ಕುಡುಕ ಗಂಡನಿಗೆ ಬುದ್ಧಿ ಕಲಿಸಲು ಹೋದ ಹೆಂಡತಿ ಮಾಡಿದ್ದು ಆತ್ಮಹತ್ಯೆ ನಾಟಕ!

Public TV
1 Min Read
karwar 1

ಕಾರವಾರ: ಗಂಡ-ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬ ಗಾದೆಯೊಂದಿದೆ. ಆದರೆ ಗಂಡ-ಹೆಂಡತಿ ಜಗಳ ಮುಂದುವರಿದರೆ ಏನಾಗುತ್ತೆ ಅನ್ನೋದಕ್ಕೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ (Kumta) ತಾಲೂಕಿನ ಸಾಂತಗಲ್ ಗ್ರಾಮದ ನಿವೇದಿತಾ ನಾಗರಾಜ ಭಂಡಾರಿ ಎಂಬ ಗೃಹಿಣಿ ಮಾಡಿದ ಪಜೀತಿ ಯಾರಿಗೂ ಬೇಡ.

ಕಳೆದೆರಡು ದಿನಗಳ ಹಿಂದೆ ಗೃಹಿಣಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ ಎಂಬ ವರದಿಗೆ ಟ್ವಿಸ್ಟ್ ಸಿಕ್ಕಿದೆ. ಕುಮಟಾದ ಸಾಂತಗಲ್ ಗ್ರಾಮದ ನಿವೇದಿತಾ ನಾಗರಾಜ ಭಂಡಾರಿ ಮಕ್ಕಳನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು, ಕುಮಟಾದ ಹೆಡ್‌ಬಂದರ್ ಸಮುದ್ರದ ಬಳಿ ತಾನು ತಂದಿದ್ದ ಸ್ಕೂಟಿಯಲ್ಲಿ ಮಾಂಗಲ್ಯ, ಕಾಲುಂಗುರ, ಮೊಬೈಲ್ ಇಟ್ಟು ಸಮುದ್ರಕ್ಕೆ ಹಾರಿದಂತೆ ನಾಟಕವಾಡಿದ್ದಾಳೆ.

karwar kumta suicide uttara kannada

ಸಮುದ್ರದಲ್ಲಿ ಆಕೆಯ ವೇಲ್ ಬಿದ್ದು ತೇಲುತ್ತಿದ್ದುದ್ದನ್ನು ಕಂಡು ಲೈಫ್ ಗಾರ್ಡಗಳು, ಪೊಲೀಸರು ಸಮುದ್ರ ಜಾಲಾಡಿದ್ದಾರೆ. ಆದರೆ ಆಕೆಯ ಶವ ಮಾತ್ರ ಸಿಕ್ಕಿರಲಿಲ್ಲ. ಹೀಗಾಗಿ ಘಟನೆ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪಿಎಸ್‌ಐ ನವೀನ್ ನೇತೃತ್ವದ ತಂಡ ಸಮುದ್ರ ಜಾಲಾಡುವ ಜೊತೆ ಬೇರೆ ರೀತಿಯಲ್ಲೂ ತನಿಖೆ ಕೈಗೊಂಡಿದ್ದರು. ಇದನ್ನೂ ಓದಿ: ಚಿಕ್ಕಪ್ಪನನ್ನೇ ಕೊಂದ ಪ್ರಕರಣ – ಜ್ಯೂಸ್ ಅಂತ ಹೇಳಿ ಮದ್ಯ ಕುಡಿಸಿದ್ದಕ್ಕೆ ಬರ್ಬರ ಹತ್ಯೆ

ಕೊನೆಗೆ ಆಟೋ ಚಾಲಕರೊಬ್ಬರ ಮೂಲಕ ಆಕೆ ಬೇರೆಡೆ ಅಡಗಿರುವ ಕುರಿತು ಮಾಹಿತಿ ಕಲೆಹಾಕಿ ಬಲೆ ಬೀಸಿದಾಗ ಸಾವಿನ ನಾಟಕವಾಡಿರುವುದು ಪತ್ತೆಯಾಗಿದೆ. ಆಕೆಯನ್ನು ವಿಚಾರಣೆ ನಡೆಸಿದಾಗ ತಾನು ಗಂಡನ ಮೇಲೆ ಕೋಪಕ್ಕೆ ಹೀಗೆ ಮಾಡಿದ್ದೇನೆ. ಪ್ರತಿ ದಿನ ಕುಡಿದು ನನ್ನೊಂದಿಗೆ ಜಗಳವಾಡುತಿದ್ದ, ಹೊಡೆಯುತಿದ್ದ. ಹೀಗಾಗಿ ಆತನಿಗೆ ಬುದ್ಧಿ ಕಲಿಸಲು ಹೀಗೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.

ಸದ್ಯ ಆತ್ಮಹತ್ಯೆ ಪ್ರಕರಣವೇನೋ ಸುಖಾಂತ್ಯ ಕಂಡಿದೆ. ಆದರೆ ಗಂಡ-ಹೆಂಡತಿ ಜಗಳದಿಂದ ಪೊಲೀಸರು, ದಿನವಿಡೀ ರಕ್ಷಣಾ ಕಾರ್ಯದಲ್ಲಿ ತೊಡಗಿದ ಲೈಫ್ ಗಾರ್ಡ್‌ಗಳ ಸಮಯ ವ್ಯರ್ಥ ಮಾಡಿದ್ದು ಮಾತ್ರ ವಿಪರ್ಯಾಸವಾಗಿದೆ. ಇದನ್ನೂ ಓದಿ: ಹೆಜ್ಜೆ ಹೆಜ್ಜೆಗೂ ಅಡೆತಡೆ – ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ

Share This Article