ಚಿತ್ರದುರ್ಗ: ಶೀಲ ಶಂಕಿಸಿದ ಹಿನ್ನೆಲೆಯಲ್ಲಿ ಪತಿಯನ್ನೇ ಬರ್ಬರವಾಗಿ ಹತ್ಯೆಗೈದು, ಸಾಕ್ಷಿ ನಾಶಮಾಡಲು ಹೋಗಿ ಗ್ರಾಮಸ್ಥರ ಕೈಗೆ ಪತ್ನಿ ಸಿಕ್ಕಿಬಿದ್ದ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಸಲಬಮ್ಮನಹಳ್ಳಿಯಲ್ಲಿ ನಡೆದಿದೆ.
ಕೂಲಿ ಕೆಲಸ ಮಾಡುತಿದ್ದ ದಾಸಪ್ಪ(35) ಕೊಲೆಯಾದ ಪತಿ. ನೇತ್ರಾವತಿ ಕೊಲೆ ಮಾಡಿರುವ ಆರೋಪಿ. ಪ್ರತಿದಿನ ದಾಸಪ್ಪ ಕುಡಿದು ಮನೆಗೆ ಬಂದು ಪತ್ನಿಯ ಶೀಲವನ್ನು ಶಂಕಿಸಿ ಆಕೆಗೆ ಕಿರುಕುಳ ನೀಡುತ್ತಿದ್ದನು. ಇದರಿಂದ ಪತ್ನಿ ಬೇಸತ್ತು ಹೋಗಿದ್ದಳು. ಹೀಗಾಗಿ ಮೊದಲೇ ಮನನೊಂದ ಪತ್ನಿ ಸೋಮವಾರ ರಾತ್ರಿ ಪತಿ ಮನೆಗೆ ಬಂದು ಹಿಂಸೆ ಕೊಡುವ ವೇಳೆ ತಾಳಲಾರದೇ ಮನೆಯಲ್ಲಿದ್ದ ಕಬ್ಬಿಣದ ರಾಡ್‍ನಿಂದ ಪತಿಯ ತಲೆಗೆ ಹೊಡೆದು ಕೊಲೆ ಮಾಡಿದ್ದಾಳೆ. ನಂತರ ತನ್ನ ಗಂಡನ ಶವವನ್ನು ಯಾರಿಗೂ ಗೊತ್ತಾಗದಂತೆ ಹೂತು ಹಾಕಲು ಪತ್ನಿ ಯತ್ನಿಸಿದ್ದಾಳೆ.
ಶವವನ್ನು ಮಣ್ಣಿನಲ್ಲಿ ಹೂಳುತ್ತಿದ್ದ ಸಂದರ್ಭದಲ್ಲಿ ಅದನ್ನ ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಈ ಸಂಬಂಧ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv