ಕುರ್ನೂಲು: ಮಹಿಳೆಯೊಬ್ಬಳು ಇನ್ಶುರೆನ್ಸ್ ಹಣಕ್ಕೆ ಆಸೆ ಬಿದ್ದು ಗಂಡನನ್ನೇ ಕೊಲೆ ಮಾಡಿರುವ ಘಟನೆ ಜನವರಿ 25ರಂದು ನಡೆದಿದ್ದು, ಗುರುವಾರ ಬೆಳಕಿಗೆ ಬಂದಿದೆ.
ಆಂಧ್ರಪ್ರದೇಶದ ಕುರ್ನೂಲಿನಲ್ಲಿ ಈ ಘಟನೆ ನಡೆದಿದೆ. ಮೃತ ದರ್ದೈವಿಯನ್ನು ಶ್ರೀನಿವಾಸಲು ಎಂದು ಗುರುತಿಸಲಾಗಿದೆ. ಇವರ ಪತ್ನಿ ರಮಾದೇವಿ 2 ಕೋಟಿ ರೂ. ವಿಮೆ ಹಣ ಸಿಗುತ್ತದೆಂಬ ಆಸೆಯಿಂದ ಗಂಡನನ್ನು ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಸಂಚು ರೂಪಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
Advertisement
ಶ್ರೀನಿವಾಸಲು ಪ್ರಕಾಶಂ ಜಿಲ್ಲೆಯ ಚೋಳವೀಡು ಗ್ರಾಮದವರಾಗಿದ್ದು ಅದೇ ಗ್ರಾಮದ ರಮಾದೇವಿಯನ್ನು ಮದುವೆಯಾಗಿದ್ದರು. ರಮಾದೇವಿಯ ಸಹೋದರ್ ರಮೇಶ್ ಜೊತೆ ಸೇರಿ ಹೈದರಾಬಾದ್‍ನಲ್ಲಿ ಆಯಿಲ್ ಬ್ಯುಸಿನೆಸ್ ಮಾಡುತ್ತಿದ್ದರು. ರಮಾದೇವಿ ಗ್ರಾಮದ ಮುಖ್ಯಸ್ಥ ಮಧುಸೂಧನ್ ರೆಡ್ಡಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.
Advertisement
ರಮಾದೇವಿಗೆ ತನ್ನ ಗಂಡನೊಂದಿಗೆ ಜೀವನ ಮುಂದುವರಿಸಲು ಇಷ್ಟವಿರಲಿಲ್ಲ. ಹಾಗೇ ರಮೇಶ್ ಹಾಗೂ ಪತ್ನಿ ಶಿವಪ್ರಣಿತಾ ಕೂಡ ಹಣಕ್ಕಾಗಿ ಅತಿಯಾಸೆ ಪಡುತ್ತಿದ್ದರು. ಹೀಗಾಗಿ ಈ ಮೂವರು ಮಧುಸೂಧನ್ ರೆಡ್ಡಿ ಜೊತೆ ಸೇರಿ ಶ್ರೀನಿವಾಸಲು ಅವರನ್ನ ಕೊಲೆ ಮಾಡಲು ಸಂಚು ರೂಪಿಸಿದ್ದರು.
Advertisement
Advertisement
ಮೊದಲಿಗೆ ಶ್ರಿನಿವಾಸಲು ಅವರಿಗೆ ವಿವಿಧ ಇನ್ಶುರೆನ್ಸ್ ಪಾಲಿಸಿಗಳನ್ನ ಮಾಡಿಸುವಂತೆ ಮಾಡಿದ್ದರು. ಈ ಪಾಲಿಸಿಗಳ ಮೇಲೆ ಶ್ರೀನಿವಾಸಲು ಹಲವಾರು ಬಾರಿ ಸಾಲ ಕೂಡ ಪಡೆದಿದ್ದರು. ಆರೋಪಿಗಳು ಈ ಎಲ್ಲಾ ಪಾಲಿಸಿಗಳನ್ನ ಇಟ್ಟುಕೊಂಡು ಶ್ರೀನಿವಾಸಲು ಅವರನ್ನ ಕೊಲೆ ಮಾಡಿ ಅಪಘಾತವೆಂಬಂತೆ ಬಿಂಬಿಸಲು ಪ್ಲಾನ್ ಮಾಡಿಕೊಂಡಿದ್ದರು. ತಮ್ಮ ಈ ಸಂಚಿನ ಭಾಗವಾಗಿ ಶ್ರೀನಿವಾಸಲು ಅವರನ್ನ ತೀರ್ಥಯಾತ್ರೆಗೆ ಕರೆದುಕೊಂಡು ಹೋಗಿದ್ದರು. ಇವರೊಂದಿಗೆ ಆಯಿಲ್ ಬ್ಯುಸಿನೆಸ್‍ನಲ್ಲಿ ಕೆಲಸ ಮಾಡುತ್ತಿದ್ದ ರಮಣ ಹಾಗೂ ಮೋಯಿನ್ ಬಾಷಾ ಎಂಬವರು ಕೂಡ ಜೊತೆಯಲ್ಲಿ ಹೋಗಿದ್ದರು.
ಜನವರಿ 25ರಂದು ಏನೋ ಮಾತನಾಡಬೇಕು ಎಂದು ಹೇಳಿ ಹೆದ್ದಾರಿಯಲ್ಲಿ ಓರ್ವಾಕಲ್ಲು ಬಳಿ ತಾವು ಪ್ರಯಾಣಿಸುತ್ತಿದ್ದ ವಾಹನವನ್ನ ನಿಲ್ಲಿಸಿದ್ದರು. ಎಲ್ಲರೂ ಕೆಳಗಿಳಿದು ಮಾತನಾಡುತ್ತಿದ್ದ ವೇಳೆ ಲಾರಿ ಬರುವುದನ್ನು ಗಮನಿಸಿ ಶ್ರೀನಿವಾಸಲು ಅವರನ್ನ ಅದರ ಕೆಳಗೆ ತಳ್ಳಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡ ಶ್ರೀನಿವಾಸಲು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಬಳಿಕ ಇದು ಹಿಟ್ ಅಂಡ್ ರನ್ ಪ್ರಕರಣ ಎಂದು ಎಲ್ಲರೂ ಹೇಳಿದ್ದರು.
ಆದ್ರೆ ಶ್ರೀನಿವಾಸಲು ಅವರ ಸಂಬಂಧಿಕರಿಗೆ ಈ ಬಗ್ಗೆ ಅನುಮಾನ ಮೂಡಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ರಮಣ ಹಾಗೂ ಮೋಯಿನ್ ಬಾಷಾನನ್ನು ವಿಚಾರಣೆ ಮಡಿದಾಗ ಸತ್ಯ ಬಾಯ್ಬಿಟ್ಟಿದ್ದಾರೆ. ಪೊಲೀಸರು ಈ ಇಬ್ಬರನ್ನೂ ವಶಕ್ಕೆ ಪಡೆದಿದ್ದು, ಉಳಿದ ಆರೋಪಿಗಳಾದ ರಮಾದೇವಿ, ರಮೇಶ್, ಶಿವಪ್ರಣಿತಾ ಹಾಗೂ ಮಧುಸೂಧನ್ ರೆಡ್ಡಿ ತಲೆಮರೆಸಿಕೊಂಡಿದ್ದಾರೆ.
ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದು, ತನಿಖೆ ಮುಂದುವರೆಸಿದ್ದಾರೆ.