ಮುಂಬೈ: ತನ್ನತ್ತ ಗಮನ ಕೊಡದೆ ಟಿವಿ ನೋಡ್ತಿದ್ದಾರೆಂದು ಕೋಪಗೊಂಡು ಪತ್ನಿಯೊಬ್ಬಳು ತನ್ನ ಪತಿ ಮೇಲೆ ಚಾಕುವಿನಿಂದ ದಾಳಿ ಮಾಡಿರೋ ಘಟನೆ ಮುಂಬೈನಲ್ಲಿ ನಡೆದಿದೆ.
Advertisement
ಇಲ್ಲಿನ ಚೆಂಬುರ್ ಈಸ್ಟ್ನ ವಾಶಿ ನಾಕಾದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಮಹಿಳೆ ಶಾಂತಿ ದಾಸ್ ಅಂದು ಇಡೀ ದಿನ ತನ್ನ ತಾಯಿಯ ಮನೆಯಲ್ಲಿದ್ದರು. ಪತಿ ಸುರೇಶ್ ರಿಯಲ್ ಎಸ್ಟೇಟ್ ಕೆಲಸ ಮಾಡಿಕೊಂಡಿದ್ದು ಸಂಜೆ 6.30ಕ್ಕೆ ಮನೆಗೆ ಬಂದಿದ್ದರು. ಆದ್ರೆ ಮನೆಗೆ ಬೀಗ ಹಾಕಲಾಗಿತ್ತು. ಮಕ್ಕಳು ಅದಾಗಲೇ ಸಹೋದರಿಯ ಮನೆಯಲ್ಲಿ ಇದ್ದಿದ್ದರಿಂದ ಸುರೇಶ್ ಕೂಡ ಅಲ್ಲಿಗೆ ಹೋದರು. ರಾತ್ರಿ 11.30ಕ್ಕೆ ಸುರೇಶ್ ಮತ್ತು ಮಕ್ಕಳು ಮನೆಗೆ ಹಿಂದಿರುಗಿದ್ರು. 15 ನಿಮಿಷಗಳ ನಂತರ ಶಾಂತಿ ಕೂಡ ಮನೆಗೆ ಬಂದು ಬೀಗ ತೆಗೆದಿದ್ದರು.
Advertisement
ಮನೆಯೊಳಗೆ ಹೋದ ಕೂಡಲೇ ಸುರೇಶ್ ಹಾಗೂ ಮಕ್ಕಳು ಟಿವಿ ನೋಡುತ್ತಾ ಕುಳಿತರು. ಆದ್ರೆ ಇಡೀ ದಿನ ಹೇಗಿತ್ತು ಎಂದು ಒಂದು ಮಾತನ್ನೂ ಕೇಳದೆ ಟಿವಿ ನೋಡಲು ಕುಳಿತ ಪತಿ ವಿರುದ್ಧ ಶಾಂತಿ ಕೋಪಗೊಂಡಿದ್ದರು. ಹೀಗಾಗಿ ಟಿವಿ ಆಫ್ ಮಾಡಿದ್ದರು. ಇದರಿಂದ ಗಂಡ ಸುರೇಶ್ ಸಿಟ್ಟಿಗೆದ್ದು, ಇಬ್ಬರ ನಡುವೆ ಜಗಳವಾಗಿತ್ತು. ಈ ವೇಳೆ ಶಾಂತಿ ತರಕಾರಿ ಕತ್ತರಿಸಲು ಬಳಸುವ ಚಾಕು ತೆಗೆದುಕೊಂಡು ಮನೆಯಿಂದ ಹೊರಗೆ ಹೋಗುವಂತೆ ಹೇಳಿ ಸುರೇಶ್ ಕೈಗೆ ಇರಿದಿದ್ದರು.
Advertisement
ನಂತರ ಸುರೇಶ್ಗೆ ತೀವ್ರ ರಕ್ತಸ್ರಾವವಾಗಿದ್ದು, ಶಾಂತಿಗೆ ತನ್ನ ತಪ್ಪಿನ ಅರಿವಾಗಿ ಒಂದು ಬಟ್ಟೆ ತೆಗೆದುಕೊಂಡು ಪತಿಯ ಕೈಗೆ ಸುತ್ತಿ ಚಿಕಿತ್ಸೆಗಾಗಿ ಕೇರ್ವೆಲ್ ಆಸ್ಪತ್ರೆಗೆ ಕೊಂಡೊಯ್ದರು. ಚಾಕು ಇರಿತದಿಂದ ಗಾಯವಾಗಿದ್ದರಿಂದ ಆಸ್ಪತ್ರೆಗೆ ಪೊಲೀಸರನ್ನ ಕರೆಸಲಾಗಿತ್ತು. ನಂತರ ಪೊಲೀಸರು ಸುರೇಶ್ ಹೇಳಿಕೆ ಪಡೆದಿದ್ದಾರೆ.
Advertisement
ಸುರೇಶ್ ನೀಡಿದ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 324, 323 ಹಾಗೂ 504ರ ಅಡಿ ಶಾಂತಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.