ದೊಡ್ಡಬಳ್ಳಾಪುರ: ಗಂಡನ ಬಿಟ್ಟು ಪ್ರಿಯಕರನ ಜೊತೆ ಪರಾರಿಯಾಗಿದ್ದ ಪತ್ನಿಯನ್ನ ಗಂಡ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರವ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಕೋಳೂರು ಗ್ರಾಮದಲ್ಲಿ ನಡೆದಿದೆ.
ಕೋಳೂರು ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಭಾರತಿ (27) ಕೊಲೆಯಾದ ಗೃಹಿಣಿ. ಈಕೆಯ ಪತಿ ಹರೀಶ್ ಕೊಲೆ ಮಾಡಿದಾತ. ಮೃತ ಭಾರತಿ ಮೂಲತಃ ಮಧುಗಿರಿ ತಾಲೂಕಿನ ಐಡಿಹಳ್ಳಿ ಹೋಬಳಿಯ ಚಿಕ್ಕದಾಳವಟ್ಟ ಗ್ರಾಮದವಳಾಗಿದ್ದು, ಪತಿ ಹರೀಶ್‍ನ ತ್ಯಜಿಸಿ ಮಗುವಿನೊಂದಿಗೆ ಅದೇ ಗ್ರಾಮದ ಗಂಗರಾಜನೆಂಬ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದಳು. ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು ಗ್ರಾಮದ ಬಾಡಿಗೆ ಮನೆಯಲ್ಲಿ ಕೆಲ ದಿನಗಳಿಂದ ಭಾರತಿ ಅಕ್ರಮವಾಗಿ ಸಂಸಾರ ನಡೆಸುತ್ತಿದ್ದಳು.
ಈ ವಿಳಾಸ ತಿಳಿದುಕೊಂಡ ಗಂಡ ಹರೀಶ್ ಹುಡುಕಿಕೊಂಡು ಬಂದಿದ್ದಾನೆ. ಈ ವೇಳೆ ಹರೀಶ್ ಮತ್ತು ಭಾರತಿಯ ನಡುವೆ ಜಗಳ ನಡೆದಿದ್ದು, ಕೋಪ ತಾರಕಕ್ಕೇರಿ ಹರೀಶ್, ಭಾರತಿಯನ್ನು ಕೊಂದು ಮಗುವನ್ನು ಎತ್ತಿಕೊಂಡು ಚಿಕ್ಕದಾಳವಟ್ಟ ಗ್ರಾಮಕ್ಕೆ ಹಿಂದಿರುಗಿದ್ದಾನೆ. ಆದರೆ ಘಟನೆಯ ಸ್ಥಳದಲ್ಲಿದ್ದ ಗಂಗರಾಜ ನಾನೇ ಮೃತ ಭಾರತಿಯ ಪತಿ ಎಂದು ಹೇಳಿದ್ದು, ಗ್ರಾಮಸ್ಥರು ಹಾಗೂ ಪೊಲೀಸರಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ – ಪತಿ ವಿರುದ್ಧ ಕೊಲೆ ಆರೋಪ
ತನಿಖೆಯ ವೇಳೆ ಭಾರತಿಯ ನಿಜವಾದ ಗಂಡ ಹರೀಶ್ ಆಗಿದ್ದು, ಆತನೇ ಗಂಗರಾಜನೊಂದಿಗಿನ ಭಾರತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಕೊಲೆ ಮಾಡಿದ್ದಾನೆಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸದ್ಯ ಗಂಡ ಹರೀಶ್ ಹಾಗೂ ಪ್ರಿಯಕರ ಇಬ್ಬರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Web Stories