Connect with us

5 ವರ್ಷ ಪ್ರೀತಿಸಿ, 17 ವರ್ಷ ಸಂಸಾರ ಮಾಡ್ದ ಪತ್ನಿಯಿಂದ ಪತಿ ಹತ್ಯೆಗೆ ಸುಪಾರಿ!

5 ವರ್ಷ ಪ್ರೀತಿಸಿ, 17 ವರ್ಷ ಸಂಸಾರ ಮಾಡ್ದ ಪತ್ನಿಯಿಂದ ಪತಿ ಹತ್ಯೆಗೆ ಸುಪಾರಿ!

ಬೆಂಗಳೂರು: ಐದು ವರ್ಷ ಪ್ರೀತಿಸಿ ನಂತರ 17 ವರ್ಷ ಸಂಸಾರ ಮಾಡಿದ ಪತ್ನಿ ತನ್ನ ಪ್ರಿಯಕರನ ಜೊತೆಗೂಡಿ ಪತಿಯ ಕೊಲೆಗೆ ಸ್ಕೆಚ್ ಹಾಕಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಕುದುರೆಗೆರೆ ಕಾಲೋನಿಯಲ್ಲಿ ನಡೆದಿದೆ.

ಪಾಂಡುರಂಗ ಮತ್ತು ಮಂಜುಳ 17 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪಾಂಡುರಂಗ ಚಿಕ್ಕದೊಂದು ಗಾರ್ಮೆಂಟ್ಸ್ ಕಾರ್ಖಾನೆಯನ್ನು ನಡೆಸಿ ಜೀವನ ಸಾಗಿಸುತ್ತಿದ್ದರು.

ಕೆಲವು ದಿನಗಳ ಹಿಂದೆ ಗಾರ್ಮೆಂಟ್ಸ್ ಗೆ ಶ್ರೀನಿವಾಸ್ ಎಂಬಾತ ಹೊಸದಾಗಿ ಕೆಲಸಕ್ಕೆ ಸೇರಿದ್ದ. ಕೆಲಸಕ್ಕೆ ಸೇರಿದ ನಂತರ ಆತನ ಜೊತೆ ಮಂಜುಳ ಸ್ನೇಹ ಬೆಳೆಸಿದ್ದಾಳೆ. ಇವರ ಸ್ನೇಹ ಪ್ರೀತಿಗೆ ತಿರುಗಿ ಪತಿಯನ್ನೇ ಕೊಲೆ ಮಾಡುವ ಹಂತಕ್ಕೆ ತಲುಪಿದೆ.

ಪತಿಗೆ ಕೆಲವು ದಿನಗಳಿಂದ ಇವರ ಮೇಲೆ ಅನುಮಾನವಿತ್ತು. ಒಂದು ದಿನ ಪತ್ನಿ ತನ್ನ ಫೋನ್ ಬಿಟ್ಟು ಹೊರಗೆ ಹೋಗಿದ್ದ ಸಂದರ್ಭದಲ್ಲಿ ಆಕೆಯ ಫೋನಿನ ವಾಯ್ಸ್ ಕಾಲ್ ರೆಕಾರ್ಡ್ ಪರಿಶೀಲಿಸಿದಾಗ ಕೊಲೆಗೆ ಪ್ಲಾನ್ ಮಾಡಿದ್ದ ವಿಚಾರ ಪಾಂಡುರಂಗಗೆ ಗೊತ್ತಾಗಿದೆ. ಪತಿಗೆ ಈ ವಿಚಾರ ತಿಳಿಯುತ್ತಿದ್ದಂತೆ ಪತ್ನಿ ಶ್ರೀನಿವಾಸ್ ಜೊತೆ ಮಕ್ಕಳನ್ನು ಬಿಟ್ಟು ಪರಾರಿಯಾಗಿದ್ದಾಳೆ.

ಪತ್ನಿ ಓಡಿ ಹೋದ ಬಳಿಕ ಪತಿ ಸಾಕ್ಷಿ ಸಮೇತ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೆಲ ದಿನಗಳ ಹಿಂದೆಯೇ ಇಬ್ಬರ ವಿರುದ್ಧ ದೂರು ನೀಡಿದ್ದಾರೆ. ಆದರೆ ದೂರು ನೀಡಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇವರಿಬ್ಬರು ಸೇರಿ ನನ್ನನ್ನು ಹತ್ಯೆ ಮಾಡುತ್ತಾರೆ. ಆಮೇಲೆ ನನ್ನ ಇಬ್ಬರು ಮಕ್ಕಳು ಅನಾಥರಾಗುತ್ತಾರೆ. ಆದ್ದರಿಂದ ಪೊಲೀಸರು ಕೂಡಲೇ ಸೂಕ್ತ ಕ್ರಮಕೈಗೊಂಡು ನನಗೆ ರಕ್ಷಣೆ ನೀಡಬೇಕೆಂದು ಪಾಂಡುರಂಗ ಒತ್ತಾಯಿಸಿದ್ದಾರೆ.

 

Advertisement
Advertisement