ರಾಮನಗರ: ಮೇಕೆ ಮೇಯಿಸಲು ಕಾಡಿಗೆ ಹೋಗಿದ್ದ ವ್ಯಕ್ತಿಯ ಮೇಲೆ ಆನೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಕನಕಪುರ ತಾಲೂಕಿನ ಕೆಂಚೇಗೌಡನ ದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಕೆಂಚೇಗೌಡನ ದೊಡ್ಡಿ ಗ್ರಾಮದ ನಿವಾಸಿ ಲಿಂಗರಾಜು(45) ಗಂಭೀರ ಗಾಯಗೊಂಡ ರೈತ. ಬೆಳಗ್ಗೆ ಮೇಕೆಗಳನ್ನ ಮೇಯಿಸಲು ಗ್ರಾಮದಿಂದ ಕಾಡಿಗೆ ಹೋಗಿದ್ದ ಲಿಂಗರಾಜು ಮರದ ಕೆಳಗೆ ಕುಳಿತ್ತಿದ್ದರು. ಈ ವೇಳೆ ಹಿಂಬದಿಯಿಂದ ದಾಳಿ ನಡೆಸಿದ ಕಾಡಾನೆ ಎತ್ತಿ ಬಿಸಾಡಿದೆ. ಕೆಳಗೆ ಬಿದ್ದು ನರಳಾಡುತ್ತಿದ್ದ ಲಿಂಗರಾಜುವಿನ ಮೇಲೆ ಮತ್ತೆ ದಾಳಿ ಮಾಡಲು ಮುಂದಾಗಿತ್ತು. ಇದನ್ನು ನೋಡಿದ ಸ್ಥಳೀಯರು ಕೂಗಿದ್ದಾರೆ.
ಜನರು ಜೋರಾಗಿ ಕೂಗುತ್ತಿದ್ದಂತೆ ಆನೆ ಘಟನಾ ಸ್ಥಳದಿಂದ ಓಡಿ ಹೋಗಿದೆ. ತಕ್ಷಣವೇ ಲಿಂಗರಾಜು ಅವರ ಬಳಿಗೆ ಬಂದ ಜನರು, ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆನೆ ದಾಳಿ ಮಾಡಿದ್ದ ಪರಿಣಾಮ ಲಿಂಗರಾಜು ಅವರ ಕರುಳು ಹೊರಬಂದಿದ್ದು, ಗಂಭೀರ ಗಾಯಗೊಂಡಿದ್ದಾರೆ.
ಲಿಂಗರಾಜು ಅವರನ್ನು ಮೊದಲು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಘಟನೆ ಸಂಬಂಧ ಸಾತನೂರು ಅರಣ್ಯ ಇಲಾಖೆ ಅಧಿಕಾರಿಗಳಿಂದ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.