10 ಸಾವಿರ ಕೊಟ್ಟು ಪತಿಯನ್ನು ಮಂಗಳೂರು ಬೀಚ್ ನೋಡಲು ಲವ್ವರ್ ಜೊತೆ ಕಳುಹಿಸಿ ಕೊಲೆಗೈದ್ಳು!

Public TV
2 Min Read
KARWAR ARREST

ಕಾರವಾರ: ಕೆಲವು ದಿನಗಳ ಹಿಂದೆ ಕುಮಟಾ ತಾಲೂಕಿನ ಗಡಿ ಭಾಗದ ದೇವಿಮನೆ ಘಟ್ಟ ಭಾಗದ ಮಾಸ್ತಿಮನೆ ದೇವಸ್ಥಾನದ ಹಿಂಭಾಗದಲ್ಲಿ ಅನಾಥ ಶವ ಪತ್ತೆಯಾಗಿತ್ತು. ಈ ಕುರಿತು ಕುಮಟಾ ಪೊಲೀಸರು (Kumta Police) ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಗದಗ ಮತ್ತು ಬಾಗಲಕೋಟೆ (Bagalkote) ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗದಗ ಮೂಲದ ಪರಶುರಾಮ, ಬಾಗಲಕೋಟೆ ಮೂಲದ ರವಿ, ಕೊಲೆಯಾದ ವ್ಯಕ್ತಿಯ ಪತ್ನಿ ರಾಜಮಾ, ಗದಗ ಮೂಲದ ಬಸವರಾಜ್ ಬಂಧಿತರು.

ಘಟನೆ ಏನು?, ಪ್ರಕರಣ ಬೇಧಿಸಿದ್ದು ಹೇಗೆ?: ಸೆ.30 ರಂದು ಬಾಗಲಕೋಟೆ ಮೂಲದ ಬಶೀರ್ ಸಾಬ್ ಎಂಬಾತನನ್ನು ಮಂಗಳೂರಿಗೆ ಬೀಚ್ ನೋಡುವ ಹೆಸರಿನಲ್ಲಿ ಪತ್ನಿ ರಾಜಮಾ 10 ಸಾವಿರ ಹಣ ನೀಡಿ ತಾನು ಅಕ್ರಮ ಸಂಬಂಧ ಹೊಂದಿದ್ದ ಪರಶುರಾಮನೊಂದಿಗೆ ಕಳುಹಿಸಿ ಕೊಟ್ಟಿದ್ದಾಳೆ. ಮಂಗಳೂರಿಗೆ ತೆರಳಿದ್ದ ಇವರು ಅಲ್ಲಿ ಕೊಲೆ ಮಾಡುವ ಉದ್ದೇಶದಿಂದ ಪರಶುರಾಮ ತನ್ನ ದೊಡ್ಡಮ್ಮನ ಮಗ ರವಿ, ಬಸವರಾಜ್ ಜೊತೆಯಾಗಿದ್ದಾರೆ.

ನಂತರ ಮಂಗಳೂರಿನಿಂದ ಕುಮಟಾ ಮಾರ್ಗವಾಗಿ ದೇವಿಮನೆ ಘಟ್ಟದಲ್ಲಿ ಕೊಲೆಯಾದ ಬಶೀರ್ ಸಾಬ್ ನೊಂದಿಗೆ ಇವರು ಇಳಿದು ದೇವಸ್ಥಾನದ ಹಿಂಭಾಗದಲ್ಲಿ ಮದ್ಯ ಸೇವಿಸಿದ್ದಾರೆ. ಈ ವೇಳೆ ಪರಶುರಾಮ, ಬಶೀರ್ ಸಾಬ್‍ಗೆ ಹಿಂಭಾಗದಿಂದ ಕಟ್ಟಿಗೆಯಲ್ಲಿ ಹೊಡೆದು ಸಾಯಿಸಿ ಅಲ್ಲಿಯೇ ಕಾಡಿನಲ್ಲಿ ಶವ ಹಾಕಿ ಹೋಗಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಾಟೆ ಕೇಸ್ ವಾಪಸ್ ಪಡೆಯೋ ಚರ್ಚೆಯೇ ಆಗಿಲ್ಲ: ಪರಮೇಶ್ವರ್

ಘಟನೆ ಬೆಳಕಿಗೆ ಬರುತ್ತಿದ್ದಂತೆ ಕುಮಟಾ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ನಾಲ್ಕು ಜನರನ್ನು ಬಂಧಿಸಿದ್ದು, ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಾನೆ ಎಂಬ ಕಾರಣದಿಂದ ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವುದಾಗಿ ಕೊಲೆಯಾದ ಬಶೀರ್ ಸಾಬ್ ಪತ್ನಿ ರಾಜಮ ತಪ್ಪೊಪ್ಪಿಕೊಂಡಿದ್ದಾಳೆ. ಆರೋಪಿಗಳನ್ನು ನ್ಯಾಯಾಲಯದ ಸುಪರ್ದಿಗೆ ವಹಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಕುಮಟಾ ಪಿ.ಎಸ್.ಐ ನವೀನ್ ನಾಯ್ಕ್, ಕುಮಟಾ ಪೊಲೀಸ್ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್, ಪಿ.ಎಸ್.ಐ ಸಂಪತ್ , ಸಿಬ್ಬಂದಿ ಗಣೇಶ್ ನಾಯ್ಕ್, ಗುರು ನಾಯ್ಕ್, ಪ್ರದೀಪ್ ನಾಯ್ಕ್, ಲೋಕೇಶ್, ರಾಜು ನಾಯ್ಕ್, ನಿರಂಜನ್ ಸೇರಿದಂತೆ ಇತರರು ಭಾಗಿಯಾಗಿದ್ದರು.

Web Stories

Share This Article