ಮಡಿಕೇರಿ: ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿ ಅಲ್ಲಿಂದ ನಾಪತ್ತೆಯಾಗಿದ್ದ ಮಹಿಳೆ, 7 ವರ್ಷದ ಬಳಿಕ ತನ್ನ ಗಂಡನ ಸೇರಿದ ಅಪರೂಪದ ಘಟನೆಗೆ ಮಡಿಕೇರಿಯ ತನಲ್ ಸಂಸ್ಥೆ ಸಾಕ್ಷಿಯಾಗಿದೆ. ಏಳು ವರ್ಷಗಳ ಬಳಿಕ ತನ್ನ ಪತ್ನಿಯನ್ನು ಕಂಡ ಪತಿಗೆ ದುಃಖ ಉಮ್ಮಳಿಸಿ ಬಂದಿತ್ತು. ಏನೂ ಮಾತನಾಡದೆ ಪತ್ನಿಯ ತಲೆಯನ್ನು ಸವರಿ ಕಣ್ತುಂಬಿ ಬಂದ ನೀರನ್ನು ಕಣ್ಣಂಚಿನಲ್ಲೇ ತಡೆಹಿಡಿದು ಪತ್ನಿಯ ಮುದ್ದಿಸಿದ ಆ ಕ್ಷಣ ಎಂತ ಕಲ್ಲು ಹೃದಯದವನ್ನಾದರೂ ಕರಗಿಸುವಂತಿತ್ತು.
Advertisement
Advertisement
ಹೌದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೊತ್ತೂರಿನ ರಾಜಪ್ಪ ಮತ್ತವರ ಪತ್ನಿ ಮುತ್ತಮ್ಮ ಏಳು ವರ್ಷದ ಬಳಿಕ ಒಂದಾಗಿದ್ದಾರೆ. ಸಂಬಂಧ ಎನ್ನೋದು ಎಷ್ಟು ಗಟ್ಟಿ ಎನ್ನೋದಕ್ಕೆ ಈ ಘಟನೆ ಸಾಕ್ಷಿ. ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದ ಮುತ್ತಮ್ಮನನ್ನು 2014 ರಲ್ಲಿ ಬೆಂಗಳೂರಿಗೆ ಕರೆತಂದು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ತಿಂಗಳ ಕಾಲ ಮುತ್ತಮ್ಮನಿಗೆ ಚಿಕಿತ್ಸೆ ಕೊಡಲಾಗಿತ್ತು. ಆದರೆ ಮುತ್ತಮ್ಮ ಇದ್ದಕ್ಕಿದ್ದಂತೆ ಒಂದು ದಿನ ಆಸ್ಪತ್ರೆಯಿಂದ ನಾಪತ್ತೆ ಆಗಿದ್ದರು. ಅಂದಿನಿಂದ ಪತಿ ರಾಜಪ್ಪ, ಅಳಿಯಂದಿರಾದ ದೊರೆ, ನಾಗರಾಜ್ ಸೇರಿದಂತೆ ಇಡೀ ಕುಟುಂಬ ಮುತ್ತಮ್ಮನಿಗಾಗಿ ಹುಡುಕದ ಊರಿಲ್ಲ, ಸುತ್ತದ ಜಿಲ್ಲೆಯಿಲ್ಲ. ಕೊನೆಗೆ ತನ್ನ ಪತ್ನಿ ನಾಪತ್ತೆ ಎಂದು ರಾಜಪ್ಪ ಬೆಂಗಳೂರಿನಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
Advertisement
Advertisement
ನಾಲ್ಕೈದು ವರ್ಷಗಳ ಕಾಲ ನಿತ್ಯವೂ ಹುಡುಕಾಡಿದ ರಾಜಪ್ಪ ಮತ್ತು ಕುಟುಂಬದವರು ಇನ್ನು ನಮ್ಮ ಪಾಲಿಗೆ ಅವರಿಲ್ಲ ಎಂದು ಸುಮ್ಮನಾಗಿ ಬಿಟ್ಟಿದ್ದರು. ಆದರೆ 2017 ರಲ್ಲಿ ಇತ್ತ ಮಡಿಕೇರಿಯ ಹೊಟೇಲ್ ಒಂದರ ಮುಂದೆ ಕಸದ ತೊಟ್ಟಿಯ ಬಳಿ ಮುತ್ತಮ್ಮ ನಡೆಯಲಾರದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಸ್ಪತ್ರೆಯಿಂದ ತಪ್ಪಿಸಿಕೊಂಡ ಬಳಿಕ ಮುತ್ತಮ್ಮ ಅವರ ಎಡಗಾಲಿಗೆ ಏನೋ ಪೆಟ್ಟು ಬಿದ್ದಿತ್ತು. ಪರಿಣಾಮ ಕಾಲು ಗ್ಯಾಂಗ್ರಿನ್ ಗೆ ತಿರುಗಿ ಪಾದದ ಭಾಗ ಕೊಳೆತು ಉಳು ಬಿದ್ದಿತ್ತು. ಆ ಸ್ಥಿತಿಯನ್ನು ಕಂಡು ಅಲ್ಲಿ ಓಡಾಡುವ ಜನರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದರು. ಅಂತಹ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆಗೆ ಮುಂದಾಗಿದ್ದು ಮಡಿಕೇರಿಯ ತನಲ್ ಎಂಬ ಅನಾಥಾಶ್ರಮ. ಇದನ್ನೂ ಓದಿ: ಪೈರಸಿ ಒಂದು ವೈರಸ್, ತಡೆಯವುದು ಕಷ್ಟ: ಸುಮಲತಾ ಅಂಬರೀಶ್
2017 ರಲ್ಲಿ ಮಹಿಳೆಯನ್ನು ರಕ್ಷಿಸಿದ ಸಂಸ್ಥೆಯು ಕೇರಳದಲ್ಲಿರುವ ಕೇಂದ್ರ ಶಾಖೆಗೆ ಕಳುಹಿಸಿ ಅಲ್ಲಿ ಕೊಳೆತಿದ್ದ ಕಾಲು ಮತ್ತು ಮಾನಸಿಕ ಚಿಕಿತ್ಸೆಯನ್ನು ಕೊಡಿಸಿದೆ. ಏಳು ತಿಂಗಳ ಕಾಲ ಚಿಕಿತ್ಸೆ ನೀಡಿದ ಬಳಿಕ ಕಾಲು ಸಂಪೂರ್ಣ ಗುಣವಾಗಿದ್ದರೆ, ಮಾನಸಿಕ ಆರೋಗ್ಯ ಕೂಡ ಶೇ 90 ರಷ್ಟು ಸರಿಹೋಗಿದೆ. ಕೇರಳದಿಂದ ಮುತ್ತಮ್ಮ ಅವರನ್ನು ವಾಪಸ್ ಕರೆತಂದ ಬಳಿಕ ಅವರ ವಿಳಾಸ ಕೇಳಿದಾಗ ಮಹಿಳೆಯದ್ದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೊತ್ತೂರಿನ ರಾಜಪ್ಪ ಎಂಬವರ ಪತ್ನಿ ಎನ್ನೋದು ಗೊತ್ತಾಗಿದೆ. ಆದರೆ ಅವರನ್ನು ಪತ್ತೆಹಚ್ಚಲು ತನಲ್ ಸಂಸ್ಥೆಯ ಕೊಡಗು ಶಾಖೆಯ ವ್ಯವಸ್ಥಾಪಕ ಮಹಮ್ಮದ್ ಸಾಕಷ್ಟು ಪ್ರಯತ್ನಿಸಿದ್ದರು. ನಂತರ ಕೊಡಗು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಸುಬ್ರಹ್ಮಣ್ಯ ಅವರು ಮುತ್ತಮ್ಮ ಅವರ ವಿಳಾಸ ಹುಡುಕಿಸುವುದರಲ್ಲಿ ಯಶಸ್ವಿಯಾಗಿದ್ದರು. ಇದನ್ನೂ ಓದಿ: ಕೊರೊನಾ ನಿಯಂತ್ರಣಕ್ಕೆ ಮೈಸೂರು ಪೊಲೀಸರಿಂದ ವಿನೂತನ ಪ್ರಯತ್ನ – ಸ್ವಯಂ ಸೇವಕರಿಗೆ ಗುರುತಿನ ಚೀಟಿ
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೊತ್ತೂರಿಗೆ ಹೋದ ಪೊಲೀಸರು ಕಟ್ಟಡ ಕಾರ್ಮಿಕರಾಗಿರುವ ರಾಜಪ್ಪ ಅವರನ್ನು ಭೇಟಿಯಾಗಿ ನಿಮ್ಮ ಪತ್ನಿ ಇದ್ದಾರೆ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿದ ರಾಜಪ್ಪಗೆ ಇನ್ನಿಲ್ಲದ ಸಂತೋಷ, ದುಃಖ ಮತ್ತು ಆಶ್ಚರ್ಯ ಎಲ್ಲವೂ ಒಟ್ಟೊಟ್ಟಿಗೆ ಆಗಿದೆ. ಕೂಡಲೇ ತಮ್ಮ ಅಳಿಯ ದೊರೆ ಮತ್ತು ನಾಗರಾಜು ಅವರನ್ನು ಕರೆದುಕೊಂಡು ಭಾನುವಾರ ತಡರಾತ್ರಿ ಮಡಿಕೇರಿ ತಲುಪಿದ್ದಾರೆ. ರಾತ್ರಿ ತಡವಾಗಿದ್ದರಿಂದ ರಾಜಪ್ಪ ಮತ್ತು ಅಳಿಯಂದಿರಿಗೆ ಮುತ್ತಮ್ಮನನ್ನು ಸೋಮವಾರ ಬೆಳಗ್ಗೆ ಭೇಟಿ ಮಾಡಿಸಿದ್ದಾರೆ. ಇದ್ದಕ್ಕಿದ್ದಂತೆ ನಾಪತ್ತೆಯಾಗಿ ತನ್ನಿಂದ ದೂರವಿದ್ದ ಹೆಂಡತಿಯನ್ನು ಏಳು ವರ್ಷಗಳ ಬಳಿಕ ಕಂಡ ಪತಿ ರಾಜಪ್ಪಗೆ ಕಣ್ಣಿನಲ್ಲಿ ನೀರು ತುಂಬಿ ಕೊರಳು ಬಿಗಿದು ಹೋಗಿತ್ತು. ತಾನೇನು ಮಾತನಾಡದೆ ಕೇವಲ ತನ್ನ ಪತಿಯ ತಲೆಯನ್ನು ಸವರಿ ಮುದ್ದು ಮಾಡಿದರು. ಈ ದೃಶ್ಯ ಎಂಥವರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದ್ದವು. ತನ್ನ ಪತಿಯನ್ನು ಕಂಡ ಮುತ್ತಮ್ಮ ಕೂಡ ಖುಷಿಯಿಂದಲೇ ತನ್ನ ಊರಿಗೆ ಹೊರಟಿದ್ದರು. ಅನಾಥಾಶ್ರಮದಲ್ಲಿದ್ದ ಇತರ ವೃದ್ಧೆಯರು, ಮಹಿಳೆಯರು ಮುತ್ತಮ್ಮಗೆ ಕೈಬಿಸಿ ಹೋಗಿ ಬಾ ಮುತ್ತಮ್ಮ ಚೆನ್ನಾಗಿರು ಎಂದು ಹಾರೈಸುತ್ತಿದ್ದ ದೃಶ್ಯವೂ ಹೃದಯಸ್ಪರ್ಶೀಯಾಗಿತ್ತು.