-ಮನನೊಂದ ದಂಪತಿ ನೇಣಿಗೆ ಶರಣು
-ಪ್ರಿಯಕರನ ಟ್ರ್ಯಾಕ್ಟರ್, ಕಾರ್‌ಗೆಬೆಂಕಿ ಹಾಕಿದ ಗ್ರಾಮಸ್ಥರು
ರಾಮನಗರ: ಗ್ರಾಮ ಯುವಕನೊಂದಿಗೆ ಪತ್ನಿ ಇರುವ ಫೋಟೋಗಳು ಬಹಿರಂಗವಾದ ಹಿನ್ನೆಲೆಯಲ್ಲಿ ಪತಿ, ಪತ್ನಿ ಇಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸಾದರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಲೋಕೇಶ್ ಹಾಗೂ ಕೌಸಲ್ಯ ನೇಣಿಗೆ ಶರಣಾದ ದಂಪತಿಗಳಾಗಿದ್ದು, ಇದೇ ಗ್ರಾಮದ ತ್ಯಾಗರಾಜ್‍ರೊಂದಿಗೆ ಕೌಸಲ್ಯ ಅವರು ಇರುವ ಫೋಟೋಗಳು ಗ್ರಾಮದಲ್ಲಿ ವೈರಲ್ ಆಗಿತ್ತು. ಪರಿಣಾಮ ಗ್ರಾಮದಲ್ಲಿ ಇಬ್ಬರ ಬಗ್ಗೆ ಚರ್ಚೆಯಾಗಿತ್ತು. ಇದರಿಂದ ಮನನೊಂದ ದಂಪತಿ ಮರ್ಯಾದೆಗೆ ಅಂಜಿ ನೇಣಿಗೆ ಶರಣಾಗಿದ್ದಾರೆ.
ಏನಿದು ಪ್ರಕರಣ:
ಸೋಮವಾರದಂದು ಕೌಸಲ್ಯ, ತ್ಯಾಗರಾಜ್‍ನೊಂದಿಗೆ ಮನೆಬಿಟ್ಟು ತೆರಳಿದ್ದಳು, ಇಬ್ಬರ ನಡುವೆ ಅನೈತಿಕ ಸಂಬಂಧ ಇತ್ತು ಎಂಬ ಮಾಹಿತಿ ಲಭಿಸಿದೆ. ಆದರೆ ಇಂದು ಕೌಸಲ್ಯ ಮತ್ತೆ ಮನೆಗೆ ಹಿಂದಿರುಗಿದ್ದರು. ಈ ವೇಳೆ ಕೌಸಲ್ಯ ತನ್ನೊಂದಿಗೆ ಇರುವ ಫೋಟೋಗಳನ್ನು ತ್ಯಾಗರಾಜ ಆಕೆಯ ಪತಿಗೆ ಕಳುಹಿಸಿದ್ದ. ಫೋಟೋದಲ್ಲಿ ತ್ಯಾಗರಾಜ, ಕೌಸಲ್ಯಗೆ ಮುತ್ತು ಕೊಡುತ್ತಿರುವ ದೃಶ್ಯ ಇದ್ದು, ಇದರಿಂದ ಪತಿ ಲೋಕೇಶ್ ಫೋಟೋ ನೋಡಿ ಸಾಕಷ್ಟು ನೊಂದಿದ್ದ. ಅಲ್ಲದೇ ಈ ಫೋಟೋ ವಿಚಾರವಾಗಿಯೇ ದಂಪತಿ ನಡುವೆ ಜಗಳ ಕೂಡ ನಡೆದಿತ್ತು.
ಜಗಳ ಬಳಿಕ ದಂಪತಿ ಒಂದೇ ಹಗ್ಗಕ್ಕೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಇತ್ತ ದಂಪತಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳುತ್ತಿದಂತೆ ಗ್ರಾಮಸ್ಥರು ಘಟನೆಗೆ ತ್ಯಾಗರಾಜನೇ ಕಾರಣ ಎಂದು ಆತನ ಮನೆಯ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದ್ದಾರೆ. ಅಲ್ಲದೇ ತ್ಯಾಗರಾಜಗೆ ಸೇರಿದ್ದ ಒಂದು ಟ್ರ್ಯಾಕ್ಟರ್, ಎರಡು ಕಾರು ಹಾಗೂ ಮನೆಗೆ ಬೆಂಕಿ ಇಟ್ಟಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದ ಅಕ್ಕೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದ್ದು, ತ್ಯಾಗರಾಜ್ ಕುಟುಂಬಸ್ಥರು ಗ್ರಾಮ ತೊರೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ.