ಚಿಕ್ಕಬಳ್ಳಾಪುರ: ಅನೈತಿಕ ಸಂಬಂಧದ ಅನುಮಾನ ವ್ಯಕ್ತಪಡಿಸಿದಕ್ಕೆ ಗಲಾಟೆ ಮಾಡಿದ್ದಕ್ಕೆ ಮರ್ಮಾಂಗ ಹಾಗೂ ಕತ್ತು ಹಿಸುಕಿ ಪತ್ನಿಯೇ ಪತಿಯನ್ನು ಕೊಲೆ ಮಾಡಿರುವ ಘಟನೆ ಗೌರಿಬಿದನೂರು ತಾಲೂಕು ಯರ್ರಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಫೆಬ್ರವರಿ 10 ರಂದು ಗ್ರಾಮದ ಸಂಜೀವಪ್ಪ(35) ಮೂಗಿನಲ್ಲಿ ರಕ್ತ ಕಾರುವುದರ ಮೂಲಕ ಮನೆಯಲ್ಲೇ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರು. ಈ ಬಗ್ಗೆ ತನ್ನ ಪತಿ ಕುಡಿದ ಅಮಲಿನಲ್ಲಿ ಮೃತಪಟ್ಟಿದ್ದಾನೆ ಎಂದು ಗೌರಿಬಿದನೂರು ಗ್ರಾಮಾಂತರ ಪೊಲೀಸರ ಬಳಿ ಪತ್ನಿ ಗಂಗರತ್ನ ಕಟ್ಟುಕಥೆ ಕಟ್ಟಿದ್ದಳು. ಆದರೆ ಅನುಮಾನಗೊಂಡ ಪೊಲೀಸರು ತೀವ್ರ ವಿಚಾರಣೆ ನಡೆಸಿದರೂ ಗಂಗರತ್ನ ಸತ್ಯ ಬಾಯ್ಬಿಟ್ಟಿರಲಿಲ್ಲ.
ಬೆಳಕಿಗೆ ಬಂದಿದ್ದು ಹೇಗೆ?
ಮೃತ ಸಂಜೀವಪ್ಪನ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮರ್ಮಾಂಗ ಹಿಸುಕಿ ಹಾಗೂ ಕತ್ತು ಹಿಸುಕಿರುವುದರಿಂದ ಉಸಿರುಗಟ್ಟಿ ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದರು. ಹೀಗಾಗಿ ಪತ್ನಿ ಗಂಗರತ್ನಳನ್ನ ಮತ್ತೆ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಗಂಗರತ್ನ ಕೊಲೆ ಎಸಗಿರುವುದನ್ನು ಒಪ್ಪಿಕೊಂಡಿದ್ದಾಳೆ.
ಎರಡನೇ ಗಂಡ-ಎರಡನೇ ಹೆಂಡತಿ: ಮೃತ ಸಂಜೀವಪ್ಪನಿಗೆ ಗಂಗರತ್ನ ಎರಡನೇ ಹೆಂಡತಿಯಾಗಿದ್ದು, ಮೊದಲ ಹೆಂಡತಿ ಬಿಟ್ಟು ಹೋದ ನಂತರ ಗಂಗರತ್ನಳನ್ನ ಸಂಜೀವಪ್ಪ ಮದುವೆಯಾಗಿದ್ದರು. ಇನ್ನೂ ಗಂಗರತ್ನಳಿಗೂ ಸಂಜೀವಪ್ಪ ಎರಡನೇ ಗಂಡ, ಮೊದಲ ಗಂಡನನ್ನ ಬಿಟ್ಟು ಸಂಜೀವಪ್ಪ ನನ್ನ ಕೈ ಹಿಡಿದಿದ್ದಳು.
ಇವರಿಬ್ಬರ ಸುಖ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಒಂದು ಮಗು ಕೂಡ ಇದೆ. ಆದರೆ ಕೊಲೆ ನಡೆಯವುದಕ್ಕೂ ಮುನ್ನ 3-4 ತಿಂಗಳ ಹಿಂದೆ ಗಂಗರತ್ನ ಸಂಜೀವಪ್ಪನನ್ನ ಬಿಟ್ಟು ಹೋಗಿದ್ದಳು. ಕೊಲೆ ಮಾಡುವ ಮುನ್ನ 15 ದಿನಗಳ ಹಿಂದೆಯಷ್ಟೇ ಮತ್ತೆ ಮನೆಗೆ ಬಂದು ಜೊತೆಯಲ್ಲಿ ಇರುತ್ತೇನೆ ಎಂದು ಜೊತೆಯಾಗಿ ಸಂಸಾರ ನಡೆಸಿದ್ದಳು.