ವ್ಹೀಲ್‍ಚೇರ್ ಕೊಡದ ಆಸ್ಪತ್ರೆ ಸಿಬ್ಬಂದಿ- ಪತಿಯನ್ನು ನೆಲದ ಮೇಲೆಯೇ ಎಳೆದುಕೊಂಡು ಹೋದ ಪತ್ನಿ

Public TV
1 Min Read
smg 1

– ಈ ಸ್ಥಾನದಲ್ಲಿ ಕುಳಿತುಕೊಳ್ಳೊದಕ್ಕೂ ನಾಚಿಕ ಆಗುತ್ತೆ, ದೃಶ್ಯ ನೋಡಿ ಮನಸ್ಸಿಗೆ ನೋವಾಗಿದೆ: ರಮೇಶ್ ಕುಮಾರ್

ಶಿವಮೊಗ್ಗ: ಜಿಲ್ಲೆಯಲ್ಲಿರುವ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಹೇಳೋರೂ ಇಲ್ಲ, ಕೇಳೋರೂ ಇಲ್ಲ ಎಂಬಂತಾಗಿದೆ. ಇಲ್ಲಿ ರೋಗಿಗಳನ್ನು ಪ್ರಾಣಿಗಳಿಗಿಂತಲೂ ಕಡೆಯಾಗಿ ಟ್ರೀಟ್ ಮಾಡಲಾಗುತ್ತಿದೆ ಅನ್ನೋ ಆರೋಪವೊಂದು ಕೇಳಿಬಂದಿದೆ.

ಮೆಗ್ಗಾನ್ ಆಸ್ಪತ್ರೆಯ ಕಾರಿಡಾರ್‍ನಲ್ಲಿ ವಯೋವೃದ್ಧರೊಬ್ಬರನ್ನು ಅವರ ಪತ್ನಿ ನೆಲದ ಮೇಲೆ ಮಲಗಿಸಿ ಪ್ರಾಣಿಯಂತೆ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಗುರುವಾರ ಮಧ್ಯಾಹ್ನ ಕಂಡು ಬಂತು. 75 ವರ್ಷದ ವಯೋವೃದ್ಧರಾದ ಅಮೀರ್ ಸಾಬ್ ಅವರನ್ನು ಪತ್ನಿ ಫಾಮಿದಾ ಹೀಗೆ ಎಳೆದುಕೊಂಡು ಹೋಗಿದ್ದು ಒಂದು ಎಕ್ಸ್‍ರೇ ತೆಗೆಯಲು.

smg hospital

ಎರಡನೇ ಫ್ಲೋರ್‍ನಲ್ಲಿರೋ ಈ ವೃದ್ಧರನ್ನು ಕೆಳಗೆ ಕರೆದುಕೊಂಡು ಹೋಗಲು ಗಾಲಿ ಕುರ್ಚಿ ಕೇಳಿದರೂ ಆಸ್ಪತ್ರೆ ಸಿಬ್ಬಂದಿ ಕೊಟ್ಟಿಲ್ಲ. ಇವತ್ತೂ ಎಕ್ಸರೇ ತೆಗೆಸದಿದ್ದರೆ ತೊಂದರೆ ಆದೀತು ಎಂದು ಫಾಮಿದಾ ಗಂಡನನ್ನು ಹೀಗೆ ಎಳೆದುಕೊಂಡು ಎಕ್ಸರೇ ತೆಗೆಸಲು ಹೋದ್ರು.

https://www.youtube.com/watch?v=FIfROhD1LVc

ಆಸ್ಪತ್ರೆಗೆ ಬಂದಿದ್ದ ಇತರೆ ರೋಗಿಗಳು ಹಾಗೂ ಸಾರ್ವಜನಿಕರು ವಯೋವೃದ್ಧರನ್ನು ಹೀಗೆ ಪ್ರಾಣಿಯಂತೆ ಎಳೆದುಕೊಂಡು ಹೋಗುತ್ತಿದ್ದನ್ನು ನೋಡಿ ಒಂದು ಕ್ಷಣ ದಂಗಾದ್ರು.

smg

ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಸಿಬ್ಬಂದಿ ಸಾಕಷ್ಟು ಜನ ಇದ್ದಾರೆ. ವೈದ್ಯಕೀಯ ವಿಭಾಗದ ಸಿಬ್ಬಂದಿಗೂ ಕೊರತೆ ಇಲ್ಲ. ಆದರೆ ಮಾನವೀಯತೆ ಇಟ್ಟುಕೊಂಡು ರೋಗಿಗಳಿಗೆ ಸ್ಪಂದಿಸುವ ಗುಣಕ್ಕೆ ಕೊರತೆ ಇದೆ ಅನ್ನೋದಕ್ಕೆ ಈ ಘಟನೆ ಸಾಕ್ಷಿ.

ramesh kumar

ಈ ಬಗ್ಗೆ ಆರೋಗ್ಯ ಸಚಿವ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದು ರಾಜ್ಯದ ಜನತೆಯ ಕ್ಷಮೆ ಕೇಳಿದ್ದಾರೆ. ನಮಗೆ ಈ ಸ್ಥಾನದಲ್ಲಿ ಕುಳಿತುಕೊಳ್ಳೊದಕ್ಕೂ ನಾಚಿಕ ಆಗುತ್ತೆ. ಅಂತ ಪರಿಸ್ಥಿತಿ ತಂದಿಟ್ಟಿದ್ದಾರೆ. ನಾನು ಈಗಾಗಲೇ ಶಿವಮೊಗ್ಗ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಆಸ್ಪತ್ರೆಗೆ ಭೇಟಿ ಮಾಡಲು ತಿಳಿಸಿದ್ದೇನೆ. ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ಮಾತನಾಡಿ ಕೂಡಲೇ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇನೆ ಅಂದ್ರು.

ಇದು ನನ್ನ ಇಲಾಖೆಗೆ ಬರದೇ ಹೋದ್ರು ಕೂಡ ಈ ದೃಶ್ಯ ನೋಡಿ ನನ್ನ ಮನಸ್ಸಿಗೆ ನೋವಾಗಿದೆ. ಶರಣ ಪ್ರಕಶ್ ಪಾಟೀಲ್ ಜೊತೆ ಮಾತನಾಡಿದ್ದೇನೆ. ಅವರು ಕೂಡಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಅಂತ ಹೇಳಿದ್ರು.

Share This Article
Leave a Comment

Leave a Reply

Your email address will not be published. Required fields are marked *