ಲಕ್ನೋ: ಸಮಯಕ್ಕೆ ಸರಿಯಾಗಿ ಬೆಳಗಿನ ತಿಂಡಿ ಮಾಡಿಕೊಟ್ಟಿಲ್ಲವೆಂದು ಸಿಟ್ಟಿಗೆದ್ದ ಪತಿಮಹಾಶಯನೊಬ್ಬ ಪತ್ನಿ ಧರಿಸಿದ್ದ ಸ್ಕಾರ್ಫ್ ನಿಂದಲೇ ಆಕೆಯ ಕುತ್ತಿಗೆ ಬಿಗಿದು ಕೊಲೆಗೈದ ಘಟನೆ ಗ್ರೇಟರ್ ನೊಯ್ಡಾದಲ್ಲಿ ನಡೆದಿದೆ.
ಪತಿ 32 ವರ್ಷದ ಮುಕೇಶ್ ಕುಮಾರ್, ತನ್ನ ಪತ್ನಿ 28 ವರ್ಷದ ರೇಖಾರನ್ನು ಕೊಲೆಗೈದಿದ್ದಾನೆ. ಈ ದಂಪತಿ 7 ವರ್ಷದ ಮಗ ಹಾಗೂ 5 ವರ್ಷದ ಮಗಳೊಂದಿಗೆ ಕುಲೇಸ್ರಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಘಟನೆ ನಡೆದ ಕೂಡಲೇ ನೆರೆಮನೆಯವರು ಮಹಿಳೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದ್ರೆ ಆಕೆ ಅದಾಗಲೇ ಮೃತಪಟ್ಟಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ.
Advertisement
ಘಟನೆ ವಿವರ:
ಮುಕೇಶ್ ಕುಮಾರ್ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಈತನ ಪತ್ನಿ ಮನೆಯಲ್ಲೇ ಇದ್ದು, ಮುಕೇಶ್ ಪ್ರತೀ ದಿನ ಆಕೆಯೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡುತ್ತಿದ್ದನು. ಆದ್ರೆ ಶನಿವಾರ ಇವರಿಬ್ಬರ ಮಧ್ಯೆ ಉಪಹಾರದ ವಿಚಾರವಾಗಿ ಗಲಾಟೆ ನಡೆದಿದೆ. ಸಮಯಕ್ಕೆ ಸರಿಯಾಗಿ ಬೆಳಗ್ಗಿನ ತಿಂಡಿ ಮಾಡಿಕೊಟ್ಟಿಲ್ಲವೆಂದು ಪತಿ ತಗಾದೆ ತೆಗೆದಿದ್ದಾನೆ. ಈ ವಿಚಾರವಾಗಿ ಇವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ.
Advertisement
Advertisement
ಪರಿಣಾಮ ಗಂಡನ ಮನೆ ಬಿಟ್ಟು ತವರು ಮನೆಗೆ ತೆರಳಲು ಪತ್ನಿ ನಿರ್ಧರಿಸಿದ್ದರು. ಅಲ್ಲದೇ ತವರು ಮನೆಗೆ ಹೋಗಲೆಂದು ಬ್ಯಾಗ್ ಪ್ಯಾಕ್ ಮಾಡಿ ಹೊರಡಲು ಸಿದ್ಧರಾದ್ರು. ಈ ವೇಳೆ ಆಕೆಯನ್ನು ಮಕ್ಕಳು ಹಾಗೂ ಪತಿ ತಡೆದಿದ್ದಾರೆ. ಪತ್ನಿಯ ವರ್ತನೆಯಿಂದ ಸಿಟ್ಟುಗೊಂಡ ಪತಿ ಮುಕೇಶ್ ಆಕೆ ಧರಿಸಿದ್ದ ಸ್ಕಾರ್ಫ್ ಅನ್ನು ಕುತ್ತಿಗೆಗೆ ಬಿಗಿಯಾಗಿ ಸುತ್ತಿದ್ದಾನೆ. ಪರಿಣಾಮ ರೇಖಾ ಕುಸಿದುಬಿದ್ದಿದ್ದಾರೆ. ಇಬ್ಬರು ಪುಟ್ಟ ಮಕ್ಕಳ ಎದುರೇ ಪತ್ನಿಯನ್ನು ಪತಿ ಕೊಲೆಗೈದಿದ್ದಾನೆ. ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಘಟನೆಯಿಂದ ಭಯಭೀತರಾದ ಮಕ್ಕಳು ಜೋರಾಗಿ ಕಿರುಚಿಕೊಂಡಿದ್ದಾರೆ. ಹೀಗಾಗಿ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ನೆರೆಮನೆಯವರು ಮಹಿಳೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅದಾಗಲೇ ರೇಖಾ ಮೃತಪಟ್ಟಿದ್ದರು ಅಂತ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ
Advertisement
ಪ್ರಕರಣದ ಬಳಿಕ ತನಿಖೆಗೆ ಪೊಲೀಸರ ತಂಡವೊಂದು ಕುಲೆಸ್ರಾ ಗ್ರಾಮಕ್ಕೆ ತೆರಳಿ, ಮನೆಯಲ್ಲಿ ಆರೋಪಿಯನ್ನು ಹುಡುಕಾಡಿದ್ದಾರೆ. ಆದ್ರೆ ಮುಕೇಶ್ ತಲೆಮರೆಸಿಕೊಂಡಿದ್ದಾನೆ. ತನಿಖೆ ಮುಂದುವರಿಸಿದ ಪೊಲೀಸರು ಭಾನುವಾರ ಬೆಳಗ್ಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ ಯತ್ನ) ಪ್ರಕರಣ ದಾಖಲಿಸಲಾಗಿದೆ ಅಂತ ಪೊಲೀಸ್ ಅಧಿಕಾರಿ ತೋಮಸ್ ಹೇಳಿದ್ದಾರೆ.