– ದಿನದ 24 ಗಂಟೆಯೂ ಗಂಡನ ಕಾವಲು
– ಮಂಗಳೂರು ವೃದ್ಧನ ಪತ್ನಿಯ ನೋವು ಕೇಳಿದ್ರೆ ಮನಕಲುಕುತ್ತೆ
ಮಂಗಳೂರು: ಸಾಮಾನ್ಯವಾಗಿ ಪತ್ನಿ, ಪತಿಯ ಯಶಸ್ಸು, ನೋವು, ಬೇಸರ ಮತ್ತು ಕಣ್ಣೀರಿನಲ್ಲಿಯೂ ಜೊತೆಯಲ್ಲಿಯೇ ಇರುತ್ತಾರೆ. ಪತಿಗೆ ಹುಷಾರಿಲ್ಲ ಎಂದರೆ ಒಂದು ಮಗುವನ್ನು ನೋಡಿಕೊಳ್ಳುವ ರೀತಿಯಲ್ಲಿ ಗಂಡನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇದೇ ರೀತಿ ಮಂಗಳೂರಿನಲ್ಲಿ ಪತ್ನಿಯೊಬ್ಬರು ತಮ್ಮ ಪತಿಯನ್ನು ದಿನದ 24 ಗಂಟೆಗಳ ಕಾಲ ಕಾಯುತ್ತಾ ಅವರನ್ನು ಕಣ್ಣಿನ ರೆಪ್ಪೆ ತರ ನೋಡಿಕೊಳ್ಳುತ್ತಿದ್ದಾರೆ. ಆ ಪತ್ನಿಯ ಕಷ್ಟ, ನೋವು ನೋಡಿದರೆ ಪ್ರತಿಯೊಬ್ಬರ ಮನಕಲುಕುತ್ತದೆ.
ಕಳೆದ ದಿನ ಮಂಗಳೂರಿನಲ್ಲಿ ಪೊಲೀಸರು ವೃದ್ಧರೊಬ್ಬರ ಬಳಿ ಪಾಸ್ ತೋರಿಸುವಂತೆ ಕೇಳಿದ್ದರು. ಆದರೆ ಆ ವೃದ್ಧ ಪೊಲೀಸರಿಗೆ ಅವಾಚ್ಯ ಪದಗಳಿಂದ ಬೈದಿದ್ದರು. ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಅಲ್ಲದೇ ಅನೇಕರು ವೃದ್ಧರನ್ನು ಟೀಕಿಸುತ್ತಿದ್ದರು. ಆದರೆ ನಾವು ಒಂದು ಘಟನೆಯನ್ನು ಒಂದೇ ದೃಷ್ಟಿಕೋನದಿಂದ ನೋಡದೇ ಬೇರೆ ರೀತಿಯಲ್ಲಿ ಯೋಚನೆ ಮಾಡಿದಾಗ ಮಾತ್ರ ನಮಗೆ ನಿಜವಾದ ಪರಿಸ್ಥಿತಿ ಅರ್ಥವಾಗುತ್ತದೆ.
Advertisement
Advertisement
ಮಂಗಳೂರಿನಲ್ಲಿ ನಡೆದ ಪೊಲೀಸ್ ಮತ್ತು ವೃದ್ಧರ ಮಾತಿನ ಚಕಮಕಿಯ ಸಂಪೂರ್ಣ ವಿವರವನ್ನು ಮಂಗಳೂರು ನಿವಾಸಿ ಗೋಪಿ ಭಟ್ ವಿವರಿಸಿದ್ದಾರೆ. ಈ ಬಗ್ಗೆ ಫೇಸ್‍ಬುಕ್‍ಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ವೃದ್ಧರ ಬಗ್ಗೆ ತಿಳಿಸಿದ್ದಾರೆ.
Advertisement
ವಿಡಿಯೋದಲ್ಲಿ ಹೇಳಿದ್ದೇನು?
ಮಂಗಳೂರಿನಲ್ಲಿ ಹಿರಿಯ ವ್ಯಕ್ತಿಯ ಬಳಿ ಪೊಲೀಸ್ ಪಾಸ್ ಕೇಳಿದ್ದರು. ನಂತರ ಏನೆಲ್ಲಾ ಆಯಿತು ಎಂಬುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ವ್ಯಕ್ತಿಯ ಕುಟುಂಬದರು, ಸಂಬಂಧಿಕರು, ನೆರೆಹೊರೆಯವರಿಗೆ ಆ ವ್ಯಕ್ತಿಯ ಪರಿಸ್ಥಿತಿಯ ಬಗ್ಗೆ ಗೊತ್ತಿದೆ. ಆದರೆ ಪೊಲೀಸರ ಜೊತೆ ಆ ವ್ಯಕ್ತಿ ನಡೆದುಕೊಂಡು ರೀತಿ ಎಲ್ಲರಿಗೂ ಆಕ್ರೋಶ ತರಿಸುತ್ತದೆ. ಆದರೆ ನಾವು ಆ ವ್ಯಕ್ತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದರು.
Advertisement
ಆ ವ್ಯಕ್ತಿಗೆ 79 ವರ್ಷ. ಅವರಿಗೆ ಡಿಮೆನ್ಷಿಯಾ ಕಾಯಿಲೆ ಇದೆ. ಅಂದರೆ ಈ ಕಾಯಿಲೆ ಇರುವವರು ಆ ಸಂದರ್ಭದಲ್ಲಿ ಏನು ಮಾಡುತ್ತಿದ್ದೇನೆ ಎಂಬುದೇ ಗೊತ್ತಿರಲ್ಲ. ಒಂದು ಕಡೆಯಿಂದ ಎಲ್ಲರೂ ಆ ವ್ಯಕ್ತಿಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಆದರೆ ಅವರಿಗೆ 79 ವರ್ಷವಾದರೂ ಕೂಡ ಅವರ ಪತ್ನಿ ದಿನದ 24 ಗಂಟೆಯೂ ಅವರ ಮೇಲೆ ಗಮನ ಹಿಡುತ್ತಿದ್ದಾರೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಇಬ್ಬರು ಮದುವೆಯಾಗಿ ಹೊರದೇಶದಲ್ಲಿದ್ದಾರೆ. ಇಲ್ಲಿ ಹೆಂಡತಿ ಮತ್ತು ಗಂಡ ಇಬ್ಬರೇ ಇರುವುದು. ಹೆಂಡತಿಗೂ ಕೂಡ 60ರ ಮೇಲೆ ವಯಸ್ಸಾಗಿದೆ ಎಂದು ತಿಳಿಸಿದರು.
ಪತಿಗೆ ಇಂತಹ ಕಾಯಿಲೆ ಬಂದರೆ ಹಿರಿಯ ಹೆಂಗಸು ಹೇಗೆ ನೋಡಿಕೊಳ್ಳುವುದು, ಎಷ್ಟು ಕಷ್ಟವಾಗುತ್ತದೆ ಎಂಬುವುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಒಂದು ಮಗು ಯಾವಾಗ ಸಿಟ್ಟು ಮಾಡಿಕೊಳ್ಳುತ್ತದೋ, ಯಾವಾಗ ಹೇಳಿದ ಮಾತು ಕೇಳುವುದಿಲ್ಲವೂ, ಅದೇ ರೀತಿ ಈ ಹಿರಿಯ ವ್ಯಕ್ತಿ ಇದ್ದಾರೆ. ಒಂದು ಮಗುವಿನ ರೀತಿ ಗಂಡನನ್ನು ನೋಡಿಕೊಳ್ಳುತ್ತಿದ್ದಾರೆ. ಆ ವ್ಯಕ್ತಿಗೆ ಹಿಂದಿನ ಚಟುವಟಿಕೆಗಳು ಮಾತ್ರ ನೆನಪಿದೆ. ಅಂದರೆ ಡ್ರೆಸ್ ಮಾಡಿಕೊಳ್ಳುವುದು, ಹೊರಗೆ ಹೋಗುವುದು. ಆದರೆ ಅವರಿಗೆ ವಾಸ್ತವವಾಗಿ ಏನು ಆಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಆ ಕಾಯಿಲೆ ಹೆಸರನ್ನು ಡಿಮೆನ್ಷಿಯಾ ಎಂದು ವೈದ್ಯರು ಹೇಳುತ್ತಾರೆ.
ಇಡೀ ರಾತ್ರಿ ಅವರ ಪತಿ ಹೊರಗೆ ಹೋಗದಂತೆ ನೋಡಿಕೊಳ್ಳುತ್ತಾರೆ. ಆದರೆ ಶುಕ್ರವಾರ ಮಧ್ಯಾಹ್ನ ಅಕಸ್ಮಾತ್ ಆಗಿ ಮನೆಯವರಿಗೆ ಗೊತ್ತಿಲ್ಲದಂತೆ ಕಾರಿನಲ್ಲಿ ಹೊರಗೆ ಹೋಗಿದ್ದಾರೆ. ಪತಿ ಮನೆಯಲ್ಲಿ ಇಲ್ಲದಿರುವುದನ್ನು ತಿಳಿದು ತಕ್ಷಣ ವೈದ್ಯರಿಗೆ, ಸಂಬಂಧಿಕರಿಗೆ ಮತ್ತು ಪೊಲೀಸರಿಗೆ ಫೋನ್ ಮಾಡಿ ಕೇಳುತ್ತಾರೆ. ಆದರೆ ಮಂಗಳೂರಿನ ಲಾಲ್‍ಬಾಗ್‍ನಲ್ಲಿ ಪೊಲೀಸರು ತಮ್ಮ ಕರ್ತವ್ಯ ಮಾಡಿದ್ದಾರೆ. ಆದರೆ ಆ ವ್ಯಕ್ತಿಗೆ ಪ್ರಸ್ತುತ ಏನು ಆಗುತ್ತಿದೆ ಗೊತ್ತಿಲ್ಲ. ಪಾಸ್ ಕೇಳುವಾಗ ಯಾವ ಪಾಸ್ ಎಂದು ಕೇಳಿದ್ದಾರೆ. ಅವರಿಗೆ ಕಿವಿ ಕೂಡ ಕೇಳುವುದಿಲ್ಲ. ಇದರಿಂದ ಆ ವ್ಯಕ್ತಿಗೆ ಕೋಪ ಬಂದು ಪೊಲೀಸರಿಗೆ ಅವಾಚ್ಯ ಪದದಿಂದ ಬೈದಿದ್ದಾರೆ, ಅದು ಖಂಡನಿಯಾ. ಆದರೆ ಅವರು ಪ್ರಜ್ಞಾ ಸ್ಥಿತಿಯಲ್ಲಿದ್ದು ಬೈದಿದ್ದಾರಾ ಎಂಬುದು ಮುಖ್ಯವಾಗುತ್ತದೆ.
ಕೆಲವೇ ಕ್ಷಣಗಳಲ್ಲಿ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತದೆ. ಆದರೆ ನಮಗೆ ಅವರ ಪರಿಸ್ಥಿತಿ ಬಗ್ಗೆ ಗೊತ್ತಿದೆ. ಹೀಗಾಗಿ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ. ಅವರ ಪತ್ನಿ ಇಂದಿಗೂ ಕಣ್ಣೀರು ಹಾಕುತ್ತಿದ್ದಾರೆ. ಆದರೂ ಪೊಲೀಸರು ಅವರ ಕರ್ತವ್ಯ ಮಾಡಿದ್ದಾರೆ ಎಂದು ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.
ಅವರು ಒಬ್ಬರೇ ಪೊಲೀಸ್ ಠಾಣೆಗೆ ಹೋಗಿ ಜಾಮೀನಿನ ಮೂಲಕ ಬಿಡಿಸಿಕೊಂಡು ಬಂದಿದ್ದಾರೆ. ಹೀಗಾಗಿ ನಾವು ಮಾನವೀಯತೆ ದೃಷ್ಟಿಯಿಂದ ನೋಡಬೇಕು. ಆದ್ದರಿಂದ ನಾವು ಒಂದೇ ದೃಷ್ಟಿಕೋನದಿಂದ ನೋಡುವುದು ಬೇಡ, ಆ ವ್ಯಕ್ತಿಯ ಪರಿಸ್ಥಿತಿ, ಪತ್ನಿಯ ಕಷ್ಟವನ್ನು ನೋಡಬೇಕು. ಈ ರೀತಿಯ ವಿಡಿಯೋ ಶೇರ್ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.