ರಾಯಚೂರು: ಜಿಲ್ಲೆಯ ಕೃಷ್ಣಾ ನದಿಯ ಗುರ್ಜಾಪುರ ಬ್ಯಾರೇಜ್ ಬಳಿ ಫೋಟೋ ತೆಗೆಯುವ ನೆಪದಲ್ಲಿ ಪತಿಯನ್ನ ಪತ್ನಿ ನದಿಗೆ ತಳ್ಳಿದ ಆರೋಪ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಪತ್ನಿಯಿಂದ ವಿಚ್ಛೇದನ ಪಡೆಯಲು ಪತಿ ತಾತಪ್ಪ ಮುಂದಾಗಿದ್ದಾನೆ. ಪತ್ನಿ ಗದ್ದೆಮ್ಮ ಸಹ ಸ್ವಯಂ ವಿವಾಹ ವಿಚ್ಛೇದನ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ್ದಾಳೆ.
ಕುಟುಂಬದ ಹಿರಿಯರ ಸಮ್ಮುಖದಲ್ಲಿ ಮಾತುಕತೆ ನಡೆಸಿ ಕುಟುಂಬಸ್ಥರು ಬಾಂಡ್ ಬರೆಯಿಸಿಕೊಂಡಿದ್ದಾರೆ. ಘಟನೆ ಬಳಿಕ ಇಬ್ಬರು ಒಟ್ಟಿಗೆ ಇರುವುದು ಬೇಡ ಅಂತ ನಿರ್ಧರಿಸಿದ್ದಾರೆ. ಮದುವೆಯಾಗಿ ಕೆಲವೇ ದಿನಕ್ಕೆ ಸಂಸಾರ ಕೆಟ್ಟಿದ್ದರೂ ನಮ್ಮ ತಮ್ಮ ಹೇಳಿಕೊಂಡಿರಲಿಲ್ಲ. ನದಿಗೆ ತಳ್ಳಿದ ಬಳಿಕ ಗಂಡನಿಗೆ ಚಪ್ಪಿಲಿ ತೋರಿಸಿದ್ದಾಳೆ. ಕೂಡಲೇ ತನ್ನ ಚಿಕ್ಕಮ್ಮಳಿಗೆ ಫೋನ್ ಮಾಡಿ ನದಿಗೆ ಬಿದ್ದಿದ್ದಾನೆ ಅಂತ ಹೇಳಿದ್ದಾಳೆ ಅಂತ ತಾತಪ್ಪನ ಸಹೋದರರು ಆರೋಪಿಸಿದ್ದಾರೆ. ನಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲ್ಲಾ, ಕೋರ್ಟ್‌ನಲ್ಲಿ ವಿಚ್ಛೇದನ ಪಡೆಯುತ್ತೇವೆ ಎಂದಿದ್ದಾರೆ.
ಮದುವೆಯಾಗುವಾಗ ಇಷ್ಟಪಟ್ಟಿದ್ದ ಗದ್ದೆಮ್ಮ ಮದುವೆ ನಂತರ ಪತಿಯನ್ನ ದೂರ ಇಟ್ಟಿದ್ದಳು. ಈಗ ಇಬ್ಬರು ಪ್ರತ್ಯೇಕವಾಗಿ ತಮ್ಮ ಪಾಡಿಗೆ ತಾವು ಸುಖವಾಗಿರಲಿ ನಮ್ಮ ತಮ್ಮನಿಗೆ ಒಂದೆರಡು ತಿಂಗಳಲ್ಲಿ ಬೇರೆ ಮದುವೆ ಮಾಡುತ್ತೇವೆ ಆ ಹುಡುಗಿ ಬೇಡ. ಹಳೆ ವೈಷಮ್ಯಗಳನ್ನ ಮರೆತು ತಂದೆಯಿಲ್ಲದ ಮಗಳು ಅಂತ ಮದುವೆ ಮಾಡಿಕೊಂಡಿದ್ದೆವು. ಹಳೆಯ ಸಂಬಂಧದಲ್ಲೇ ಮದುವೆ ಮಾಡಿದ್ದರೂ ಸಂಸಾರ ಸರಿಯಿರಲಿಲ್ಲ ಪತಿಯನ್ನೇ ಕೊಲೆ ಮಾಡಲು ಯತ್ನಿಸಿದ್ದಾಳೆ ಅಂತ ತಾತಪ್ಪನ ಸಹೋದರರು ಆರೋಪಿಸಿದ್ದಾರೆ.