ಹೈದರಾಬಾದ್: ನವ ವಿವಾಹಿತೆಯೊಬ್ಬಳು ಮದುವೆಯಾದ 10 ದಿನದಲ್ಲಿಯೇ ಸುಪಾರಿ ಕೊಟ್ಟು ಪತಿಯನ್ನೇ ಕೊಲೆ ಮಾಡಿಸಿರುವ ಘಟನೆ ಆಂಧ್ರ ಪ್ರದೇಶದ ವಿಜಯನಗರಂ ನಲ್ಲಿ ನಡೆದಿದೆ.
ಗೌರಿಶಂಕರ ರಾವ್ ಕೊಲೆಯಾದ ದುರ್ದೈವಿ. ಆರೋಪಿ ಪತ್ನಿ ಮತ್ತು ಆಕೆಯ ಪ್ರಿಯಕರ ಶಿವ ಇಬ್ಬರು ಸೇರಿ ರೌಡಿ ಶೀಟರ್ ಗಳಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ.
ಏನಿದು ಘಟನೆ?: ವಿಜಯನಗರ ಜಿಲ್ಲೆಯ ಚಿಟ್ಲಾಪುಡಿವಾಲಾಸ್ ಗ್ರಾಮದ ಗೌರಿಶಂಕರ ರಾವ್ ಅವರು ಏಪ್ರಿಲ್ 28 ರಂದು ಅದೇ ಜಿಲ್ಲೆಯ ವೀರಗಟ್ಲಾಮ್ ಮಂಡಲ್ ಕಡೆಕೆಲ್ಲಾ ಗ್ರಾಮದ ಸರಸ್ವತಿಯನ್ನು ವಿವಾಹವಾಗಿದ್ದರು. ಹೊಸದಾಗಿ ಮದುವೆಯಾದ ಈ ಜೋಡಿ ಸೋಮವಾರ ರಾತ್ರಿ ಶಾಪಿಂಗ್ ಮುಗಿಸಿ ಆಟೋ ರಿಕ್ಷಾದಲ್ಲಿ ಮನೆಗೆ ಹಿಂದಿರುಗಿದ್ದರು.
ಈ ವೇಳೆ ತೋಟಪಲ್ಲಿಯ ಬಳಿ ಸರಸ್ವತಿ ಶೌಚಾಲಯಕ್ಕೆಂದು ಆಟೋ ಇಳಿದು ಹೋಗಿದ್ದಾಳೆ. ಆಗ ಯಾರೋ ಅಪರಿಚಿತರು ಬಂದು ಕಬ್ಬಿಣದ ರಾಡ್ ನಲ್ಲಿ ದಾಳಿ ಮಾಡಿದ್ದಾರೆ. ಪರಿಣಾಮ ಗೌರಿಶಂಕರ ರಾವ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸರಸ್ವತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆದರೆ ತನಿಖೆಯ ಆರಂಭದಲ್ಲಿಯೇ ಗೌರಿಶಂಕರ ರಾವ್ ಮೇಲೆ ನಡೆದ ದಾಳಿ ಪೂರ್ವಯೋಜಿತವಾದ ಆಕ್ರಮಣವಾಗಿದೆ ಎಂದು ತಿಳಿದುಬಂದಿದೆ. ನಂತರ ತನಿಖೆಯನ್ನ ಮುಂದುವರಿಸಿದ್ದು, ಪತ್ನಿಯ ಫೋನ್ ವಿವರಗಳನ್ನು ಪರಿಶೀಲಿಸಿದಾಗ ಈ ದಾಳಿಯ ಹಿಂದೆ ಪತ್ನಿ ಇರುವುದು ತಿಳಿದು ಬಂದಿದೆ. ಬಳಿಕ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ.
ಕೊಲೆ ಮಾಡಿಸಿದ್ದು ಯಾಕೆ?
ಸರಸ್ವತಿ ಫೇಸ್ ಬುಕ್ ಮೂಲಕ ಶಿವನನ್ನು ಪ್ರೀತಿಸುತ್ತಿದ್ದಳು. ಇವರ ಪ್ರೀತಿ ವಿಚಾರ ಮನೆಯವರಿಗೆ ತಿಳಿದಿತ್ತು. ಆದ್ದರಿಂದ ಪೋಷಕರು ಸರಸ್ವತಿಗೆ ಸಂಬಂಧಿಯಾದ ಗೌರಿ ಶಂಕರ್ ಜೊತೆ ವಿವಾಹ ನಿಶ್ಚಯಿಸಿದ್ದಾರೆ. ಆದರೆ ಈ ಮದುವೆ ತನಗೆ ಇಷ್ಟವಿಲ್ಲ ಎಂದು ಹೇಳಿದ್ದಾಳೆ. ಆದರೂ ಬಲವಂತ ಮಾಡಿ ಏಪ್ರಿಲ್ 28 ರಂದು ಮದುವೆ ಮಾಡಿಸಿದ್ದಾರೆ.
ಮದುವೆ ಬಳಿಕ ಆಕೆ ಶಿವ ಜೊತೆ ಸೇರಿ ಪತಿಯನ್ನ ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದಾಳೆ. ನಿಶ್ಚಿತಾರ್ಥ ನೀಡಿದ್ದ ಉಂಗರವನ್ನು ಶಿವನಿಗೆ ನೀಡಿದ್ದಾಳೆ. ನಂತರ ಇವರಿಬ್ಬರು ಕೊಲೆ ನಡೆಸಲು ರೌಡಿ ಶೀಟರ್ ಗಳಾದ ಗೋಪಿ ಮತ್ತು ವೈಜಾಗ್ ಗೆ ಸುಪಾರಿ ಕೊಟ್ಟಿದ್ದಾರೆ.
ಸದ್ಯಕ್ಕೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪತ್ನಿ, ಆಕೆ ಪ್ರಿಯಕರ ಮತ್ತು ರೌಡಿ ಶೀಟರ್ ಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದ ವಿವರಗಳನ್ನು ಪೊಲೀಸರು ಪತ್ರಿಕಾಗೋಷ್ಠಿ ನಡೆಸಿ ವಿಚಾರವನ್ನು ತಿಳಿಸಿದ್ದಾರೆ.