ಚಿಕ್ಕಮಗಳೂರು: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಪ್ರೀತಿಸಿ (Love) ಮದುವೆಯಾದ ಪತಿಯನ್ನೇ ಕೊಲೆ ಮಾಡಿರುವ ಘಟನೆ ಎನ್‌ಆರ್ ಪುರ (NR Pura) ತಾಲೂಕಿನ ಕರಗುಂದ ಬಳಿ ನಡೆದಿದೆ.
ಎನ್ಆರ್‌ಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಿಸಿರುವುದು ತನಿಖೆಯಿಂದ ಬಯಲಾಗಿದೆ. ಹತ್ಯೆಯಾದ ವ್ಯಕ್ತಿಯನ್ನು ಎನ್‌ಆರ್‌ಪುರ ಪಟ್ಟಣದ ಸುದರ್ಶನ್ ಎಂದು ಗುರುತಿಸಲಾಗಿದೆ. ಸುದರ್ಶನ್ ಪತ್ನಿ ಕಮಲ, ಆಕೆಯ ಪ್ರಿಯಕರ ಎಸ್.ಶಿವರಾಜ್ ಹಾಗೂ ಆತನ ಇನ್ನಿಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮಗಳಿಗೆ ಆಸ್ತಿ ಕೊಡಲೇಬೇಡಿ, ಸಾಯುವ ಹಿಂದಿನ ದಿನ ಸ್ನೇಹಿತರಿಗೆ GPay- ಕಿರಿಮಗಳ ಕೈಯಲ್ಲಿ ಡೆತ್‍ನೋಟ್ ಬರೆಸಿದ್ದ ತಂದೆ
ಕಡುಹಿನಬೈಲು ಗ್ರಾಮದ ಕರುಗುಂದ ಬಸ್ ನಿಲ್ದಾಣದ ಸಮೀಪ ಸುದರ್ಶನ್ ಶವ ಶನಿವಾರ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆತನ ಪತ್ನಿ ಕಮಲ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, 2 ತನಿಖಾ ತಂಡ ರಚಿಸಿದ್ದರು. ತನಿಖೆ ವೇಳೆ, ಕಮಲ ಕೊಲೆ ಮಾಡಿಸಿರುವುದು ಬೆಳಕಿಗೆ ಬಂದಿದೆ.
ಕಮಲ ಹತ್ತು ವರ್ಷಗಳ ಹಿಂದೆ ಸುದರ್ಶನ್ ಜೊತೆ ಮದುವೆಯಾಗಿದ್ದಳು. ಸಂಸಾರದಲ್ಲಿ ಹೊಂದಾಣಿಕೆಯಾಗದ ಕಾರಣ ಕಮಲ ಶಿವರಾಜ್ ಜೊತೆ ಸಂಬಂಧ ಹೊಂದಿದ್ದಳು. ಇದಕ್ಕೆ ಪತಿ ಸುದರ್ಶನ್ ಅಡ್ಡಿಯಾಗುತ್ತಾನೆಂದು, ಶಿವರಾಜ್ ಜೊತೆ ಸೇರಿ ಸಂಚು ರೂಪಿಸಿ ಕೊಲೆ ಮಾಡಿಸಿದ್ದಳು. ಅಲ್ಲದೇ ಹತ್ಯೆಗೂ ಮುನ್ನ ಮದ್ಯದಲ್ಲಿ ನಿದ್ರೆ ಮಾತ್ರೆಯನ್ನು ಸೇರಿಸಿ ಕುಡಿಸಿ ಪ್ರಜ್ಞೆ ತಪ್ಪುವಂತೆ ಮಾಡಿದ್ದರು. ಬಳಿಕ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಆರೋಪಿಗಳನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಬಂಧಿತರಿಂದ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಕುಡಿದ ಮತ್ತಲ್ಲಿ ಒನ್‌ವೇಗೆ ನುಗ್ಗಿದ ಕಾರಿನ ಚಾಲಕ – ಬ್ಯಾರಿಕೇಡ್‌ಗೆ ಗುದ್ದಿ ಪೊಲೀಸರಿಗೆ ಗಾಯ