-ಉಸಿರುಗಟ್ಟಿಸಿ ಪತಿಯ ಕೊಲೆ ಯತ್ನ
ಹೈದರಾಬಾದ್: ಮಹಿಳೆಯೊಬ್ಬಳು ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದು ಪತಿಯನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ತೆಲಂಗಾಣದ ಕರೀಂನಗರದಲ್ಲಿ ನಡೆದಿದೆ.
ಕಾವೇರಿ ತನ್ನ ಪತಿ ಕೃಷ್ಣವಂಶಿಯನ್ನೇ ಕೊಲೆ ಮಾಡಲು ಪ್ರಯತ್ನಿಸಿದ್ದಳು. ಕೃಷ್ಣವಂಶಿ ಮತ್ತು ಕಾವೇರಿ ದಂಪತಿಯಾಗಿದ್ದು, ಇವರು ಕರೀಂನಗರದ ಸಪ್ತಗಿರಿ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಆದರೆ ಕಾವೇರಿ ಇಬ್ಬರು ಯುವಕರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು.
ಪತಿ ಕೃಷ್ಣವಂಶಿ ಕೆಲಸಕ್ಕೆಂದು ಮನೆಯಿಂದ ಹೋಗುತ್ತಿದ್ದನು. ಈ ವೇಳೆ ಕಾವೇರಿ ಮನೆಯಲ್ಲಿ ಒಬ್ಬಳೆ ಇರುತ್ತಿದ್ದಳು. ಆಗ ಅದೇ ಕಾಲೋನಿಯ ಸಮನ್ವಿತ್ ಮತ್ತು ಗಣೇಶ್ ಯುವಕರಿಬ್ಬರನ್ನು ಪರಿಚಯ ಮಾಡಿಕೊಂಡಿದ್ದಳು. ಪರಿಚಯ ಸ್ನೇಹವಾಗಿ ಇಬ್ಬರ ಜೊತೆಯೂ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು.
ಪತಿ ಆಫೀಸ್‍ಗೆ ಮನೆಯಿಂದ ಹೋದ ತಕ್ಷಣ ಕಾವೇರಿ ಇಬ್ಬರು ಪ್ರೇಮಿಗಳನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು. ಕೆಲವು ದಿನಗಳ ನಂತರ ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ಪತಿಗೆ ಗೊತ್ತಾಗಿದೆ. ಆಗ ಕೃಷ್ಣವಂಶಿ ಪತ್ನಿಗೆ ಬೈದು, ಮತ್ತೆ ಈ ರೀತಿ ಮಾಡಬಾರದು ಎಂದು ಎಚ್ಚರಿಸಿದ್ದಾನೆ. ಇದರಿಂದ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದು ಪತಿಯನ್ನು ಕೊಲೆ ಮಾಡಲು ಕಾವೇರಿ ನಿರ್ಧರಿಸಿದ್ದಳು.
ಅದರಂತೆಯೇ ಪತಿ ಮಲಗಿದ್ದಾಗ ಉಸಿರುಗಟ್ಟಿಸಿ ಕೊಲೆ ಮಾಡಲು ಕಾವೇರಿ ಪ್ರಯತ್ನ ಮಾಡಿದ್ದಾಳೆ. ತಕ್ಷಣ ಈ ಬಗ್ಗೆ ತಿಳಿದು ಪತಿ ಅಲ್ಲಿಂದ ಪರಾರಿಯಾಗಿ ಕರೀಂನಗರದ ಟೌನ್ ಪೊಲೀಸ್ ಠಾಣೆಗೆ ಹೋಗಿ ದೂರ ದಾಖಲಿಸಿದ್ದಾನೆ. ಕೃಷ್ಣವಂಶಿ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಪತ್ನಿ ಮತ್ತು ಆಕೆಯ ಪ್ರೇಮಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಇತ್ತ ಇಬ್ಬರು ಪ್ರೇಮಿಗಳಲ್ಲಿ ಒಬ್ಬ, ಕೃಷ್ಣವಂಶಿ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ದೂರು ನೀಡಿದ್ದಾನೆ. ಪೊಲೀಸರು ಕೃಷ್ಣವಂಶಿಯ ಮೇಲೂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವಕ ಈ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸುಳ್ಳು ದೂರು ನೀಡಿದ್ದಾನೆಂಬ ಅನುಮಾನ ವ್ಯಕ್ತವಾಗಿದೆ. ಸದ್ಯಕ್ಕೆ ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.