ಶ್ರೀನಗರ: ಜಮ್ಮು ಕಾಶ್ಮೀರದ ಸುಂಜುವಾನ್ ಸೇನಾ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ಮಹಿಳೆಯೊಬ್ಬರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.
ಶನಿವಾರದಂದು ನಾಲ್ವರು ಜೈಷ್ ಎ ಮಹಮ್ಮದ್ ಸಂಘಟನೆಯ ಉಗ್ರರು ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದರು. ಕೂಡಲೇ ಅಲ್ಲಿದ್ದ ನಿವಾಸಿಗಳನ್ನ ಸ್ಥಳಾಂತರ ಮಾಡಲಾಗಿತ್ತು. ಆದರೂ 11 ಜನ ಗಾಯಗೊಂಡಿದ್ದರು. ಇವರಲ್ಲಿ ಗರ್ಭಿಣಿಯಾಗಿದ್ದ 24 ವರ್ಷದ ಶಹ್‍ಝಾದಾ ಖಾನ್ ಎಂಬವರಿಗೂ ಗುಂಡೇಟು ಬಿದ್ದಿತ್ತು. ಆದ್ರೆ ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಇಲ್ಲಿನ ಸತ್ವಾರಿ ಮಿಲಿಟರಿ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಸದ್ಯ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದು, ಮಗು 2.5 ಕೆಜಿ ತೂಕವಿದೆ. ಶಹ್‍ಝಾದಾ ಅವರಿಗೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿದೆ. ಇದೇ ಆಸ್ಪತ್ರೆಯಲ್ಲಿ ಸೇನಾಧಿಕಾರಿಯೊಬ್ಬರ ಮಗಳು ಹಾಗೂ ತಲೆಗೆ ಗುಂಡೇಟು ಬಿದ್ದು ಗಾಯಗೊಂಡ 14 ವರ್ಷದ ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಉಗ್ರರ ದಾಳಿಯಿಂದಾಗಿ ಐವರು ಯೋಧರು ಹುತಾತ್ಮರಾಗಿದ್ದಾರೆ. ಹಾಗೂ ಒಬ್ಬ ನಾಗರೀಕ ಕೂಡ ಮೃತಪಟ್ಟಿದ್ದಾರೆ. ಹುತಾತ್ಮ ಯೋಧರಲ್ಲೊಬ್ಬರಾದ ಸುಬೇದಾರ್ ಮದನ್ ಲಾಲ್ ಚೌಧರ್ ಬರಿಗೈಯಲ್ಲೇ ಯೋಧರನ್ನ ಎದುರಿಸಿದ್ರು. ತುಂಬಾ ಸನಿಹದಿಂದ ಅವರ ಮೇಲೆ ಹಲವು ಬಾರಿ ಗುಂಡಿನ ದಾಳಿ ನಡೆದು ಮೃತಪಟ್ಟರು.
ಗರ್ಭಿಣಿ ಶಹ್‍ಝಾದಾ ಖಾನ್ ಅವರನ್ನ ಹೆಲಿಕಾಪ್ಟರ್ ಮೂಲಕ ಕ್ಯಾಂಪ್‍ನಿಂದ ಏರ್‍ಲಿಫ್ಟ್ ಮಾಡಿ ಮಿಲಿಟರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿನ ವೈದ್ಯರು ರಾತ್ರಿಯಿಡೀ ಕಾರ್ಯ ನಿರ್ವಹಿಸಿ ತಾಯಿ-ಮಗುವಿನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯ ಪತಿ ನಾಜಿರ್ ಅಹ್ಮದ್ ಕೂಡ ಗುಂಡೇಟಿನಿಂದ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭಾನುವಾರದಂದು ಭದ್ರತಾ ಪಡೆ ನಾಲ್ವರು ಉಗ್ರರನ್ನು ಸದೆಬಡಿದಿದ್ದಾರೆ. ಎಲ್ಲಾ ಉಗ್ರರು ಎಕೆ-56 ಆಯುಧಗಳನ್ನ ಹೊಂದಿದ್ದು, ಅವನ್ನು ದಾಳಿಗಾಗಿ ಬಳಸಿದ್ದರು ಎಂದು ವರದಿಯಾಗಿದೆ.