದಿಂದ ಬಂದ ಈ ಗಜರಾಜನು ಪಾಳಾ ಕೊಡಂಬಿ ರಸ್ತೆಯ ನಡುಮಧ್ಯೆ ಬಂದು ನಿಂತು, ಯಾವುದೇ ಆತಂಕವಿಲ್ಲದೆ ಆರಾಮವಾಗಿ ವಿಶ್ರಾಂತಿ ಪಡೆಯಿತು. ಗ್ರಾಮೀಣ ಭಾಗಗಳಿಗೆ ತೆರಳಲು ಬಂದ ಸಾರ್ವಜನಿಕರು ಮತ್ತು ವಾಹನ ಸವಾರರು ಆನೆಯನ್ನು ನೋಡಿ ದಂಗಾಗಿ ಹೋಗಿದ್ದರು. ಭಯದಿಂದ ಯಾರೂ ಮುಂದುವರೆಯದೆ ರಸ್ತೆಯಲ್ಲೇ ನಿಂತಿದ್ದರು. ಇದನ್ನೂ ಓದಿ: ದಾವಣಗೆರೆ ಗಡಿ ಗ್ರಾಮದಲ್ಲಿ ವಿಚಿತ್ರ ಶಬ್ಧ – ಬೆಚ್ಚಿಬಿದ್ದ ಗ್ರಾಮಸ್ಥರು
ಆನೆ ಮಾತ್ರ ಜನ ಅಥವಾ ವಾಹನಗಳ ಬಗ್ಗೆ ಕಿಂಚಿತ್ತೂ ಭಯವಿಲ್ಲದೆ, ರಸ್ತೆಯಲ್ಲೇ ನಿಂತು ನೆರೆದಿದ್ದ ಜನರನ್ನು ನೋಡುತ್ತಿತ್ತು. ಈ ಅನಿರೀಕ್ಷಿತ ಅತಿಥಿಯನ್ನು ನೋಡಲು ಜಮಾಯಿಸಿದ್ದ ಜನರು, ಸಮಯ ಕಳೆಯಲು ಮೊಬೈಲ್‌ನಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ತೆಗೆದುಕೊಂಡರು. ವಿಡಿಯೋ ಮಾಡುವವರಿಗೆ ಪೋಸ್ ನೀಡುವಂತೆ ನಿಂತಿದ್ದ ಆನೆಯು, ಯಾರಿಗೂ ತೊಂದರೆ ಮಾಡದೆ, ಸುಮಾರು ಒಂದು ಗಂಟೆಗೂ ಹೆಚ್ಚು ಸಮಯವನ್ನು ರಸ್ತೆಯಲ್ಲೇ ಕಳೆಯಿತು.
ನಂತರ, ತನ್ನಷ್ಟಕ್ಕೆ ತಾನೇ ನಿಧಾನವಾಗಿ ಅರಣ್ಯದ ಕಡೆಗೆ ಹೆಜ್ಜೆ ಹಾಕಿತು. ಆನೆಯು ಕಾಡಿನೊಳಗೆ ತೆರಳಿದ ಬಳಿಕವಷ್ಟೇ ಜನರು ತಮ್ಮ ಪ್ರಯಾಣವನ್ನು ಮುಂದುವರಿಸಿದರು. ಈ ಕುತೂಹಲಕಾರಿ ಘಟನೆಯನ್ನು ಮೊಟ್ಟೆ ವ್ಯಾಪಾರಿ ಆನಂದ ಮಿರಜಕರ ಅವರು ಸೆರೆ ಹಿಡಿದಿದ್ದಾರೆ.
ಶಿವಮೊಗ್ಗ, ಉತ್ತರ ಕನ್ನಡದತ್ತ ಆನೆ ಹಿಂಡು
ಮೈಸೂರು, ಹಾಸನ ಭಾಗದಿಂದ ಪ್ರತಿವರ್ಷ ಸಂಚಾರ ಮಾಡುವ ಆನೆಗಳು ಸೊರಬಾ ಮೂಲಕ ಉಳವಿ, ಬರ್ಗಿ ಹಾದು ಬನವಾಸಿ ಮೂಲಕ ದಾಂಡೇಲಿ ಅರಣ್ಯ ಪ್ರವೇಶಿಸುತ್ತದೆ. ಸಧ್ಯ ಈಗಾಗಲೇ ಸೊರಬಾ ತಾಲೂಕಿನ ಉಳವಿ, ಜೋಯಿಡಾ ತಾಲೂಕಿನ ಪಣಸೋಲಿ, ಯಲ್ಲಾಪುರ, ಹಳಿಯಾಳ ಭಾಗದಲ್ಲಿ ಆನೆಗಳು ಬೀಡು ಬಿಟ್ಟಿವೆ. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿಗೆ ಪಬ್ ಬುಕ್ ಮಾಡೋ ಮುನ್ನ ಎಚ್ಚರ – ಏಕೆ ಗೊತ್ತೇ?

