ಲಕ್ನೋ: ಪ್ರಿಯಕರನ ಜೊತೆ ಸೇರಿಕೊಂಡು ಪತಿಯನ್ನೇ ಕೊಲೆ ಮಾಡಿದ್ದ ಮಹಿಳೆ, ಆತನ ಲವ್ವರ್ ಸೇರಿದಂತೆ ಇತರ ಇಬ್ಬರು ಆರೋಪಿಗಳನ್ನು ಉತ್ತರ ಪ್ರದೇಶದ ಶಾಮಲಿ ಪೊಲೀಸರು ಬಂಧಿಸಿದ್ದಾರೆ.
ಖೇಡಿ ಕೆಮ್ರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹರೀಶ್ ಅಲಿಯಾಸ್ ಸೋನು (31) ಮೃತ ವ್ಯಕ್ತಿ. ಈತನ ಪತ್ನಿ ಶಿವಾನಿ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹರೀಶ್ ಮೃತ ದೇಹವು ಮೇ 15 ರಂದು ಡ್ರೈನ್‍ನಲ್ಲಿ ಪತ್ತೆಯಾಗಿತ್ತು. ಮೃತ ಸೋನು ತಾಯಿ ನೀಡಿದ ದೂರಿನ ಮೇಲೆ ಪೊಲೀಸರು ತನಿಖೆ ಶುರುಮಾಡಿದ್ದರು. ಹರೀಶ್ ತಾಯಿ ನೀಡಿದ್ದ ದೂರಿನಲ್ಲಿ ಆತನ ಸಂಬಂಧಿಗಳಾದ ಶಿವಂ ಮತ್ತು ಮೋಹಿತ್ ಹೆಸರನ್ನು ಉಲ್ಲೇಖಿಸಿದ್ದರು. ಜೊತೆ ಹರೀಶ್ ಪತ್ನಿ ಶಿವಾನಿಯ ಹೆಸರು ಕೂಡ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಶಿವಾನಿ ಶಿಬ್ಬು ಎಂಬಾತನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಪತ್ನಿಯ ಅಕ್ರಮ ಸಂಬಂಧದ ವಿಚಾರ ಪತಿ ಹರೀಶ್‍ಗೆ ಗೊತ್ತಾಗಿದೆ. ಆಗ ಹರೀಶ್ ಮತ್ತು ಶಿಬ್ಬು ನಡುವೆ ಜಗಳ ಕೂಡ ನಡೆದಿದ್ದು, ಅವರಿಬ್ಬರ ಸಂಬಂಧಕ್ಕೆ ಹರೀಶ್ ವಿರೋಧ ವ್ಯಕ್ತಪಡಿಸಿದ್ದಾನೆ. ಇದರಿಂದ ತಮ್ಮಿಬ್ಬರ ಪ್ರೀತಿಗೆ ಪತಿ ಅಡ್ಡ ಬರುತ್ತಾನೆಂದು ಪ್ರಿಯಕರ ಜೊತೆ ಸೇರಿಕೊಂಡು ಕೊಲೆ ಮಾಡಲು ಪ್ಲಾನ್ ಮಾಡಿದ್ದಳು ಎಂದು ಪೊಲೀಸ್ ಅಧಿಕಾರಿ ಸುಭಾಷ್ ರಾಥೋಡ್ ಹೇಳಿದ್ದಾರೆ.
ಅದರಂತೆಯೇ ಶಿಬ್ಬು ತನ್ನ ಸ್ನೇಹಿತರಾದ ಹಿಮಾಂಶು ಮತ್ತು ಲಕ್ಮೀರ ಸಹಾಯ ಪಡೆದುಕೊಂಡು ಹರೀಶ್‍ನನ್ನು ಕೊಲೆ ಮಾಡಿದ್ದಾರೆ. ಸದ್ಯಕ್ಕೆ ವಿಚಾರಣೆ ವೇಳೆ ಆರೋಪಿ ಶಿವಾನಿ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.